ಸಮತೂಕದ ಆಹಾರ
ದೇಹಕ್ಕೆ ಪೌಷ್ಟಿಕತೆಯನ್ನು ಒದಗಿಸುವಂತಹ ಆಹಾರಗಳನ್ನು ಸರಿಯಾದ ರೀತಿಯಲ್ಲಿ,ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಅಳತೆಯಲ್ಲಿ ಸೇವಿಸುವಂತಹ ಆಹಾರವು ಸಮತೂಕದ ಆಹಾರ ಎಂದು ಕರೆಯಲ್ಪಡುತ್ತದೆ. ತಾವು ಸೇವಿಸುವ ಆಹಾರವು ಸರಿಯಾಗಿ ಪಚನಗೊಳ್ಳುವಂತಿರಬೇಕು ಅದಕ್ಕಾಗಿ ಧಾರಾಳ ನೀರು ಅಥವಾ ದ್ರವಾಹಾರ ಸೇವಿಸುವುದು ಉತ್ತಮ.ತಾವು ಸೇವಿಸುವ ಆಹಾರವು ಪೋಷಕ ಸಮೃದ್ಧವಾಗಿರಲಿ ಮತ್ತು ಶುಚಿಯಾಗಿರಲಿ.
ಹೃದಯದ ಆರೋಗ್ಯಕ್ಕಾಗಿ ಆಹಾರಸೇವನೆಯಲ್ಲಿ ಅಳವಡಿಸಿಕೊಳ್ಳ ಬೇಕಾದ ಅಂಶಗಳು ಇಂತಿವೆ:
ಎಣ್ಣೆ ,ಕೊಬ್ಬು ಪದಾರ್ಥಗಳನ್ನು ವರ್ಜಿಸಿ
ಆಹಾರದಲ್ಲಿ ಕರಿದ ತಿಂಡಿಗಳು, ಫಾಸ್ಟ್, ಜಂಕ್ ಫುಡ್‌ಗಳ ಸೇವನೆಯನ್ನು ಕಡಿಮೆ ಮಾಡಿ.ಇಂತವುಗಳು ಶರೀರದಲ್ಲಿ ಬೇಗನೆ ಪಚನಗೊಳ್ಳದೆ ಅಜೀರ್ಣತೆಗೆ ಕಾರಣವಾಗುವುದರ ಜೊತೆಗೆ ಬೊಜ್ಜು ಬೆಳೆಯಲು ಸಹಕಾರಿಯಾಗುತ್ತವೆ.ಅದೇ ರೀತಿ ಮೀನು,ಮಾಂಸ,ಹಾಲು,ತುಪ್ಪ,ಬೆಣ್ಣೆ ಮೊದಲಾದ ಜಿಡ್ಡಿನ ಆಹಾರಗಳನ್ನು ಮಿತವಾಗಿ ಬಳಸಿ.
ಸೋಡಿಯಂ ಅಂಶ ಕಡಿಮೆ ಮಾಡಿ
ಸೋಡಿಯಂ(ಉಪ್ಪು)ನ ಅಂಶವು ದೇಹಕ್ಕೆ ಮುಖ್ಯವಾಗಿದ್ದರೂ ಅದರ ಅತಿಯಾದ ಬಳಕೆಯು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿದ್ದು ಇದು ಹೃದ್ರೋಗವನ್ನುಂಟು ಮಾಡುವ ಸಾಧ್ಯತೆ ಇದೆ.
ಕ್ಯಾಲೊರಿ ಅಂಶವು ಮಿತವಾಗಿರಲಿ
ಆಹಾರದಲ್ಲಡಗಿರುವ ಕ್ಯಾಲೊರಿಯು ದೇಹದ ತೂಕವನ್ನು ಹೆಚ್ಚಿಸಲು ಕಾರಣವಾಗಿದ್ದು,ದೇಹದ ಅತಿಭಾರವು ಹೃದ್ರೋಗಕ್ಕೆ ಹೇತುವಾಗುತ್ತದೆ.
ನಾರು ಪದಾರ್ಥಗಳ ಸೇವನೆ ಅಧಿಕವಾಗಿರಲಿ
ನಾರುಯುಕ್ತ ಪದಾರ್ಥಗಳ ಸೇವನೆಯು ಶರೀರದಲ್ಲಿ ಆಹಾರವು ಜೀರ್ಣಿಸಲು ಸಹಾಯವಾಗುವುದರೊಂದಿಗೆ ಕೊಬ್ಬಿನ ಅಂಶವನ್ನು ಮಿತಿಯಲ್ಲಿರಿಸುತ್ತದೆ.ಹಣ್ಣು ಹಂಪಲು,ಹಸುರೆಲೆ ತರಕಾರಿಗಳು, ಬೇಳೆಕಾಳುಗಳನ್ನು ಆಹಾರದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಹೃದ್ರೋಗವನ್ನು ನಿಯಂತ್ರಣದಲ್ಲಿಡಬಹುದು.
ಆಹಾರ ಸೇವಿಸುವ ವಿಧಾನ
ಆಹಾರವನ್ನು ಹೊತ್ತಿಗೆ ಸರಿಯಾಗಿ ಸೇವಿಸುವುದು,ಸೇವಿಸುವ ಆಹಾರವು ಶುಚಿ,ರುಚಿಯಾಗಿದ್ದು ಹೆಚ್ಚಿನ ಪೋಷಕಾಂಶಗಳನ್ನೊಳಗೊಂಡಿರಬೇಕು. ಆಹಾರವನ್ನು ಸರಿಯಾಗಿ ಜಗಿದು ತಿನ್ನುವುದು ಮತ್ತು ಧಾರಾಳ ನೀರು ಸೇವಿಸುವುದರಿಂದ ಆಹಾರವು ಜೀರ್ಣಿಸಲು ಸಹಾಯವಾಗುತ್ತದೆ ಮತ್ತು ಮಲಬದ್ಧತೆಯು ಶಮನವಾಗುತ್ತದೆ.
ವ್ಯಾಯಾಮ
ಶರೀರಕ್ಕೆ ವ್ಯಾಯಾಮ ಅತ್ಯಗತ್ಯ.ಆದುದರಿಂದ ಶರೀರವನ್ನು ಕೆಲಸದಲ್ಲಿ ತೊಡಗಿಸಿಕೊಳ್ಳಿ.ಒಂದೇ ಸಮನೆ ಕುಳಿತಲ್ಲಿಯೇ ಕುಳಿತುಕೊಂಡು ಕೆಲಸಮಾಡುವುದರಿಂದ ಬೊಜ್ಜು ಬೆಳೆಯುತ್ತದೆ.ಶರೀರದ ಎಲ್ಲಾ ಅಂಗಾಗಗಳಿಗೂ ವ್ಯಾಯಾಮವನ್ನು ನೀಡುವುದರಿಂದ ಶರೀರದಲ್ಲಿನ ರಕ್ತಸಂಚಾರ ಸುಗಮವಾಗಿ ದೇಹ ಆರೋಗ್ಯಯುತವಾಗುತ್ತದೆ.
ಶುದ್ಧವಾದ ವಾಯು ಸೇವನೆ
ಬೆಳಗ್ಗೆ ಅಥವಾ ಸಾಯಂಕಾಲ ವಾಯು ವಿಹಾರ ಮಾಡುವುದು ಶರೀರಕ್ಕೆ ಉತ್ತೇಜನವನ್ನು ನೀಡಲು ಸಹಕರಿಸುತ್ತದೆ.ಕಾಲ್ನಡಿಗೆಯು ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ.
ಮಾದಕ ವಸ್ತುಗಳನ್ನು ಬಳಸದಿರಿ
ಇಂದಿನ ಯುವಜನಾಂಗವು ಮಾದಕ ವಸ್ತುಗಳ ದಾಸ್ಯಕ್ಕೆ ಬೇಗನೆ ತುತ್ತಾಗುತ್ತಿದ್ದು,ಇಂತವರಲ್ಲಿ ಹೃದ್ರೋಗವು ಅತೀ ಕಿರಿಯ ವಯಸ್ಸಿನಲ್ಲೇ ಕಂಡು ಬರುತ್ತದೆ.ಧೂಮಪಾನದ ಅತಿಯಾದ ಸೇವನೆಯು ಬಹುತೇಕ ಮಂದಿಯಲ್ಲಿ ಅತೀ ಕಿರಿಯ ವಯಸ್ಸಿನಲ್ಲಿ ಹೃದಯಾಘಾತವನ್ನುಂಟು ಮಾಡಲು ಮೂಲ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಚಿಂತೆ, ವ್ಯಾಕುಲತೆಗಳಿಂದ ದೂರವಿರುವುದು
ಅತಿಯಾದ ಚಿಂತೆ,ವ್ಯಾಕುಲತೆ,ಭಯ,ನಿರಾಶೆಗಳು,ಖಿನ್ನತೆ ಮೊದಲಾದವುಗಳು ಮನುಷ್ಯನ ಹೃದಯದ ಮೇಲೆ ಅತಿಯಾದ ಪರಿಣಾಮವನ್ನು ಬೀರುತ್ತದೆ.ಇಂತಹ ಸನ್ನಿವೇಶಗಳು ಹೃದಯದ “ನಿಶ್ಶಬ್ದ ಆಘಾತ”ಕ್ಕೆ ಕಾರಣವಾಗುತ್ತದೆ.ಆದುದರಿಂದ ಇಂತವುಗಳಿಂದ ದೂರವಿದ್ದು ಸಂತೋಷದಿಂದ ಜೀವನ ಸಾಗಿಸಿದರೆ ನಮ್ಮ ಹೃದಯವು ಸಂತೋಷದಿಂದ ಇರಬಹುದು.
ರಕ್ತದಲ್ಲಿನ ಕೊಲೆಸ್ಟರಾಲ್,ರಕ್ತದೊತ್ತಡ,ಸಕ್ಕರೆಯ ಅಂಶ ಮೊದಲಾದವುಗಳನ್ನು ಪರಿಶೀಲಿಸಿ,ಸೂಕ್ತವಾದ ಕ್ರಮ ಕೈಗೊಂಡು ಆಹಾರ ಕ್ರಮ,ಜೀವನದಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಂದರೆ ಹೃದಯವು ಎಂದೂ ಹದಿಹರೆಯದಂತಿರಬಹುದು.