ಮನೋರಂಜನೆ

ಐರಾವತ ಜೊತೆ ಬರೋರ್ಯಾರು?

Pinterest LinkedIn Tumblr

Airavatha-(1)ದರ್ಶನ್‌ ನಾಯಕರಾಗಿರುವ “ಐರಾವತ’ ಚಿತ್ರ ಅಕ್ಟೋಬರ್‌ 1 ರಂದು ತೆರೆಕಾಣುತ್ತಿದೆ. ಎಲ್ಲಾ ಏರಿಯಾಗಳು ಮಾರಾಟವಾಗಿದ್ದು, ಸಿನಿಮಾವನ್ನು ಜನ ಹೇಗೆ ಸ್ವೀಕರಿಸುತ್ತಾರೆಂಬ ಕುತೂಹಲದಲ್ಲಿ ಚಿತ್ರತಂಡವಿದೆ. ಈಗ ಎದ್ದಿರುವ ಪ್ರಶ್ನೆ ಏನೆಂದರೆ “ಐರಾವತ’ ಚಿತ್ರದ ಜೊತೆ ಬೇರೆ ಯಾವ ಕನ್ನಡ ಚಿತ್ರ ಬಿಡುಗಡೆಯಾಗುತ್ತದೆಂಬುದು. ಇತ್ತೀಚಿನ ಮೂರು ವಾರಗಳಲ್ಲಿ ಸತತವಾಗಿ ವಾರಕ್ಕೆ ಮೂರ್‍ನಾಲ್ಕು ಚಿತ್ರಗಳಂತೆ ತೆರೆಕಂಡಿವೆ. ಅದರಲ್ಲಿ ಬಹುತೇಕ ಚಿತ್ರಗಳು ಒಂದೊಂದೇ ವಾರಕ್ಕೆ ಥಿಯೇಟರ್‌ನಿಂದ ಗೇಟ್‌ಪಾಸ್‌ ಪಡೆದಿವೆ. ಈಗ “ಐರಾವತ’ ಜೊತೆ ಯಾವ ಚಿತ್ರ ಬಿಡುಗಡೆಯಾಗುತ್ತವೆ ಎಂದರೆ ಸದ್ಯಕ್ಕೆ ಯಾವುದೂ ಇಲ್ಲ ಎಂಬ ಉತ್ತರ ಬರುತ್ತದೆ.

ಒಂದಷ್ಟು ನಿರೀಕ್ಷೆ ಹುಟ್ಟುಹಾಕಿರುವ “ಐರಾವತ’ ಚಿತ್ರ ಕೇವಲ ಕರ್ನಾಟಕವೊಂದರಲ್ಲೇ ಸುಮಾರು 350 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಅಲ್ಲಿಗೆ ಕನ್ನಡ ಚಿತ್ರವೊಂದು ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಂತಾಗುತ್ತದೆ. ಒಂದು ಕಡೆ ಸ್ಟಾರ್‌ ಸಿನಿಮಾ, ಇನ್ನೊಂದು ಕಡೆ ಅತಿ ಹೆಚ್ಚು ಥಿಯೇಟರ್‌. ಅಲ್ಲಿಗೆ ಹೊಸಬರ ಚಿತ್ರಗಳು ತೆರೆಕಂಡರೆ ಹೇಳಹೆಸರಿಲ್ಲದಂತೆ ಹೋಗಬೇಕಾಗುತ್ತದೆ ಹಾಗೂ ಥಿಯೇಟರ್‌ ಕೂಡಾ ಸಿಗೋದಿಲ್ಲ ಎಂಬ ಕಾರಣಕ್ಕೆ ಇಲ್ಲಿವರೆಗೆ ಯಾವುದೇ ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿಲ್ಲ.

ಒಂದು ಕಡೆ ಅಕ್ಟೋಬರ್‌ 1 ರಂದು ದರ್ಶನ್‌ “ಐರಾವತ’ ತೆರೆಕಂಡರೆ ಅದೇ ದಿನ ತಮಿಳು ಚಿತ್ರ “ಪುಲಿ’ ಕೂಡಾ ತೆರೆಕಾಣುತ್ತಿದೆ. ವಿಜಯ್‌ ನಾಯಕರಾಗಿರುವ ಈ ಚಿತ್ರದಲ್ಲಿ ಸುದೀಪ್‌ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಈಗಾಗಲೇ “ಪುಲಿ’ ಚಿತ್ರದ ಟ್ರೇಲರ್‌ ಕೂಡಾ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದು, ಈ ಎರಡೂ ದೊಡ್ಡ ಚಿತ್ರಗಳ ಮಧ್ಯೆ ಬರುವ ರಿಸ್ಕ್ಗೆ ಇದುವರೆಗೆ ಯಾವುದೇ ಚಿತ್ರ ಕೈ ಹಾಕಿಲ್ಲ. ಮುಂದೆ ಪ್ರೇಕ್ಷಕರ ನಿರ್ಧಾರವೇ ಅಂತಿಮ ಎಂದುಕೊಂಡು ಯಾವುದಾದರೂ ಚಿತ್ರ ಬಿಡುಗಡೆಯಾದರೂ ಅಚ್ಚರಿಯಿಲ್ಲ.
-ಉದಯವಾಣಿ

Write A Comment