ನವದೆಹಲಿ: ಜಗತ್ತಿನ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ವೋಕ್ಸ್ ವ್ಯಾಗನ್ ಗ್ರೂಪ್ ನ ಅಧೀನದಲ್ಲಿರುವ ವೋಕ್ಸ್‌ವ್ಯಾಗನ್ ಬ್ರಾಂಡ್ ನ ಕಾರುಗಳು ಅತಿ ದೊಡ್ಡ ಮಾಲಿನ್ಯ ಮೋಸ ಮಾಡಿರುವುದು ಬಯಲಿಗೆ ಬಂದಿದೆ.
ಈ ಪ್ರಕರಣ ಮೊದಲು ಬೆಳಕಿಗೆ ಬಂದಿದ್ದು ಅಮೆರಿಕದಲ್ಲಿ. ಸಾಮಾನ್ಯವಾಗಿ ಜಗತ್ತಿನ ಎಲ್ಲ ದೇಶಗಳು ತಮ್ಮದೇ ಆದ ಮಾಲಿನ್ಯ ಪ್ರಮಾಣ ಮಿತಿಯನ್ನು ಆಳವಡಿಸಿಕೊಂಡಿರುತ್ತವೆ. ಪ್ರತಿಯೊಂದು ವಾಹನ ತಯಾರಿಕಾ ಸಂಸ್ಥೆಗಳು ಈ ಮಾನದಂಡವನ್ನು ಕಟ್ಟುನಿಟ್ಟಾಗಿ ಪಾಲಿಸಲೇ ಬೇಕಾಗಿದೆ. ಆದರೆ ಈ ಮಾನದಂಡವನ್ನು ಮೀರಿದ ವೋಕ್ಸ್ ವ್ಯಾಗನ್ ಸಂಸ್ಥೆ ಅಮೆರಿಕ ಮಾಲಿನ್ಯ ತಪಾಸಣೆಯ ಮಾನದಂಡ (ಎಮಿಷನ್ ಟೆಸ್ಟ್) ಮರೆಮಾಚಲು ವಿಶೇಷ ರೀತಿಯ ಸಾಫ್ಟ್‌ವೇರ್ ವೊಂದನ್ನು ಅಭಿವೃದ್ಧಿ ಪಡಿಸಿ ಬಳಕೆ ಮಾಡಿತ್ತು. ಇದರಿಂದ ಇಂಧನ ವಿಸರ್ಜನೆ ಪರೀಕ್ಷೆಯಲ್ಲಿ ಕಾರುಗಳು ತೇರ್ಗಡೆ ಹೊಂದುತ್ತಿದ್ದವು. ನೈಜ ಪರಿಸ್ಥಿತಿಯಲ್ಲಿ ಪ್ರಾಯೋಗಾಲಯದಲ್ಲಿ ಕೊಡುವ ಇಂಧನ ಕ್ಷಮತೆಗೂ, ರಸ್ತೆಯ ಮೇಲೆ ಬಂದಾಗ ತೋರಿಸುವ ಕ್ಷಮತೆಗೂ ಭಾರಿ ವ್ಯತ್ಯಾಸಗಳು ಕಂಡುಬಂದಿತ್ತು.
ಈ ವಿಚಾರವನ್ನು ಅರಿತ ಅಮೆರಿಕನ್ ಸಂಶೋಧಕರು ವೋಕ್ಸ್ ವ್ಯಾಗನ್ ಸಂಸ್ಥೆಯ ಮಹಾ ಮೋಸವನ್ನು ಬಯಲಿಗೆಳೆಯುವಲ್ಲಿ ಅಂತಿಮವಾಗಿ ಯಶಸ್ವಿಯಾದರು. ವಿಶೇಷವೆಂದರೆ ಭಾರತೀಯ ಮೂಲದ ಸಂಶೋಧಕ ಅರವಿಂದ ತಿರುವೆಂಗಡಮ್ (32) ಕೂಡ ಈ ಸಂಶೋಧಕ ತಂಡದಲ್ಲಿದ್ದರು. ಕಳೆದ 78 ವರ್ಷಗಳ ಆಟೋ ಕ್ಷೇತ್ರದ ಇತಿಹಾಸದಲ್ಲೇ ಇದು ಅತಿ ದೊಡ್ಡ ಮೋಸದ ಪ್ರಕರಣ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಮಹಾ ಮೋಸ ಬಯಲಿಗೆ ಬಂದ ಬಳಿಕ ಜಾಗತಿಕ ಮಟ್ಟದಲ್ಲಿ ತೀವ್ರ ಮುಜುಗರಕ್ಕೀಡಾಗಿರುವ ವೋಕ್ಸ್ ವ್ಯಾಗನ್ ಸಂಸ್ಥೆಯ ಷೇರುಗಳು ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಅಲ್ಲದೆ ಸಂಸ್ಥೆ 1.17 ಲಕ್ಷ ಕೋಟಿ ದಂಡ ಕಟ್ಟಬೇಕಾದ ಭೀತಿ ಎದುರಿಸುತ್ತಿದ್ದು, ಮಾರುಕಟ್ಟೆಯಿಂದ ಕಾರುಗಳು ಹಿಂಪಡೆದು ದೋಷ ಸರಿಪಡಿಸಬೇಕಾಗಿದೆ.
ತಪ್ಪೊಪ್ಪಿಕೊಂಡ ವೋಕ್ಸ್ ವ್ಯಾಗನ್
ಪ್ರಕರಣ ಬೆಳಕಿಗೆ ಬಂದು ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾಗಿರುವ ವೋಕ್ಸ್ ವ್ಯಾಗನ್ ಸಂಸ್ಥೆ ಅಂತಿಮವಾಗಿ ತನ್ನ ತಪ್ಪೊಪ್ಪಿಕೊಂಡಿದ್ದು, ತನ್ನ ನಷ್ಟವನ್ನು ಸರಿದೂಗಿಸಲು 46,200 ಕೋಟಿ ರುಪಾಯಿಗಳನ್ನು ಮೀಸಲಿಟ್ಟಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಮಹತ್ತರ ಬೆಳವಣಿಗೆಯಲ್ಲಿ ವೋಕ್ಸ್‌ವ್ಯಾಗನ್ ಸಿಇಒ ಮಾರ್ಟಿನ್ ವಿಂಟರ್‌ಕಾರ್ನ್ ತಮ್ಮ ಸಿಇಒ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು, ಜಾಗತಿಕ ಮಟ್ಟದಲ್ಲಿ ಸಂಸ್ಥೆಯ ಘನತೆ ಹಾಳಾಗಿದೆ.
ಇನ್ನು ವೋಕ್ಸ್ ವ್ಯಾಗನ್ ಸಂಸ್ಥೆಯ ಅಧೀನದಲ್ಲಿರುವ ಆಡಿ, ಬೆಂಟ್ಲಿ, ಬುಗಾಟಿ, ಲ್ಯಾಂಬೋರ್ಗಿನಿ, ಪಾರ್ಷ್, ಸಿಯೆಟ್, ಸ್ಕೋಡಾ ಮುಂತಾದ ಬ್ರ್ಯಾಂಡ್ ನ ಕಾರುಗಳಲ್ಲೂ ಮೋಸ ನಡೆದಿರಬಹುದೇ ಎಂಬ ಶಂಕೆ ವ್ಯಕ್ತವಾಗುತ್ತಿದ್ದು, ಈ ಪೈಕಿ ಆಡಿ ಎ3 ಕಾರಿನಲ್ಲಿ ಇದಕ್ಕೆ ಸಮಾನವಾದ ಪ್ರಕರಣ ಬಯಲಾಗಿದೆ ಎಂದು ಹೇಳಲಾಗುತ್ತಿದೆ. ಅಮೆರಿಕ ಪರಿಸರ ಸಂರಕ್ಷಣಾ ಏಜೆನ್ಸಿ (ಇಪಿಎ) ನೀಡಿರುವ ಮಾಹಿತಿಗಳ ಪ್ರಕಾರ ಜನಪ್ರಿಯ ಪಸ್ಸಾಟ್, ಜೆಟ್ಟಾ, ಬೀಟೆಲ್, ಗಾಲ್ಫ್ ಹಾಗೂ ಆಡಿ ಎ3 ಸೇರಿದಂತೆ ಸರಿ ಸುಮಾರು 1.10 ಕೋಟಿ ಡೀಸೆಲ್ ಕಾರುಗಳಲ್ಲಿ ಮಾಲಿನ್ಯ ಮೋಸ ನಡೆದಿದೆ ಎಂದು ತಿಳಿದುಬಂದಿದೆ.