ಮನೋರಂಜನೆ

ಅವರು ಅವಮಾನಿಸಿದರು: ಬಂಗಾರು ಹನುಮಂತು

Pinterest LinkedIn Tumblr

sai-fiಹೊಸಬರಿಗೆ ಕೊಂಚ ಆತ್ಮವಿಶ್ವಾಸ ಕಮ್ಮಿ. ತಾವು ಮಾಡುವ ಪ್ರಯತ್ನ ಫಲಿಸುತ್ತೋ ಇಲ್ಲವೋ ಎಂಬ ಅಳುಕು. ಇಂಥದ್ದೇ ಸ್ಥಿತಿಯಲ್ಲಿ ಸಿನಿಮಾ ನಟನೆ / ನಿರ್ಮಾಣದ ಸಾಹಸಕ್ಕೆ ಕೈಹಾಕಿದವರು ಬಂಗಾರು ಹನುಮಂತು. ಪರಿಣಾಮ, ಅವರ ಕುಟುಂಬದ ಸದಸ್ಯರಿಗೂ ಗೊತ್ತಾಗದಂತೆ ‘ಮನಮೆಚ್ಚಿದ ಬಂಗಾರು’ ಚಿತ್ರ ಮಾಡಿ ಮುಗಿಸಿದ್ದಾರೆ. ಇದೀಗ ಒಂದಷ್ಟು ಆತ್ಮವಿಶ್ವಾಸ ತುಂಬಿಕೊಂಡು ಅದ್ದೂರಿಯಾಗಿಯೇ ಅಡಿಯೋ ಬಿಡುಗಡೆ ಮಾಡುವ ಮೂಲಕ ಜಗಜ್ಜಾಹೀರು ಪಡಿಸಿದ್ದಾರೆ ಬಂಗಾರು. ‘ಯಾರಿಂದಲೋ ಅವಮಾನಿತನಾಗಿದ್ದಕ್ಕಾಗಿ ಸಿನಿಮಾ ನಾಯಕನಾಗುವ ಮನಸ್ಸು ಮಾಡಿದೆ’ ಎಂದು ಹೇಳಿಕೊಳ್ಳುತ್ತಾರವರು. ಆದರೆ ಅವಮಾನಿಸಿದವರು ಯಾರು? ಯಾವಾಗ? ಹೇಗೆ? ಇವುಗಳಿಗೆಲ್ಲ ಉತ್ತರ ಇಲ್ಲ. ಹಾಗಂತ ಕಾಟಾಚಾರಕ್ಕೆ ಚಿತ್ರ ಮಾಡಿ ಮುಗಿಸಿಲ್ಲವಂತೆ. ಒಂದು ತಿಂಗಳು ಡಾನ್ಸ್, ಫೈಟಿಂಗ್ ಅಭ್ಯಾಸ ನಡೆಸಿ ಶ್ರಮ ಹಾಕಿದ್ದಾರಂತೆ. ‘ಇಂದಿನ ಸಾಮಾಜಿಕ ಸಮಸ್ಯೆಗಳಿಗೆ ನಮ್ಮ ಚಿತ್ರ ಕನ್ನಡಿ ಹಿಡಿದಿದೆ. ಮಹಿಳೆಯರನ್ನು ಶೋಷಿಸುವ ಖಳರ ವಿರುದ್ಧ ಹೋರಾಡುವ ಪಾತ್ರ ನನ್ನದು’ ಎಂದು ವಿವರಣೆ ಕೊಟ್ಟರು ಬಂಗಾರು.

ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ ಓಂ ಸಾಯಿಪ್ರಕಾಶ್. ಈ ಹಿಂದೆ ಸಾಯಿಪ್ರಕಾಶ್ ನಿರ್ದೇಶನದ ‘ಶ್ರೀ ಸಾಯಿ’ ಚಿತ್ರದಲ್ಲಿ ಅಭಿನಯಿಸಿದ್ದ ರೋಜಾ ‘..ಬಂಗಾರು’ಗೂ ನಾಯಕಿ. ‘ನನ್ನದು ಹಳ್ಳಿ ಹುಡುಗಿ ಪಾತ್ರ. ಆಕಸ್ಮಿಕವಾಗಿ ವೇಶ್ಯಾವಾಟಿಕೆ ಜಾಲಕ್ಕೆ ಸಿಕ್ಕಹಾಕಿಕೊಳ್ಳುವ ನನ್ನನ್ನು ನಾಯಕ ಹೇಗೆ ಕಾಪಾಡುತ್ತಾನೆ ಎಂಬುದೇ ಕಥೆಯ ತಿರುಳು. ಭಾವನಾತ್ಮಕ ದೃಶ್ಯಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದೇನೆ’ ಎಂದು ಪಾತ್ರ ಪರಿಚಯ ಮಾಡಿಕೊಂಡರು ರೋಜಾ.

5 ಹಾಡುಗಳಿಗೆ ಸಂಗೀತ ಮತ್ತು ಸಾಹಿತ್ಯ ಒದಗಿಸಿದ್ದಾರೆ ಕೆ. ಕಲ್ಯಾಣ್. ‘ಸಾಹಿತ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ಸಾಯಿಪ್ರಕಾಶ್ ಕೌಟುಂಬಿಕ ಅಂಶಗಳನ್ನೂ ಮೀರಿ ಪ್ರೇಕ್ಷಕರಿಗೆ ಹೊಸತನ ನೀಡಲು ಪ್ರಯತ್ನಿಸಿದ್ದಾರೆ’ ಎಂಬುದು ಕಲ್ಯಾಣ್ ಹೇಳಿಕೆ. ಧ್ವನಿಮುದ್ರಿಕೆಯನ್ನು ಮಾರುಕಟ್ಟೆಗೆ ತಂದಿದೆ ಲಹರಿ ಸಂಸ್ಥೆ. ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರಂತೆ ಶ್ರೀನಿವಾಸಮೂರ್ತಿ. ಚಿತ್ರತಂಡಕ್ಕೆ ಶುಭಕೋರಲು ಆಗಮಿಸಿದ್ದರು ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ ಮತ್ತು ಆಂಧ್ರದ ಆಲೂರು ಶಾಸಕ ಬಿ. ಜಯರಾಮ್ ನೆರೆದಿದ್ದ ಎಲ್ಲರೂ ನಟ/ನಿರ್ಮಾಪಕ ಬಂಗಾರು ವ್ಯಕ್ತಿತ್ವಕ್ಕೆ ಮೆಚ್ಚುಗೆಯ ಮಳೆಗರೆದರು. ಅಲ್ಲಿಗೆ, ಇದನ್ನು ‘ಎಲ್ಲರೂ ಮೆಚ್ಚಿದ ಬಂಗಾರು’ ಎನ್ನಲು ಅಡ್ಡಿ ಇಲ್ಲ.

Write A Comment