ಮನೋರಂಜನೆ

ಮಹಿಳಾ ಕೇಂದ್ರೀತ ಕತೆ ಪ್ರೀತಿ ಕಿತಾಬು

Pinterest LinkedIn Tumblr

Preeti1ಹೆಣ್ಣನ್ನು ಬರೀ ಗ್ಲಾಮರ್‌ಗೆ ಸೀಮಿತಗೊಳಿಸಿರುವ ಚಿತ್ರರಂಗದಲ್ಲಿ ನಿರ್ದೇಶಕ ವಿಠ್ಠಲ್ ಭಟ್ ಹೊಸ ‘ಸಾಹಸ’ಕ್ಕೆ ಮುಂದಾಗಿದ್ದಾರೆ. ಮಹಿಳಾ ಕೇಂದ್ರಿತ ಕಥೆಯನ್ನು ಆಯ್ದುಕೊಂಡು, ‘ಪ್ರೀತಿ ಕಿತಾಬು’ ಚಿತ್ರ ಸಿದ್ಧಪಡಿಸಿದ್ದಾರೆ. ತಾಂತ್ರಿಕ ಕೆಲಸಗಳನ್ನೆಲ್ಲ ಪೂರೈಸಿರುವ ಚಿತ್ರತಂಡವು, ಹಾಡುಗಳ ಸಿ.ಡಿ ಬಿಡುಗಡೆಯನ್ನು ಈಚೆಗೆ ಹಮ್ಮಿಕೊಂಡಿತ್ತು.

ಸಂಶೋಧಕಿಯೊಬ್ಬಳು ಏನನ್ನೋ ಹುಡುಕಲು ಪಶ್ಚಿಮ ಘಟ್ಟಕ್ಕೆ ಬಂದಾಗ ನಡೆಯುವ ಘಟನೆಗಳು ಚಿತ್ರದ ಸಾರ. ಮಹಿಳಾಪ್ರಧಾನ ಕಥೆಯಾಗಿರುವುದರಿಂದ, ಈ ಸಿನಿಮಾದಲ್ಲಿ ಅಭಿನಯಿಸಿರುವುದರ ಬಗ್ಗೆ ನಾಯಕಿ ರಶ್ಮಿ ಅವರಿಗೆ ಹೆಮ್ಮೆಯಿದೆ. ‘ನನ್ನದು ಗಟ್ಟಿ ಪಾತ್ರ. ನನ್ನ ಪಾತ್ರದ ಸುತ್ತಮುತ್ತ ಕಥೆ ಸುತ್ತುತ್ತದೆ. ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡ ಕಥೆಗಳು ಕಡಿಮೆಯಾಗಿರುವ ಈ ಸಮಯದಲ್ಲಿ ಪ್ರೀತಿ ಕಿತಾಬು ಹೊಸ ಪ್ರಯತ್ನದಂತಿದೆ’ ಎಂಬ ಮಾತು ಅವರದು.

ಈ ಮೊದಲು ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನೆಹಾಲ್, ‘…ಕಿತಾಬು’ ಮೂಲಕ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಅವರದು ಇದರಲ್ಲಿ ಲವರ್ ಬಾಯ್ ರೀತಿಯ ಪಾತ್ರ ಇದೆಯಂತೆ. ಸಾಗರದ ಸುತ್ತಮುತ್ತ, ಜೋಗ, ಕೊಡಚಾದ್ರಿ, ಇಕ್ಕೇರಿ ಹಾಗೂ ಶರಾವತಿ ಹಿನ್ನೀರು ಪ್ರದೇಶದಲ್ಲಿ 42 ದಿನಗಳ ಕಾಲ ನಡೆದ ಚಿತ್ರೀಕರಣದ ಅನುಭವಗಳನ್ನು ನಿರ್ದೇಶಕ ವಿಠ್ಠಲ್ ಭಟ್ ಹಂಚಿಕೊಂಡರು.

ಐದು ಹಾಡುಗಳಿಗೆ ಸಂಗೀತ ಹೊಸೆದಿರುವ ವಿ.ಮನೋಹರ್, ‘ಸದಭಿರುಚಿಯ ಸಿನಿಮಾ ಇದು’ ಎಂದು ಹೊಗಳಿದರು. ಟೈಟಲ್ ಟ್ರ್ಯಾಕ್‌ಗೆ ಪುನೀತ್ ದನಿ ಕೊಟ್ಟಿರುವುದು ತಮಗೆಲ್ಲ ಖುಷಿ ಕೊಟ್ಟಿದೆ ಎಂದ ಮನೋಹರ್, ‘ಸಿನಿಮಾ ಗೆಲ್ಲಲಿ; ಅದು ಗೆದ್ದರೆ ನಾನು ಎಲ್ಲರನ್ನೂ ತಲುಪಿದಂತೆ’ ಎಂದು ನುಡಿದರು.

ಸಿ.ಡಿ ಬಿಡುಗಡೆ ಮಾಡಿದ ನಟಿ ಸುಧಾರಾಣಿ, ಹೆಣ್ಣನ್ನು ಕೇಂದ್ರೀಕರಿಸಿ ಸಿನಿಮಾ ಮಾಡಿರುವ ವಿಠ್ಠಲ್ ಅವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂಥ ಚಿತ್ರಗಳಿಗೆ ತಾವು ಯಾವತ್ತೂ ಬೆಂಬಲ ಕೊಡುವುದಾಗಿ ಹೇಳಿದರು.

ಸಿ.ಡಿ ಹೊರತಂದಿರುವ ಡಿ–ಬೀಟ್‌ನ ಶೈಲಜಾ, ಛಾಯಾಗ್ರಾಹಕ ಗಣೇಶ ಹೆಗಡೆ, ಇನ್ನೊಬ್ಬ ನಾಯಕಿ ಪೂರ್ವಿ, ನಿರ್ಮಾಪಕ ಶಮಂತ್ ಇತರರು ಮಾತನಾಡಿದರು. ಇದಕ್ಕೂ ಮುನ್ನ ಹಾಡುಗಳು ಹಾಗೂ ಟ್ರೇಲರ್ ಪ್ರದರ್ಶಿಸಲಾಯಿತು.

Write A Comment