ಮನೋರಂಜನೆ

‘ನಾನು ಅವನಲ್ಲ ಅವಳು’: ಕಲಾತ್ಮಕ ಹೆಣಿಗೆ

Pinterest LinkedIn Tumblr

nanuಕಲಾತ್ಮಕ ಸ್ಪರ್ಶವಿಲ್ಲದ ಸಿನಿಮಾಗಳನ್ನು ಕನ್ನಡದಲ್ಲಿ ‘ಕಲಾತ್ಮಕ ಸಿನಿಮಾ’ ಎನ್ನಲಾಗುತ್ತದೆ ಎನ್ನುವುದು ಚಿತ್ರರಸಿಕರ ನಡುವೆ ಬಳಕೆಯಲ್ಲಿರುವ ನಗೆಮಾತು.

ಈ ಮಾತಿಗೆ ಅಪವಾದ ಬಿ.ಎಸ್‌. ಲಿಂಗದೇವರು ನಿರ್ದೇಶನದ ‘ನಾನು ಅವನಲ್ಲ ಅವಳು’. ಕನ್ನಡದ ಬಹುತೇಕ ಕಲಾತ್ಮಕ ಸಿನಿಮಾಗಳಲ್ಲಿ ಇರುವಂತೆ ಇಲ್ಲಿಯೂ ಸಂಕಟಗಳಿವೆ, ಸಮಸ್ಯೆಗಳಿವೆ. ಇವೆಲ್ಲವನ್ನೂ ಕಲಾತ್ಮಕ ಹೆಣಿಗೆಯಲ್ಲಿ ಸಂಯೋಜಿಸಿರುವುದು ಹಾಗೂ ದೃಶ್ಯಮಾಧ್ಯಮದ ಸಾಧ್ಯತೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಪ್ರಯತ್ನಿಸಿರುವುದು ಸಿನಿಮಾದ ಅಗ್ಗಳಿಕೆ. ಈ ಚಿತ್ರ– ಕಲಾತ್ಮಕ, ಪ್ರಯೋಗಶೀಲ ಆಗಿದ್ದೂ ಅದರ ಚೌಕಟ್ಟನ್ನು ಮೀರಿ ಜನಪ್ರಿಯ ಚಿತ್ರದ ಮಾದರಿಯಲ್ಲಿ ಪ್ರೇಕ್ಷಕನನ್ನು ತಲುಪುವಂತಿದೆ.

ಹಿಜ್ಡಾಗಳ ಕುರಿತ ಸಿನಿಮಾ ಕನ್ನಡಕ್ಕೆ ಹೊಸತಲ್ಲ. ಆದರೆ, ಇಂಥ ಬಹುತೇಕ ಚಿತ್ರಗಳು ಸಾಕ್ಷ್ಯಚಿತ್ರದ ನೆಲೆಯಲ್ಲಿ ಇಲ್ಲವೇ ಹಸಿಬಿಸಿ ದೃಶ್ಯಗಳ ಮಾದರಿಯಲ್ಲಿ ರೂಪುಗೊಂಡಿರುತ್ತವೆ. ಈ ಅಪಾಯಗಳನ್ನು ಮೀರಿರುವ ‘ನಾನು ಅವನಲ್ಲ ಅವಳು’ ಸಹ ಮನುಷ್ಯನೊಬ್ಬನ ಕಥೆಗೆ ಸ್ಪಂದಿಸುವ ಅಂತಃಕರಣ ಮತ್ತು ಸಂಯಮದಲ್ಲಿ ಹಿಜ್ಡಾಗಳ ಬದುಕನ್ನು ನಿರೂಪಿಸಿದೆ. ಇದು ಲಿಂಗದೇವರು ಅವರ ವೃತ್ತಿಜೀವನದ ಅತ್ಯುತ್ತಮ ಸಿನಿಮಾ ಮಾತ್ರವಲ್ಲ, ಇತ್ತೀಚಿನ ವರ್ಷಗಳಲ್ಲಿನ ಕನ್ನಡದ ಬಹುಮುಖ್ಯ ಪ್ರಯೋಗಶೀಲ ಚಿತ್ರಗಳಲ್ಲೂ ಒಂದಾಗಿದೆ.

ಮಾದೇಶ ಎನ್ನುವ ಹುಡುಗನೊಬ್ಬ ತನ್ನೊಳಗಿನ ಹೆಣ್ತನಕ್ಕೆ ಓಗೊಡುವುದು ಹಾಗೂ ಅಂತಿಮವಾಗಿ ಹೆಣ್ಣಾಗಿ ರೂಪಾಂತರಗೊಳ್ಳುವುದು ಚಿತ್ರದ ಕಥೆ. ಈ ಕಥೆಯಲ್ಲಿ ಮೂರು ಘಟ್ಟಗಳಿವೆ. ಒಳಗಿನ ಹೆಣ್ತನ ಬಾಲಕನ ಅರಿವಿಗೆ ಬರುವುದು ಮೊದಲ ಭಾಗ. ತನ್ನ ಹೆಣ್ತನವನ್ನು ಹತ್ತಿಕ್ಕಲು ಪ್ರಯತ್ನಿಸುವ ಅಪ್ಪ–ಅಮ್ಮನನ್ನು ತೊರೆದು ಅಕ್ಕನ ಮನೆಯನ್ನು ಸೇರುವ ಮಾದೇಶನ ಬಂಡಾಯ ಮತ್ತು ಹೆಣ್ಣಾಗಿ ರೂಪಾಂತರಗೊಳ್ಳುವ ದಿಟ್ಟತನ – ಇಚ್ಛಾಶಕ್ತಿ ಎರಡನೆಯ ಭಾಗ.

ವಿದ್ಯಾಳ (ಮಾದೇಶ) ಬದುಕನ್ನು ಆತ್ಮಘನತೆಯಿಂದ ಚಿತ್ರಿಸಿರುವುದು ಮೂರನೆಯ ಘಟ್ಟ. ವಿದ್ಯಾ ಆಗುವ ಮಾದೇಶನ ಪಯಣದ ಕಥೆಯ ನೆಪದಲ್ಲಿ ನಿರ್ದೇಶಕರು ಹಿಜ್ಡಾಗಳ ಬದುಕಿನ ತವಕತಲ್ಲಣ, ಆಚರಣೆಗಳು– ನಂಬಿಕೆಗಳನ್ನು ಕೃತಕವೆನ್ನಿಸದಂತೆ ಹಿಡಿದಿಟ್ಟಿದ್ದಾರೆ.

ಮುಖ್ಯ ಕಥನದ ಜೊತೆಗೆ ಕೆಲವು ಜೀವತಂತುಗಳಿವೆ. ತನ್ನ ಬಗ್ಗೆ ಸಹಾನುಭೂತಿ ತೋರುವ ಸಹಪಾಠಿಯಲ್ಲಿ ಮಾದೇಶನ ಅನುರಕ್ತಿ, ಮಗನಲ್ಲಿನ ಹೆಣ್ತನವನ್ನು ಒಪ್ಪಿಕೊಳ್ಳುವಲ್ಲಿ ಅಮ್ಮ ಮತ್ತು ಅಕ್ಕನ ಮೆದುತನ ಹಾಗೂ ಅಪ್ಪ–ಭಾವನ ಪುರುಷ ಅಹಂಗಳ ಕಸಿವಿಸಿ ಧ್ವನಿಪೂರ್ಣವಾಗಿದೆ. ಮುಖ್ಯಪಾತ್ರದಲ್ಲಿ ನಟಿಸಿರುವ ಸಂಚಾರಿ ವಿಜಯ್‌, ತೃತೀಯ ಲಿಂಗಿಗಳ ತವಕ–ತಲ್ಲಣಗಳನ್ನು ಸ್ವತಃ ಅನುಭವಿಸಿದಷ್ಟು ಸಹಜವಾಗಿ ನಟಿಸಿದ್ದಾರೆ. ರಸ್ತೆಯಲ್ಲಿ ನಡೆದುಹೋಗುವ ಪ್ರಸಂಗ, ಹಿಜ್ಡಾಗಳ ಚಪ್ಪಾಳೆ ಕಲೆ ಕಲಿಯುವುದು– ಇಂಥ ದೃಶ್ಯಗಳಲ್ಲಿ ವಿಜಯ್‌ ಎದ್ದುಕಾಣುವಂತೆ ನಿರ್ದೇಶಕರ ರುಜುವೂ ಇಣುಕಿದೆ.  ಏಕಪಾತ್ರಾಭಿನಯದ ರೂಪದಲ್ಲಿ ವಿಜಯ್ ಸಿನಿಮಾವನ್ನು ಆವಾಹಿಸಿಕೊಂಡಿದ್ದರೂ, ಪ್ರಫುಲ್‌ ವಿಶ್ವಕರ್ಮ ಹಾಗೂ ಸುಂದರ್‌ ಅವರು ಪುಟ್ಟ ಪಾತ್ರಗಳಲ್ಲಿ ನೆನಪಿನಲ್ಲಿ ಉಳಿಯುತ್ತಾರೆ.

ಸೀಮಿತ ಅವಕಾಶದಲ್ಲಿ ಕಸುಬುದಾರಿಕೆಯನ್ನು ಮೆರೆದಿರುವ ಅಶೋಕ್‌ ವಿ. ರಾಮನ್‌ ಛಾಯಾಗ್ರಹಣ, ಭಾವೋತ್ಕರ್ಷದ ಅನೂಪ್‌ ಸೀಳಿನ್‌ ಸಂಗೀತ ಹಾಗೂ ಅರಸು ಅಂತಾರೆ ಸಾಹಿತ್ಯ ಗಮನಸೆಳೆಯುವಂತಿವೆ. ಆದರೆ, ಇಡೀ ಸಮಾಜದ ದಾರುಣವೊಂದನ್ನು ಅತ್ಯಂತ ಸಹಜವಾಗಿ ಚಿತ್ರಕಥೆ ಪ್ರೇಕ್ಷಕರಿಗೆ ದಾಟಿಸುತ್ತಿರುವಾಗ, ಆ ಸಂಯಮಕ್ಕೆ

ಹೊರತಾದ ಅನುಕಂಪದ ಹೇರಿಕೆಯ ರೂಪದಲ್ಲಿ ಹಾಡುಗಳು ಕೇಳಿಸುತ್ತವೆ.

‘ನಾನು ಅವನಲ್ಲ ಅವಳು’ ನಾಗರಿಕ ಸಮಾಜವನ್ನು ಆತ್ಮನಿರೀಕ್ಷಣೆಗೆ ಒತ್ತಾಯಿಸುವ ಸಿನಿಮಾ. ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಕನ್ನಡ ಸಂದರ್ಭದಲ್ಲಿ ಒಂದು ಒಳ್ಳೆಯ ಚಿತ್ರವನ್ನು ರೂಪಿಸುವುದು ಹೇಗೆ ಎನ್ನುವುದಕ್ಕೆ ಇದು ಮಾದರಿಯೂ ಹೌದು.

Write A Comment