ಬೆಂಗಳೂರು: ನಾನು ಯಾವುದೇ ಕಾರಣಕ್ಕೂ ಡಬ್ಬಿಂಗ್‌ಗೆ ಕೈ ಹಾಕುವುದಿಲ್ಲ. ನಾನು ಯಾವತ್ತೂ ಡಬ್ಬಿಂಗ್ ವಿರೋಧಿ. ಯಾವುದೇ ಚಿತ್ರ ಡಬ್ಬಿಂಗ್ ಮಾಡಲು ನಾನು ಹಕ್ಕು ಪಡೆದಿಲ್ಲ. ಇಂತಹ ಒಂದು ಸುದ್ದಿ ಏಕೆ ಪ್ರಕಟವಾಗಿದೆಯೋ ಗೊತ್ತಿಲ್ಲ. ನಾನಂತೂ ಡಾ.ರಾಜ್‌ಕುಮಾರ್ ಅವರ ಕಾಲದಿಂದಲೂ ಡಬ್ಬಿಂಗ್ ವಿರೋಧಿಸುತ್ತ ಬಂದಿದ್ದೇನೆ ಎಂದು ಕನ್ನಡ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ನಟ ಎಸ್.ನಾರಾಯಣ್ ಸ್ಪಷ್ಟಪಡಿಸಿದ್ದಾರೆ.
ತೆಲುಗು ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವ ವಿಜಯ್ ಮತ್ತು ಕನ್ನಡದ ಸುದೀಪ್ ನಟಿಸಿರುವ ಚಿತ್ರವನ್ನು ಕರ್ನಾಟಕದಾದ್ಯಂತ ವಿತರಣೆಗೆ ಹಕ್ಕು ಪಡೆದಿದ್ದೇನೆ. ಈ ರೀತಿ ವಿತರಣಾ ಹಕ್ಕು ಪಡೆಯುವ ಮೂಲಕ ಈ ಚಿತ್ರ ಕನ್ನಡಕ್ಕೆ ಡಬ್ ಆಗುವುದನ್ನು ತಡೆದಿದ್ದೇನೆ ಎಂಬ ಖುಷಿ ನನಗಿದೆ ಎಂದು ಅವರು ಈ ಸಂಜೆ ಜತೆ ಮಾತನಾಡುತ್ತ ತಿಳಿಸಿದರು.ಕನ್ನಡ ಎಂದರೆ ನಮಗೆ ಭಾವನಾತ್ಮಕವಾದ ಸಂಬಂಧವಿದೆ. ಹಲವು ವರ್ಷಗಳಿಂದ ಕನ್ನಡ, ಕನ್ನಡದ ಸಾಹಿತಿಗಳು, ಬುದ್ಧಿಜೀವಿಗಳ ಜತೆ ಒಡನಾಟ ಇಟ್ಟುಕೊಂಡಿದ್ದೇನೆ.
ಹಿಂದೆ ರಾಜ್‌ಕುಮಾರ್, ಅ.ನ.ಕೃ.ವಾಟಾಳ್ ನಾಗರಾಜ್ ಅವರು ಡಬ್ಬಿಂಗ್ ವಿರುದ್ಧ ದನಿ ಎತ್ತಿದಾಗಿನಿಂದಲೂ ನಾನು ಅವರನ್ನೇ ಬೆಂಬಲಿಸುತ್ತ ಬಂದಿದ್ದೇನೆ. ನಾನು ಮತ್ತು ಡಾ.ರಾಜ್ ನಡುವಿನ ಸಂಬಂಧ ಬಹಳ ಹಳೆಯದು. ಆದರೆ, ಮಾಧ್ಯಮಗಳಲ್ಲಿ ನಾನು ಹುಲಿ ಚಿತ್ರ ಕನ್ನಡ ಡಬ್ಬಿಂಗ್‌ಗೆ ಅನುಮತಿ ಪಡೆದಿದ್ದೇನೆ ಎಂಬಂತಹ ಸುದ್ದಿ ಪ್ರಕಟವಾಗಿರುವುದು ಬೇಸರ ತಂದಿದೆ ಎಂದರು.ಒಟ್ಟಾರೆ ಕನ್ನಡದಲ್ಲೀಗ ಡಬ್ಬಿಂಗ್ ವಿಷಯ ಪ್ರಮುಖವಾಗಿ ಕೇಳಿಬರುತ್ತಿದೆ. ಅದನ್ನು ಬೆಂಬಲಿಸುವವರು ಕೂಡ ಹಲವರಿದ್ದಾರೆ. ಇದೀಗ ಈ ವಿಷಯ ಬೂದಿ ಮುಚ್ಚಿದ ಕೆಂಡದಂತಿದೆ. ಇದನ್ನು ಸರಿಪಡಿಸಬೇಕು. ಎಲ್ಲರೂ ಸೇರಿ ಚರ್ಚಿಸಿ ಇದಕ್ಕೊಂದು ತಾರ್ಕಿಕ ಅಂತ್ಯ ಕೊಡಬೇಕು ಎಂದು ಅವರು ಸಲಹೆ ಮಾಡಿದರು.ನಾಯಕತ್ವದ ಕೊರತೆ: ಕನ್ನಡ ಚಿತ್ರರಂಗ ಇಂದು ತೀವ್ರವಾದ ನಾಯಕತ್ವದ ಕೊರತೆ ಅನುಭವಿಸುತ್ತಿದೆ. ಇಲ್ಲಿ ಒಬ್ಬ ದಕ್ಷ ನಾಯಕನಿಲ್ಲ. ಉತ್ತಮ ನಾಯಕತ್ವವಿದ್ದು, ಈ ವಿಷಯ ಎಲ್ಲರೊಂದಿಗೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬರುವ ಅಗತ್ಯವಿದೆ ಎಂದು ಅವರು ಹೇಳಿದರು.