ಮನೋರಂಜನೆ

ಹಾರರ್ ಶಾಲಿನಿ ಅತ್ಯಾಚಾರಕ್ಕೆ ಪ್ರತೀಕಾರ

Pinterest LinkedIn Tumblr

shalini-fiವರ್ತಮಾನ ಹೇಗಾದರೂ ಇರಲಿ, ಭವಿಷ್ಯದ ದೃಷ್ಟಿಕೋನ ಮೂಡಿಸುವ ಜವಾಬ್ದಾರಿ ಪ್ರಜ್ಞೆ ಅದೆಂಥದ್ದೇ ಇರಲಿ… ಕೆಲವು ವಿಷಯಗಳಲ್ಲಿ ಗಾಂಧಿನಗರ ಸದಾ ‘ಭೂತ’ಕಾಲದಲ್ಲಿಯೇ ಯೋಚಿಸುತ್ತದೆ! ಆಗಿಹೋದ ಘಟನಾವಳಿಯ ಬಲೆ ಹೆಣೆದು ಪ್ರೇಕ್ಷಕನ ಮೈಮನ ನಡುಗಿಸುತ್ತ ಹಿಡಿದಿಡುವ ಪ್ರಯತ್ನವದು. ಪ್ರತೀಕಾರದ ಕಥೆ ಇದ್ದರೆ, ಅಲ್ಲೊಂದು ಗಟ್ಟಿ ಫ್ಲ್ಯಾಷ್​ಬ್ಯಾಕ್ ಇರಲೇಬೇಕು. ಅದರಲ್ಲೂ ಯುವತಿಯೊಬ್ಬಳು ಪ್ರತೀಕಾರಕ್ಕೆ ನಿಂತರೆ?

ಈಗಿನ ಕಾಲದಲ್ಲಿ ಯುವತಿಯೊಬ್ಬಳು ಪ್ರತೀಕಾರಕ್ಕೆ ನಿಲ್ಲುವುದು ಮುಖ್ಯವಾಗಿ ಮೂರು ಕಾರಣಗಳಿಗೆ- ಶೋಷಣೆ, ದೌರ್ಜನ್ಯ, ಅತ್ಯಾಚಾರಗಳ ವಿರುದ್ಧ. ಶೋಷಣೆ, ದೌರ್ಜನ್ಯಗಳ ವಿರುದ್ಧ ಹೇಗ್ಹೇಗೋ ಏಗುತ್ತ ಕಾನೂನಾತ್ಮಕ ಹೋರಾಟ ನಡೆಸಬಹುದು; ಅತ್ಯಾಚಾರದ ವಿರುದ್ಧ ಇದು ಕಷ್ಟ. ಅತ್ಯಾಚಾರಕ್ಕೆ ಈಡಾದವರು ಒಂದೋ ಬಾಯಿ ಮುಚ್ಚಿಕೊಂಡಿರಬೇಕು. ಸಿಡಿದೆದ್ದು ನಿಂತರೆ ಪ್ರಾಣಕ್ಕೇ ಅಪಾಯ! ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದವರ ಇಂಥ ಲೆಕ್ಕವಿಲ್ಲದಷ್ಟು ದುರಂತ ಕಥೆಗಳನ್ನು ಕೇಳುತ್ತಿರುತ್ತೇವೆ. ಇಂಥ ದುರ್ಘಟನೆಗಳು ನಡೆಯದಂತೆ ಏನು ಮಾಡಬೇಕು? ‘ಭೂತ’ಕಾಲ ವರ್ತಮಾನಕ್ಕಿಳಿದು ಪ್ರತೀಕಾರಕ್ಕೆ ನಿಲ್ಲುವುದು!! ಈ ಬಗೆಯ ಕಥಾವಸ್ತು ಇರುವ ಲೆಕ್ಕವಿಲ್ಲದಷ್ಟು ಸಿನಿಮಾಗಳು ಬಂದುಹೋಗಿವೆ. ಅವುಗಳಲ್ಲಿ ಹೊಸ ಸೇರ್ಪಡೆ, ‘ಶಾಲಿನಿ’.

ಸಾಮೂಹಿಕ ಅತ್ಯಾಚಾರಕ್ಕೀಡಾದ ಯುವತಿಯೊಬ್ಬಳು ಹಲವರ ಮೈಮೇಲೆ ಪ್ರೇತವಾಗಿ ಆವಾಹನೆ ಮಾಡಿಕೊಂಡು ಅಪರಾಧಿಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಕಥೆ ‘ಶಾಲಿನಿ’ಯದು. ನಿರ್ದೇಶಕ ಸಿ. ಮಲ್ಲಿಕಾರ್ಜುನ, ನಿರ್ವಪಕ ಕೆ. ಶ್ರೀನಿವಾಸ್ ಅವರಿಗಿದು ಚೊಚ್ಚಲ ಚಿತ್ರ. ಶೋಭರಾಜ್, ಮನದೀಪ್ ರಾಯ್, ಕಿಲ್ಲರ್ ವೆಂಕಟೇಶ್, ಅಪೂರ್ವ ಮತ್ತಿತರರನ್ನು ಹೊರತುಪಡಿಸಿ ಉಳಿದ ಕಲಾವಿದರಾದ ಸಂತೋಷ್, ಪುನೀತ್, ಅರವಿಂದ್, ಪ್ರೇಮಾ, ಕಾವ್ಯಾ ಗೌಡ ಅವರಿಗೆಲ್ಲ ಇದು ಬಹುತೇಕ ಹೊಸ ಅನುಭವ. ಕುಶಾಲನಗರದಲ್ಲಿ ಪರಿಚಿತರೊಬ್ಬರಿಗೆ ಜಮೀನು ಕೊಡಿಸಲಿಕ್ಕೆಂದು ಹೋಗಿದ್ದಾಗ ನಿರ್ದೇಶಕರಿಗೆ, ಅತ್ಯಾಚಾರಕ್ಕೀಡಾಗಿ ಕೊಲೆಯಾದ ಯುವತಿಯ ಸುದ್ದಿ ಕಿವಿಗೆ ಬಿತ್ತಂತೆ. ಆಗಲೇ ಹೊಳೆದಿದ್ದು ‘ಶಾಲಿನಿ’ ಕಾನ್ಸೆಪ್ಟ್. ಅದು ಕಾರ್ಯರೂಪಕ್ಕಿಳಿದು ಕುಶಾಲನಗರ, ಬೆಂಗಳೂರು, ಮಾಗಡಿ ಮುಂತಾಡೆದೆ 26 ದಿನಗಳ ಕಾಲ ಶೂಟಿಂಗ್ ಮಾಡಿ ಮುಗಿಸಿದ್ದಾರಂತೆ ಮಲ್ಲಿಕಾರ್ಜುನ್. ಸದ್ಯ ಚಿತ್ರೀಕರಣೋತ್ತರ ಕೆಲಸಗಳಲ್ಲಿ ಬಿಜಿ. ಹಾರರ್ ಕೆಟಗರಿಗೆ ಸೇರುವ ‘ಶಾಲಿನಿ’ಯಲ್ಲಿರುವುದು ಏಕೈಕ ಹಾಡು. ಸಂಗೀತ ನಿರ್ದೇಶಕ ಮಧುರ ಅವರಿಗೆ ಹಿನ್ನೆಲೆ ಸಂಗೀತದಲ್ಲಿ ಪ್ರತಿಭೆ ತೋರಿಸುವ ಸವಾಲು. ಕಂಪ್ಯೂಟರ್ ಗ್ರಾಫಿಕ್ಸ್ ದೃಶ್ಯಗಳೂ ಹೇರಳವಾಗಿದೆ ಅನ್ನುವುದು ಮಧುರ ಹೇಳಿಕೆ. ಸಾಂಗವಾಗಿ ಚಿತ್ರೀಕರಣ ನಡೆಸಿ, ದಿನದ ಕೊನೆಗೆ ತಪ್ಪದೇ ಸಂಭಾವನೆ ಕೊಟ್ಟ ಕಾರಣಕ್ಕೆ ಮನದೀಪ್ ರಾಯ್ ಮತ್ತು ಅಪೂರ್ವ ಅವರಿಗೆ ನಿರ್ವಪಕರ ಬಗ್ಗೆ ಹೆಮ್ಮೆ. ‘ಪೋಷಕ ಕಲಾವಿದರಿಗೆ ಬೆಲೆಯೇ ಇಲ್ಲ’ ಅನ್ನುವ ಅನುಭವದ ಮಧ್ಯೆ, ನಿರ್ವಪಕ ಶ್ರೀನಿವಾಸ್ ಬದ್ಧತೆಯನ್ನು ಎಲ್ಲರೂ ಕೊಂಡಾಡುತ್ತಾರೆ. ಚಿತ್ರೀಕರಣಕ್ಕೆ ಮುನ್ನ 2 ವಾರಗಳ ಕಾಲ ತಾಲೀಮು ನಡೆಸಿದ್ದು ನಟ ಅರವಿಂದ್​ಗೆ ಬಹಳಷ್ಟು ನೆರವಿಗೆ ಬಂತಂತೆ. ನಟಿಯರಾದ ಕಾವ್ಯ ಮತ್ತು ಪ್ರೇಮಾ ಮಾಧ್ಯಮಗೋಷ್ಠಿಗೆ ಆಗಮಿಸಿ, ಸಿಕ್ಕ ಅವಕಾಶಕ್ಕೆ ಪ್ರತಿಯಾಗಿ ಧನ್ಯವಾದ ಸಮರ್ಪಿಸಿದರು.

Write A Comment