‘ನಾವು ಯಾರಿಗೇನು ಕಮ್ಮಿ’ ಎಂಬುದನ್ನು ಧ್ವನಿಸುವಂತೆ ಅದ್ದೂರಿ ಮುಹೂರ್ತ, ‘ಯಾವುದಕ್ಕೂ ಕೊರತೆ ಉಂಟುಮಾಡಲಿಲ್ಲ’ ಎಂಬ ನಿರ್ದೇಶಕನ ಬಜೆಟ್ ತೃಪ್ತಿ, ‘ಇಂಥ ಸಿನಿಮಾದಲ್ಲಿ ನನಗೂ ಅವಕಾಶ ಕೊಟ್ಟಿದ್ದಕ್ಕೆ ಥ್ಯಾಂಕ್ಸ್’ ಎನ್ನುವ ಕಲಾವಿದ- ತಂತ್ರಜ್ಞರ ಧನ್ಯವಾದ ಅರ್ಪಣೆ, ಆಡಿಯೋ- ಸಿನಿಮಾ ಬಿಡುಗಡೆಯ ಮರುದಿನವೇ ‘ಸೂಪರ್ ಹಿಟ್’ ಎಂಬೆಲ್ಲ ಜಾಹೀರಾತು… ಹೀಗೆ ಯಾವ ಸಂದರ್ಭದಲ್ಲೂ ಆಗದಂಥ ಖುಷಿಯ ವಾತಾವರಣವೀಗ ಗಾಂಧಿನಗರದಲ್ಲಿದೆ. ಬಣ್ಣದ ಲೋಕದಲ್ಲಿನ ಉತ್ಪ್ರೇಕ್ಷೆಯನ್ನೂ ಮೀರಿದ ಆ ಖುಷಿ ಕನ್ನಡತನಕ್ಕೆ ಸಂಬಂಧಿಸಿದ್ದು. ಸಿನಿ ಪರಿಭಾಷೆಯಲ್ಲಿ ಹೇಳುವುದಾದರೆ, ಇದೊಂದು ಥ್ರಿಲ್. ರಾಜ್ಯೋತ್ಸವಕ್ಕೆ ಇನ್ನೂ ಒಂದು ತಿಂಗಳು ದೂರವಿರುವಾಗಲೇ ಆಗುತ್ತಿರುವ ಪುಳಕದ ಅನá-ಭವವಿದು.
***
ಕನ್ನಡ ಚಿತ್ರರಂಗದ ಮಟ್ಟಿಗೆ ಈಗಿನದ್ದು ‘ಆಲ್ ಈಸ್ ವೆಲ್’ ಕಾಲ. ಇಂಥ ಪರ್ವಕಾಲಕ್ಕೆ ಕನ್ನಡತನದ ಧ್ವನಿಯೂ ಇದೆಯೇ? ಇರುವುದೇ ಆದರೆ ಆ ಪುಳಕವನ್ನು ಅರ್ಥೈಸುವ ಹೇಗೆ?
ಥ್ರಿಲ್ಲರ್ ಕಮಾಲ್
ಗುರುವಾರ ತೆರೆಗೆ ಬಂದಿರುವ ‘ಮಿ. ಐರಾವತ’ವೂ ಸೇರಿದಂತೆ ಇಲ್ಲಿಯವರೆಗೆ 86 ಚಿತ್ರಗಳು ಬೆಳ್ಳಿಪರದೆ ಮೇಲೆ ಬೆಳಗಿವೆ. ಇವುಗಳಲ್ಲಿ ಹುಬ್ಬೇರಿಸುವಂತೆ ಮಾಡಿದ್ದು, ಗೆಲುವಿನ ಪತಾಕೆ ಹಾರಿಸಿದ್ದು ಥ್ರಿಲ್ಲರ್ಗಳು. ಆಕ್ಷನ್ ಥ್ರಿಲ್ಲರ್ (ರಣವಿಕ್ರಮ), ಮಿಸ್ಟರಿ ಥ್ರಿಲ್ಲರ್ (ರಂಗಿತರಂಗ), ಸೈಕಲಾಜಿಕಲ್ ಥ್ರಿಲ್ಲರ್ (ಉಪ್ಪಿ 2), ಸಸ್ಪೆನ್ಸ್ ಥ್ರಿಲ್ಲರ್ (ಆಟಗಾರ), ಕ್ರೖೆಮ್ ಥ್ರಿಲ್ಲರ್ (ಆರ್ಎಕ್ಸ್ ಸೂರಿ), ರೋಮ್ಯಾಂಟಿಕ್ ಥ್ರಿಲ್ಲರ್ (ಕೆಂಡಸಂಪಿಗೆ, ಅರ್ಜುನ)… ಹೀಗೆ ಬಗೆಬಗೆಯಲ್ಲಿ ಪ್ರೇಕ್ಷಕ ಸಿನಿಥ್ರಿಲ್ ಅನುಭವಿಸಿದ್ದಾನೆ. ಥಿಯೇಟರ್ ಸಮಸ್ಯೆ ಮಧ್ಯೆಯೇ ಈ ಚಿತ್ರಗಳು ಸ್ಥಿರವಾಗಿ ನಿಂತಿದ್ದು ಗಮನಾರ್ಹ. ಇವಕ್ಕೆ ‘ಸಿದ್ಧಾರ್ಥ’, ‘ಮೈತ್ರಿ’, ‘ಕೃಷ್ಣ-ಲೀಲಾ’, ‘ರನ್ನ’, ‘ಗಣಪ’, ‘ಬುಲೆಟ್ ಬಸ್ಯ’, ‘ಲವ್ ಯು ಆಲಿಯ’ ಸಾಥ್ ನೀಡಿದ್ದು ವಿಶೇಷ. ವರ್ಷದ ಮುಕ್ತಾಯಕ್ಕೆ ಇನ್ನೂ ಮೂರು ತಿಂಗಳು ಬಾಕಿ ಇರುವಾಗಲೇ ಈ ಪರಿ ‘ಯಶಸ್ಸು/ ನಮ್ಮತನ’ಗಳು ಆವರಿಸಿರುವುದು ಹೊಸ ಆಶಾಭಾವ ಮೂಡಿಸಿದೆ ಅನ್ನಬಹುದು. ಚೆನ್ನಾಗಿದೆ, ತುಂಬ ಚೆನ್ನಾಗಿದೆ- ವರ್ಗದ ಚಿತ್ರಗಳಿಗಿಂತ ‘ಪರವಾಗಿಲ್ಲ’ ಅನ್ನುವ ದರ್ಜೆಗೆ ಸೇರಿದ ಚಿತ್ರಗಳೇ ಪ್ರೇಕ್ಷಕನ ಪ್ರೀತಿಗೆ ಪಾತ್ರವಾಗುತ್ತಿವೆ. ರಿಮೇಕ್, ಯಥಾವತ್ ಅನುಕರಣೆಗಳಂಥ ನಕಾರಾತ್ಮಕ ಗುಣಗಳಾಚೆಯೂ ಈ ಬಗೆಯ ಹಿತವಾದ ಭರವಸೆಯ ಗಾಳಿ ಬೀಸುತ್ತಿರುವುದು ಮುಂಬರುವ ಚಿತ್ರಗಳಿಗೆ ಬಹುದೊಡ್ಡ ಬಲ ತುಂಬಿದೆ. ರವಿಚಂದ್ರನ್ ಅವರ ‘ಅಪೂರ್ವ’, ಧನಂಜಯ ನಾಯಕತ್ವದ ‘ಬಾಕ್ಸರ್’, ಯೋಗರಾಜ್ ಭಟ್ ನಿರ್ದೇಶನದ ‘ದನ ಕಾಯೋನು’, ಬಿ. ಸುರೇಶ್ ಮಹತ್ವಾಕಾಂಕ್ಷೆಯ ‘ದೇವರ ನಾಡಲ್ಲಿ’, ರಕ್ಷಿತ್ ಶೆಟ್ಟಿ- ಅನಂತ್ನಾಗ್ ಕಾಂಬಿನೇಷನ್ನ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ರಾಮ್ೋಪಾಲ್ ವರ್ವ ದಿಗ್ದರ್ಶನದ ‘ಕಿಲ್ಲಿಂಗ್ ವೀರಪ್ಪನ್’, ಯಶ್ ಅವರ ‘ಮಾಸ್ಟರ್ಪೀಸ್’, ಗಡ್ಡ ವಿಜಿ ಕನಸಿನ ‘ಪ್ಲಸ್’… ಹೀಗೆ ಹತ್ತುಹಲವು ಚಿತ್ರಗಳು ಸದ್ಯದ ‘ಯಶಸ್ಸು/ ನಮ್ಮತನ’ದ ಗಾಳಿಯಲ್ಲಿ ತೂರಿಕೊಳ್ಳುವ ಹೊಂಗನಸು ಕಾಣುತ್ತಿವೆ.
**
ಇವರು ನಮ್ಮವರು…
ಜನಪರ ಹೋರಾಟಕ್ಕೆ ಸಾಥ್
ಸಿನಿಥ್ರಿಲ್ನ ನಿರೀಕ್ಷೆಗೆ ನಿಲುಕಿರುವ ಸಿನಿಮಂದಿ ವಿವಾದಗಳ ಪರೀಕ್ಷೆಯಿಂದ ಸಾಧ್ಯವಾದಷ್ಟು ದೂರವಿದ್ದಾರೆ. ಸಭ್ಯ, ಶಾಂತಿಪ್ರಿಯ, ಸುಸಂಸ್ಕೃತ, ಸಕಲರ ಏಳಿಗೆ ಬಯಸುವ ಕನ್ನಡಿಗರ ಗುಣಕ್ಕೆ ಇದು ತಕ್ಕುದಾದ ಬೆಳವಣಿಗೆ. ಚಲನಚಿತ್ರ ನಿರ್ವಪಕರು ಮತ್ತು ಕಲಾವಿದರ ನಡುವೆ ವಿವಿಧ ಕಾರಣಗಳಿಗೆ ನಡೆದ ತಿಕ್ಕಾಟ, ವೇತನ ಪರಿಷ್ಕರಣೆಗಾಗಿ ಕಾರ್ವಿುಕರ ಒಕ್ಕೂಟದ ಒದ್ದಾಟ, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಡಬ್ಬಿಂಗ್ ಚಲನಚಿತ್ರ ವಾಣಿಜ್ಯ ಮಂಡಳಿಗಳ ಗುದ್ದಾಟ…
ಇತ್ಯಾದಿ ಸದ್ದುಗಳೆದ್ದಿದ್ದವಾದರೂ ಅವುಗಳಿಂದ ಥಿಯೇಟರ್ಗಳಲ್ಲಿ ಠಿಕಾಣಿ ಹೂಡಿದ್ದ ಸಿನಿಮಾಗಳಿಗೆ ಯಾವುದೇ ಧಕ್ಕೆ ಉಂಟಾಗಲಿಲ್ಲ. ಡಬ್ಬಿಂಗ್ ಚರ್ಚೆ ಉತ್ತುಂಗಕ್ಕೇರಿದರೂ ಅದರ ಅನುಷ್ಠಾನ ಅಷ್ಟು ಸುಲಭವಲ್ಲ. ತೀರ ಸಿನಿಪ್ರಿಯನ ಮನಸ್ಸು ಕದಡುವಂಥ ಬೆಳವಣಿಗೆಗಳಾಗಲಿಲ್ಲ. ಆದರೆ ಇವೆಲ್ಲವನ್ನೂ ಮರೆಸುವಂಥ ‘ಯು-ಟರ್ನ್’ ಕಂಡುಬಂದಿದ್ದು ಕಳೆದ ಸೆಪ್ಟೆಂಬರ್ನಲ್ಲಿ. ಮಹದಾಯಿ, ಕಳಸಾಬಂಡೂರಿ ನಾಲಾ ತಿರುವು ಯೋಜನೆಗೆ ಆಗ್ರಹಿಸಿ ಉತ್ತರ ಕರ್ನಾಟಕದಲ್ಲಿ ನಡೆದ ಅನ್ನದಾತರ ಜಲಾಂದೋಲನಕ್ಕೆ ಕನ್ನಡ ಚಿತ್ರರಂಗದ ಪ್ರಮುಖರೆಲ್ಲರೂ ಸಾಥ್ ನೀಡಿದ್ದು ಮರೆಯಲಾಗದ ಘಟನೆ. ‘ಕನ್ನಡವನ್ನು ಉಳಿಸಿ- ಬೆಳೆಸಿ, ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ’ ಎಂದೆಲ್ಲ ಒಣ ಹೇಳಿಕೆ ಕೊಡುತ್ತಿದ್ದವರೆಲ್ಲ ಏಕದಂ ಆಪ್ತರಾದ ಕ್ಷಣಗಳವು!
ಕನ್ನಡಮಯ ಗಾಂಧಿನಗರ
ಕನ್ನಡ ಚಿತ್ರರಂಗದ ನೆಲೆಯಾದ ಬೆಂಗಳೂರಿನ ಗಾಂಧಿನಗರದಲ್ಲೀಗ ಅಕ್ಷರಶಃ ಕನ್ನಡ ವಾತಾವರಣ! ಅಲ್ಲಿನ ಎಲ್ಲ ಚಿತ್ರಮಂದಿರಗಳಲ್ಲೂ ಈಗ ಕನ್ನಡ ಸಿನಿಮಾಗಳದ್ದೇ ಕಾರುಬಾರು. ತೆಲುಗು ಚಿತ್ರಗಳಿಗೆ ಮಣೆಹಾಕುವ ಭೂಮಿಕಾ, ಮೂವೀಲ್ಯಾಂಡ್ ಥಿಯೇಟರ್ಗಳಲ್ಲಿ ಕ್ರಮವಾಗಿ ‘ಲವ್ ಯು ಆಲಿಯ’, ‘ಕೆಂಡಸಂಪಿಗೆ’ ಯಶಸ್ವೀ ಪ್ರದರ್ಶನ ಕಾಣುತ್ತಿವೆ. ತ್ರಿಭುವನ್ ಚಿತ್ರಮಂದಿರ ಆಗಾಗ ಹಾಲಿವುಡ್, ಬಾಲಿವುಡ್ ಚಿತ್ರಗಳಿಗೆ ಮೊರೆಹೋಗುತ್ತದಾದರೂ ಅಲ್ಲೀಗ ‘ರಂಗಿತರಂಗ’ ಶತದಿನೋತ್ಸವದತ್ತ ಮುನ್ನಡೆದಿದೆ. ಈ ವಾರವೂ ಗಾಂಧಿನಗರದಲ್ಲಿನ ಈ ಅಪರೂಪದ ಕನ್ನಡಪರ ವಾತಾವರಣ ಮುಂದುವರಿಯುವ ಸ್ಪಷ್ಟ ಸಾಧ್ಯತೆಗಳಿವೆ. ಹಾಗೊಂದು ವೇಳೆ, ಇದು ಅಕ್ಟೋಬರ್- ನವೆಂಬರ್ ತಿಂಗಳಲ್ಲೂ ವಿಸ್ತರಿಸುವುದನ್ನು ಕಲ್ಪಿಸಿಕೊಂಡರೆ? ಫಲಶ್ರುತಿ ಖಂಡಿತವಾಗಿಯೂ ಆಶಾದಾಯಕವಾಗಿಯೇ ಇರಲಿದೆ. ಪ್ರದರ್ಶಕರಿಗೆ ವ್ಯವಹಾರ ಮುಖ್ಯ. ಕನ್ನಡದ ಬಗ್ಗೆ ಸಾಮಾನ್ಯವಾಗಿ ಅವರಲ್ಲಿ ಭಾವನಾತ್ಮಕ ಒಲವು- ನಿಲುವುಗಳಿರುವುದಿಲ್ಲ. ಆದರೆ, ಒಂದು ವೇಳೆ ಈ ಗುಣಗಳೂ ಬಂದುಬಿಟ್ಟರೆ ಕನ್ನಡ ಚಿತ್ರರಂಗದ ಶೋಭೆ ಇನ್ನಷ್ಟು ಹೆಚ್ಚುವುದರಲ್ಲಿ ಸಂಶಯವಿಲ್ಲ. ಮಲ್ಟಿಪ್ಲೆಕ್ಸ್ ಪ್ರಾಬಲ್ಯಗಳೇನೇ ಇರಲಿ, ಮುಂಬರುವ ದಿನಗಳಲ್ಲಿ ಗಾಂಧಿನಗರ ಈ ಕೋನದಲ್ಲೂ ಗಟ್ಟಿಯಾಗುವ
ಲಕ್ಷಣಗಳು ನಿಚ್ಚಳವಾಗಿವೆ.
***
‘ಪದ್ಯ ಪದವಿಲ್ಲದಿರಬೇಕು ಹೆಜ್ಜೆ ಗುರುತು ಇಲ್ಲದೇ ಪಕ್ಷಿ ಹಾರುವಂತೆ/ ಕಾಲದಲ್ಲಿ ಸ್ತಬ್ಧ ಎನ್ನಿಸಬೇಕು ಏರುವ ಚಂದ್ರನಂತೆ/ ಹೇಳಕೂಡದು… ಇರಬೇಕು’- ಅಮೆರಿಕದ ಅರ್ಚಿಬಾಲ್ಡ್ ಮ್ಯಾಕ್ಲೀಶ್ ಕವಿ ಪದ್ಯ ಕುರಿತು ಹೇಳಿರುವ ಬಗೆ ಇದು. ‘ಪದ್ಯ’ ಅನ್ನುವ ಜಾಗದಲ್ಲಿ ‘ಯಶಸ್ಸು, ನಮ್ಮತನ’ ಎಂಬೆರಡು ಪದಗಳನ್ನು ಇಟ್ಟು ನೋಡಿ. ‘ಯಶಸ್ಸು, ನಮ್ಮತನ’ಗಳ ತುಡಿತ ಇದ್ದಲ್ಲಿ ನೈಜವಾಗಿ ದೊಡ್ಡ ಸದ್ದು ಮಾಡಬೇಕಿಲ್ಲ. ಅಲ್ಲಿ ಎಲ್ಲ ಸಕಾರಾತ್ಮಕ ಬೆಳವಣಿಗೆಗಳೂ ಗೊತ್ತೇ ಆಗದಂತೆ ಸಂಭವಿಸá-ತ್ತಿರುತ್ತವೆ. ಅಷ್ಟಕ್ಕೂ ‘ಎಲ್ಲವೂ ಸಾಂಗವಾಗಿ ನಡೆಯಬೇಕು’- ಎಂಬುದು ಜೀವನದ ಮೂಲತತ್ವ. ಹಾಗೇ ಸಿನಿಮಾ ಲೋಕದಲ್ಲೂ ಅದು ಕಾಣಿಸಬೇಕು. ಈ ಆಶಯಕ್ಕೆ ಪೂರ್ವಭಾವಿಯಾಗಿ ಸೃಷ್ಟಿಯಾಗಿರುವ ಈ ‘ಕನ್ನಡತನದ ಪುಳಕ’ದ ವಾತಾವರಣ ನಿಶ್ಚಿತವಾಗಿಯೂ ಇನ್ನಷ್ಟು ಕಾಲ ಜಾರಿಯಲ್ಲಿರಬೇಕು. ಯಾಕೆಂದರೆ, ಒಳ್ಳೆಯ ಆಟಗಾರನೊಬ್ಬ ಕ್ರೀಸ್ಗೆ ಕಚ್ಚಿಕೊಂಡಾಗಲೇ ರನ್ ಪ್ರವಾಹ ಸಾಧ್ಯ!