ತರಹೇವಾರಿ ಪಾತ್ರಗಳ ಮೂಲಕ ಖಳನಾಗಿ ಅಬ್ಬರಿಸಿರುವ ಶರತ್ ಲೋಹಿತಾಶ್ವ ಅವರೀಗ ಮತ್ತಷ್ಟು ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ರಘುರಾಜ್ ನಿರ್ದೇಶನದ ‘ಸುಪಾರಿ ಸೂರ್ಯ’ ಚಿತ್ರದಲ್ಲಿ ಅವರಿಗೆ ವಿಶೇಷ ಪಾತ್ರವಿದೆಯಂತೆ. ಇದುವರೆಗೂ ಕಂಚಿನ ಕಂಠದಲ್ಲಿ ಗಮನ ಸೆಳೆದಿದ್ದ ಅವರು, ಈ ಚಿತ್ರದಲ್ಲಿ ಕಣ್ಣಿನ ಮೂಲಕ ಮಿಂಚು ಹರಿಸಲಿದ್ದಾರೆ.
‘ಸುಪಾರಿ..’ಯಲ್ಲಿ ಹೆಚ್ಚು ಮಾತಿಲ್ಲದೆ, ಎಲ್ಲವನ್ನೂ ಕಣ್ಣಿನಲ್ಲೇ ಅಭಿವ್ಯಕ್ತಿಸುವ ಪಾತ್ರ ಶರತ್ ಅವರಿಗಿದೆಯಂತೆ. ಒಂದು ಕಣ್ಣಿನ ಗುಡ್ಡೆ ವಿಚಿತ್ರವಾಗಿರುವಂಥ ಆ ಪಾತ್ರಕ್ಕಾಗಿ ವಿದೇಶದಿಂದ ಎರಡು ವಿಶೇಷ ಲೆನ್ಸ್ ತರಿಸಲಾಗಿದೆಯಂತೆ. ‘ಚಿತ್ರೀಕರಣದ ವೇಳೆ ಅದನ್ನು ಹಾಕಿಕೊಳ್ಳಬೇಕಿತ್ತು. ಅದರಿಂದ ಕಣ್ಣಿನಲ್ಲಿ ನೀರು ತುಂಬಿಕೊಂಡ ನೋವು ಉಂಟಾಗುತ್ತದೆ.
ಹಾಗಿದ್ದರೂ ಅದನ್ನೆಲ್ಲ ನಿಭಾಯಿಸಿ, ಶರತ್ ಅದ್ಭುತವಾಗಿ ನಟಿಸಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ರಘುರಾಜ್. ಸಿನಿಮಾ ನೋಡಿಬಂದ ಬಳಿಕ ಅವರ ಪಾತ್ರ ಖಂಡಿತ ಮನಸ್ಸಿನಲ್ಲಿ ಉಳಿಯುತ್ತದೆ ಎಂಬುದು ನಿರ್ದೇಶಕರ ನಂಬಿಕೆ. ವಿರಾಟ್, ಮಧುರಿಮಾ, ಸಾಧು ಕೋಕಿಲ, ಜೂಲಿಯಾ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಚಾಮುಂಡಿ ಚಂದ್ರು ಹಣ ಹಾಕಿದ್ದಾರೆ.