ಮನೋರಂಜನೆ

ಕತ್ರಿನಾ ಎಲ್ಲರಂತೆ ಗೆದ್ದು ಬೀಗುವ ನಟಿಯಲ್ಲ

Pinterest LinkedIn Tumblr

katrina_kaifಕೆಲ ನಟಿಮಣಿಯರು ಒಮ್ಮೆಲೆ ಗೆದ್ದು ಬೀಗುತ್ತಾರೆ, ಮತ್ತೆ ಕೆಲವರು ಹೀನಾಯವಾಗಿ ಸೋತು ಸೊರಗಿ ಮೂಲೆ ಸೇರುತ್ತಾರೆ. ಆದರೆ ಕತ್ರಿನಾ ಕೈಫ್ ಹಾಗಲ್ಲ. ಅತಿ ಎತ್ತರಕ್ಕೂ ಏರದೆ, ಪಾತಾಳಕ್ಕೂ ಕುಸಿಯದೆ ತನ್ನತನ ಕಾಪಾಡಿಕೊಳ್ಳುವ ಮೂಲಕ ‘ನಾನು ಎಲ್ಲರಂಥಲ್ಲ’ ಎಂಬುದನ್ನು ಸಾಬೀತುಪಡಿಸುತ್ತಲೇ ಬಂದಿದ್ದಾರೆ. ವರ್ಷಕ್ಕೆರಡು ಚಿತ್ರವಾದರೂ ಸರಿಯೇ, ನೋಡಿಕೊಂಡು ಹೆಜ್ಜೆ ಇಡುವ ವ್ಯಕ್ತಿತ್ವ ಅವರದು. ವೃತ್ತಿಬದುಕು ಯಾವಾಗಲೂ ಸೇಫ್ ಆಗಿರುವಂತೆ ನೋಡಿಕೊಳ್ಳುವ ಚಾಣಾಕ್ಷತೆಯೂ ಅವರಿಗೆ ಲಭಿಸಿದೆ. ರಣಬೀರ್ ಕಪೂರ್ ಜತೆಗಿನ ಪ್ರೀತಿ-ಪ್ರೇಮದ ಪುಕಾರು ಹಬ್ಬುತ್ತಿದ್ದರೂ ಅದರಿಂದ ಕ್ಯಾಟ್ ವೃತ್ತಿ ಬದುಕಿಗೇನೂ ತೊಂದರೆಯಾಗದಂತೆ ನೋಡಿಕೊಂಡ ಜಾಣೆ ಈ ಕತ್ರಿನಾ.

ರಣಬೀರ್-ಕತ್ರಿನಾ ಲವ್ ಕಹಾನಿ ಶುರುವಾದಾಗಿನಿಂದ ರಣಬೀರ್ ಸಿನಿಗ್ರಾಫ್​ನಲ್ಲಿ ಕುಸಿತ ಕಾಣತೊಡಗಿದೆ. ಆದರೆ ಕತ್ರಿನಾ ಸೋಲಿನ ಸುಳಿಗೆ ಸಿಕ್ಕಲಿಲ್ಲ. 2014ರಲ್ಲಿ ‘ಬ್ಯಾಂಗ್ ಬ್ಯಾಂಗ್’ ಮತ್ತು 2015ರಲ್ಲಿ ‘ಫ್ಯಾಂಟಮ್ ತೆರೆಕಂಡು ಹಿಟ್ ಎನಿಸಿಕೊಂಡಿವೆ. ಕಳೆದೆರಡು ವರ್ಷಗಳಲ್ಲಿ ಚಿತ್ರಗಳ ಸಂಖ್ಯೆ ಕಡಿಮೆ ಆಯ್ತು ಎಂಬ ಬೇಸರ ಅವರ ಅಭಿಮಾನಿಗಳಿಗಿರಬಹುದು. ಅದು ಈ ವರ್ಷಕ್ಕೆ ಮಾತ್ರ. ಯಾಕೆಂದರೆ 2016ಕ್ಕೆ ಕತ್ರಿನಾ ನಟನೆಯ ಮೂರು ಚಿತ್ರಗಳು ತೆರೆಗೆ ಬರಲಿವೆ. ‘ಫಿತೂರ್’, ‘ಜಗ್ಗಾ ಜಾಸೂಸ್’ ಮತ್ತು ‘ಬಾರ್ ಬಾರ್ ದೇಖೊ’ ಚಿತ್ರಗಳು ಮೂರು-ಮೂರು ತಿಂಗಳ ಅಂತರದಲ್ಲಿ ತೆರೆಕಾಣುವ ಅಂದಾಜಿನಲ್ಲಿವೆ.

ಟಾಪ್ ನಟಿಯರ ಪಟ್ಟಿಯಲ್ಲಿ ಕತ್ರಿನಾ ಹೆಸರಿದ್ದರು ಕೂಡ ಏನೋ ಒಂದು ಕೊರತೆ ಎದ್ದು ಕಾಣುವುದಂತೂ ನಿಜ. ಏನದು? ಮಹಿಳಾ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಲು ಸಾಧ್ಯವಾಗದಿರುವುದು. ಹೌದು, ಈಗಾಗಲೇ ದೀಪಿಕಾ ಪಡುಕೋಣೆ (ಪಿಕು), ಕಂಗನಾ ರಣೌತ್ (ಕ್ವೀನ್, ತನು ವೆಡ್ಸ್ ಮನು ರಿರ್ಟನ್ಸ್), ಪ್ರಿಯಾಂಕಾ ಚೋಪ್ರಾ (ಮೇರಿ ಕೊಮ್, ಆಲಿಯಾ ಭಟ್ (ಹೈ ವೇ) ಮುಂತಾದವರು ಮಹಿಳಾ ಪ್ರಧಾನ ಚಿತ್ರಗಳ ಟ್ರೆಂಡ್​ನಲ್ಲಿ ಗೆಲುವಿನ ರುಚಿ ಕಂಡಿದ್ದಾರೆ. ಕತ್ರಿನಾಗೆ ಅಂಥ ಚಿತ್ರಗಳ ಅವಕಾಶ ಬರುತ್ತಿಲ್ಲವೇ? ಹಾಗಂತ ನೀವಂದುಕೊಂಡರೆ, ಅದು ತಪ್ಪು. ಕಾರಣ ಅವರಿಗೆ ಇತರರನ್ನು ಅನುಸರಿಸುವ ಅಗತ್ಯ ಇಲ್ಲವಂತೆ! ‘ಆ ರೀತಿಯ ಕಥೆಗಳು ನನಗೆ ಹಿಡಿಸುವುದಿಲ್ಲ. ಅದು ನನ್ನ ತಪ್ಪಲ್ಲ’ ಎಂದು ನೇರವಾಗಿಯೇ ನುಡಿಯುತ್ತಾರವರು.

ಇನ್ನು, ಪ್ರೀತಿ ಮತ್ತು ಪ್ರಿಯಕರನ ಬಗ್ಗೆ ಅವರ ಮನಸ್ಸು ಸದಾ ತುಡಿಯುತ್ತಲೇ ಇರುತ್ತದೆ. ಸದ್ಯ ರಣಬೀರ್ ಕಪೂರ್ ಅದೃಷ್ಟ ನೆಟ್ಟಗಿಲ್ಲ. ಮಾಡಿದ ಚಿತ್ರಗಳೆಲ್ಲ ತೋಪೆದ್ದು ಹೋಗಿವೆ. ಒಂದೇ ಒಂದು ಗೆಲುವಿಗಾಗಿ ರಣಬೀರ್ ಹಂಬಲಿಸುತ್ತಿದ್ದಾರೆ. ಇದು ಕ್ಯಾಟ್​ಗೂ ಗೊತ್ತು. ‘ಸಿನಿಮಾ ಸೋಲಲಿ ಅಥವಾ ಗೆಲ್ಲಲಿ, ತಮ್ಮ ಪಾತ್ರಕ್ಕೆ ರಣಬೀರ್ ನ್ಯಾಯ ಸಲ್ಲಿಸುತ್ತಾರೆ. ಕೆಲ ಸಿನಿಮಾಗಳು ಸೋಲುತ್ತಿರುವುದು ದುರದೃಷ್ಟಕರ. ಇದು ಅವರಿಗೂ ನೋವು ನೀಡಿರುತ್ತದೆ’ ಎಂದು ಮರುಗುವ ಕತ್ರಿನಾಗೆ, ಖಂಡಿತ ರಣಬೀರ್ ಗೆದ್ದು ಬೀಗುತ್ತಾರೆ ಎಂಬ ದೃಢ ವಿಶ್ವಾಸವಿದೆ.

Write A Comment