ಬೆಂಗಳೂರು: ಮುಂಗಡ ಹಣ ಪಡೆದು ನಿಗದಿತ ಸಮಯದೊಳಗೆ ಹಿಂದಿರುಗಿಸದ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಪಕ ಕಂ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರ ಚರಾಸ್ತಿಯನ್ನು ಜಫ್ತಿ ಮಾಡಿಕೊಳ್ಳಲು ಸಿಟಿ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ. ನವಶಕ್ತಿ ಎಂಟರ್‌ಪ್ರೈಸಸ್ ಮಾಲೀಕ ಸಿ.ನಾಗರಾಜ್ ಅವರಿಗೆ ರಾಜೇಂದ್ರಸಿಂಗ್ ಬಾಬು 7,20,053 ಹಣವನ್ನು ನೀಡಬೇಕಾಗಿತ್ತು. ಆದರೆ, ಹಣ ನೀಡದೆ ತಲೆ ಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರಿಗೆ ಸೇರಿದ ಚರಾಸ್ತಿಯನ್ನು ಜಫ್ತಿ ಮಾಡುವಂತೆ ಸೂಚನೆ ಕೊಟ್ಟಿದೆ.
ಸಂಜಯ್‌ನಗರದಲ್ಲಿರುವ ರಾಜೇಂದ್ರಸಿಂಗ್‌ಬಾಬುಗೆ ಸೇರಿದ ಚರಾಸ್ತಿಯನ್ನು ನಾಗರಾಜ್ ನ್ಯಾಯಾಲಯದ ಆದೇಶದಂತೆ ಜಫ್ತಿ ಮಾಡಿಕೊಳ್ಳಲು ಮುಂದಾಗಿದ್ದಾರೆ. 2012ರಲ್ಲಿ ಮೋಹಿನಿ ಎಂಬ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಾಬು ನಾಗರಾಜ್ ಅವರಿಂದ ಮುಂಗಡವಾಗಿ 7,20,053 ಹಣವನ್ನು ಪಡೆದಿದ್ದರು. ಕೆಲ ಕಾರಣಗಳಿಂದ ಚಿತ್ರ ನಿರ್ಮಾಣ ಸಾಧ್ಯವಾಗಿರಲಿಲ್ಲ.
ತಾವು ನೀಡಿರುವ ಹಣವನ್ನು ಹಿಂದಿರುಗಿಸಬೇಕೆಂದು ನಾಗರಾಜ್, ಬಾಬುಗೆ ಪದೇ ಪದೇ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಅವರ ವಿರುದ್ಧ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಾದ-ವಿವಾದ ಆಲಿಸಿದ ನ್ಯಾಯಾಲಯ ಕಳೆದ 14ರಂದೇ ರಾಜೇಂದ್ರಸಿಂಗ್‌ಬಾಬುಗೆ ಸೇರಿದ ಚರಾಸ್ತಿಯನ್ನು ಜಫ್ತಿ ಮಾಡಬೇಕೆಂದು ಸೂಚನೆ ಕೊಟ್ಟಿದೆ.