ಸಿನಿಮಾವನ್ನೇ ಜೀವನವನ್ನಾಗಿಸಿಕೊಂಡವರು ‘ಕ್ರೇಜಿ ಸ್ಟಾರ್’. ನಿಂತರೂ ಕುಂತರೂ ಬಣ್ಣದ ಬಗ್ಗೆ ಯೋಚಿಸುವ, ಯೋಜನೆ ರೂಪಿಸುತ್ತಲೇ ಇರುವ ‘ಕನಸುಗಾರ’ ರವಿಚಂದ್ರನ್. ನಟನೆ, ಕಥೆ, ಚಿತ್ರಕಥೆ, ನಿರ್ದೇಶನ, ಸಂಗೀತ ಸಂಯೋಜನೆ, ಸಾಹಿತ್ಯ ಅಂತೆಲ್ಲ ಸದಾ ಬಿಜಿಯಾಗಿರುವ ‘ಮಲ್ಲ’. 33 ವರ್ಷಗಳ ಕಾಲ ನಾಯಕನಾಗಿಯೇ ಮೆರೆದ ‘ಏಕಾಂಗಿ’. ವಿ. ರವಿಚಂದ್ರನ್ ಚಲನಚಿತ್ರದಾಚೆ ಇಣುಕಿದ್ದು ಇಲ್ಲವೇ ಇಲ್ಲ. ಅದೂ, ತೀರಾ ಈಚೆಗೆ ಪೋಷಕ ಪಾತ್ರಧಾರಿಯಾಗಿ ಬಣ್ಣಹಚ್ಚಿದ್ದು! ‘ಮಾಣಿಕ್ಯ’ ಚಿತ್ರದಲ್ಲಿ ಸುದೀಪ್ಗೆ ಅಪ್ಪನಾಗಿ ಕಾಣಿಸಿಕೊಂಡಿದ್ದೇ ಬಂತು ನೋಡಿ, ಅದೃಷ್ಟ. ಅಲ್ಲಲ್ಲ, ಅವಕಾಶ. ಪವರ್ಫುಲ್, ಖದರ್ಫುಲ್, ಗ್ರ್ಯಾಂಡ್ಫುಲ್ ಆಂಡ್ ಬ್ಯೂಟಿಫುಲ್ ‘ಫಾದರ್ ರೋಲ್’ ರವಿಚಂದ್ರನ್ ಅವರನ್ನೇ ಹುಡುಕಿ ಬರೋಕೆ ಶುರುಹಚ್ಚಿವೆ. ‘ಲವ್ ಯು ಆಲಿಯ’, ‘ಲಕ್ಷ್ಮಣ’ ಮತ್ತು ‘ಮುಂಗಾರು ಮಳೆ 2’ ಚಿತ್ರಗಳೇ ಇದಕ್ಕೆ ಸಾಕ್ಷಿ. ಇದರೊಟ್ಟಿಗೆ ಕಿರುತೆರೆಯಲ್ಲಿ ‘ಡಾನ್ಸಿಂಗ್ ಸ್ಟಾರ್’ ಜಡ್ಜ್, ಎಫ್ಎಂ ಚಾನೆಲ್ನಲ್ಲಿ ‘ಸ್ಟ್ರೇಟ್ ಹಿಟ್’…
ಹೀಗೆ ಎಲ್ಲೆಡೆ ಸಲ್ಲುವ ‘ಅಣ್ಣಯ್ಯ’ನಾದರು ರವಿ. ಇದೀಗ, ಜಾಹೀರಾತು ಲೋಕಕ್ಕೂ ಕಾಲಿಟ್ಟು ‘ಚಿನ್ನ’ದ ಮನುಷ್ಯ ಎನಿಸಿಕೊಳ್ಳತೊಡಗಿದ್ದಾರೆ!
ಜಾಹೀರಾತಿನಲ್ಲಿ ನಟಿಸುವ ಆಫರ್ ಬಹಳ ಹಿಂದೆಯೇ ಬಂದಿತ್ತಾದರೂ, ರವಿಚಂದ್ರನ್ ಆಗ ನಿರಾಕರಿಸಿಬಿಟ್ಟಿದ್ದರಂತೆ. ಈಗ ಮೈಸೂರು ಮೂಲದ ‘ಗೋಲ್ಡನ್ ಪ್ರಾಪರ್ಟಿ ಕ್ಯಾಸಲ್’ ಎಂಬ ರಿಯಲ್ ಎಸ್ಟೇಟ್ ಏಜೆನ್ಸಿಯೊಂದಕ್ಕೆ ಪ್ರಚಾರ ರಾಯಭಾರಿಯಾವ ಮೂಲಕ ಪ್ರಪ್ರಥಮ ಬಾರಿಗೆ ಜಾಹೀರಾತು ಲೋಕವನ್ನು ಪ್ರವೇಶಿಸಿದ್ದಾರೆ. ನಂಬಿಕೆ ಮತ್ತು ಕನಸು ಎಂಬ ತತ್ವದ ಜಾಹೀರಾತಿನಲ್ಲಿ ‘ಮೈಸೂರಿನಲ್ಲಿ ಸೈಟ್ ತೆಗೆದುಕೊಳ್ಳಬೇಕಿದ್ದರೆ ಬನ್ನಿ ಈ ಕನಸುಗಾರನ ಜೊತೆ’ ಎಂದು ಕರೆಯುವ ಜಾಹೀರಾತನ್ನು ಅವರೇ ಸಿದ್ಧಗೊಳಿಸಿರುವುದು ವಿಶೇಷ. ಅಲ್ಲದೇ, ವಿಲ್ಲಾಗಳ ವಿನ್ಯಾಸಕರು ಇವರೇ! ‘ನಮ್ಮ ನಂಬಿಕೆ, ನಿಮ್ಮ ಕನಸು ಎರಡರ ಮಿಶ್ರಣದಿಂದ ನಿವೇಶನ ಖರೀದಿಸಿ, ಮನೆ ಮಾಡಿಕೊಳ್ಳಿ’ ಎಂದು ಹೇಳುವುದರ ಜೊತೆಜೊತೆಗೆ ‘ನಿಮ್ಮ ಮನೆಯಲ್ಲಿರುವ ಚಿನ್ನವನ್ನು ಮಾರಬೇಡಿ.ಕಾಪಾಡಿಕೊಳ್ಳಿ.
ಹಾಗೊಮ್ಮೆ ಮಾರಾಟ ಮಾಡಲೇಬೇಕಿದ್ದರೆ…’ ಅಂತ ‘ಚಿನ್ನ’ದಂತಹ ಸಂದೇಶವೊಂದನ್ನು ಜಾಹೀರಾತು ಮೂಲಕವೇ ರವಾನಿಸುವ ಕೆಲಸಕ್ಕೂ ರವಿಚಂದ್ರನ್ ಮುಂದಾಗಿದ್ದಾರೆ. ಅಂದರೆ, ‘ರತ್ನ’ ಎಂಬ ಅಂತರ್ಜಾಲ ಆಭರಣ ಖರೀದಿ ಸಂಸ್ಥೆಯೊಂದಕ್ಕೆ ‘ಕ್ರೇಜಿ ಸ್ಟಾರ್’ ರಾಯಭಾರಿ. ‘..ಅಂಬಾಸೆಡರ್’ ಅಂದಾಗ ಅವರಿಗೆ ಅವರ ತಂದೆ ವೀರಸ್ವಾಮಿ ನೀಲಿ ಬಣ್ಣದ ಅಂಬಾಸೆಡರ್ ಕಾರು ನೆನಪಾಗುತ್ತದಂತೆ. ‘ನಾನು ಡ್ರೖೆವಿಂಗ್ ಕಲಿತಿದ್ದು, ಬೆಂಗಳೂರು ರೌಂಡ್ ಹೊಡೆದಿದ್ದು ಅದೇ ಕಾರಿನಲ್ಲಿ’ ಎಂದು ಯೌವನಕ್ಕೆ ಜಾರುತ್ತಾರೆ ರವಿಚಂದ್ರನ್.
ಇನ್ನು, ಆರ್. ಚಂದ್ರು ನಿರ್ದೇಶನದ ‘ಲಕ್ಷ್ಮಣ’ ಮತ್ತು ಶಶಾಂಕ್ ನಿರ್ದೇಶನದ ‘ಮುಂಗಾರು ಮಳೆ 2’ ಚಿತ್ರಗಳಲ್ಲಿ ಕ್ರಮವಾಗಿ ಅನೂಪ್ ರೇವಣ್ಣ ಹಾಗೂ ಗಣೇಶ್ಗೆ ತಂದೆಯಾಗಿ ರವಿಚಂದ್ರನ್ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ, ಇಂದ್ರಜಿತ್ ಲಂಕೇಶ್ ಅವರ ‘ಲವ್ ಯು ಆಲಿಯ’ದಲ್ಲಿ ನಾಯಕಿಯ ಅಪ್ಪನಾಗಿ ಮಿಂಚಿದ್ದರು. ಇದು ರಿಲೀಸ್ ಆಗಿದ್ದರೆ, ಅವೆರಡು ಚಿತ್ರಗಳ ಶೂಟಿಂಗ್ ಪ್ರಗತಿಯಲ್ಲಿದೆ. ಸದ್ಯ ಒಂದೊಂದು ಷೆಡ್ಯೂಲ್ ಮುಗಿಸಿರುವ ಈ ‘ಲಕ್ಷ್ಮಣ’ ಮತ್ತು ‘…ಮಳೆ’ ಕಥೆ ಮತ್ತು ಇನ್ನಿತರೆ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಹೋಗುತ್ತಿಲ್ಲವಂತೆ ರವಿ. ‘ಹೋಗೋದು. ಸೀನ್ ಕೇಳೋದು, ನಟಿಸೋದು, ಬರೋದು.. ಅಷ್ಟೇ’ ಎನ್ನುತ್ತಾರವರು. ‘ಹಾಗೆಲ್ಲ ಕಾಂಪ್ರಮೈಸ್ ಮಾಡಿಕೊಳ್ಳುವ ನೇಚರ್ ಅಲ್ಲವಲ್ಲ ನಿಮ್ಮದು’ ಅಂತ ಕೇಳಿದರೆ, ‘ಈ ವರ್ಷ ಶುರುವಾಗಿದ್ದೇ ನನಗೆ ದುಡ್ಡಿನಿಂದ. ಕೇಳಿದಷ್ಟು ಸಂಭಾವನೆ ಕೊಡುತ್ತಾರೆ. ಅದಕ್ಕೆ ಅಲ್ಲವೇ, ನಾನು ನಟಿಸೋಕೆ ಒಪ್ಪಿಕೊಳ್ಳೋದು?!’ ಎಂದು ನಗುತ್ತಾರವರು. ಹಾಗೆ ನೋಡಿದರೆ, ಹೀರೋ ಆಗಿ ನಟಿಸಿದ ಚಿತ್ರಗಳಿಗಿಂತ ಸಫೋರ್ಟಿಂಗ್ ಕ್ಯಾರೆಕ್ಟರ್ನಲ್ಲೇ ರವಿ ಅವರಿಗೆ ಹೆಚ್ಚು ಖುಷಿಯಂತೆ. ‘ಅಲ್ಲಿಗಿಂತ ಇಲ್ಲೇ ಹೆಚ್ಚು ಸಂಭಾವನೆ ಸಿಗುತ್ತದೆ’ ಎನ್ನುವುದು ಅವರ ಸಮಜಾಯಿಷಿ. ಅಂದ್ಹಾಗೆ, ರವಿಚಂದ್ರನ್ ಸಂಭಾವನೆ ಎಷ್ಟು? ಅವರು ಹೇಳುವುದಿಲ್ಲ, ಚಿತ್ರತಂಡದವರು ಬಹಿರಂಗಪಡಿಸುವ ಧೈರ್ಯವನ್ನೂ ತೋರುವುದಿಲ್ಲ. ಮೂಲಗಳ ಪ್ರಕಾರ, ‘ಲಕ್ಷ್ಮಣ’ ಚಿತ್ರಕ್ಕೆ 1.40 ಕೋಟಿ ರೂ. ಪಡೆದಿದ್ದಾರಂತೆ!!
ಸದ್ಯ, ‘ಡಾನ್ಸಿಂಗ್ ಸ್ಟಾರ್ ಜೂನಿಯರ್’ ಮುಗಿದಿದೆ. ಎಫ್ಎಂ ವಾಹಿನಿಯ ‘ಸ್ಟ್ರೇಟ್ ಹಿಟ್’ ಇದ್ದಕ್ಕಿದ್ದಂತೆ ನಿಂತಿದೆ. ಪ್ರಸ್ತುತ, ‘ಪ್ರಚಾರ ರಾಯಭಾರಿ’ ಯಾತ್ರೆ ಶುರು. ನಡುನಡುವೆ, ಪೋಷಕ ಪಾತ್ರಗಳಲ್ಲಿ ಮುಖದರ್ಶನ. ಇದಕ್ಕೇ ಹೇಳುವುದು, ‘ಕನಸು’ಗಳಿಗೆ ಕೊನೆ ಇಲ್ಲ. ‘ಕನಸುಗಾರ’ನಿಗೆ ಭಂಗವಿಲ್ಲ…