ಮನೋರಂಜನೆ

ಪ್ರಜ್ವಲ್ ದೇವರಾಜ್ ಅಭಿನಯದ ‘ಅರ್ಜುನ: ಸರಳ ವ್ಯೂಹ ಸಸ್ಪೆನ್ಸ್ ಮೋಹ!

Pinterest LinkedIn Tumblr

arjuna-fiಶುರುವಿನಲ್ಲಿಯೇ ಒಂದು ಕೊಲೆ, ನಂತರ ರಹಸ್ಯಗಳ ಸರಮಾಲೆ, ಆಮೇಲೊಂದು ಕುತೂಹಲದ ಹಿನ್ನೆಲೆ, ಕೊನೆಯಲ್ಲಿ ಸುಖಾಂತ್ಯದ ಅಲೆ! ನಿರ್ದೇಶಕ ಪಿ.ಸಿ. ಶೇಖರ್ ತೆರೆಗೆ ತಂದಿರುವ ‘ಅರ್ಜುನ’ ಚಿತ್ರದ ಹೈಲೈಟ್​ಗಳಿವು. ಕಥೆ ಹೊಸದೆನಿಸಿದರೂ ಅದರ ಸೂತ್ರ ಹಳತು. ಯಾವುದೇ ಅಬ್ಬರ, ಗೊಂದಲವಿಲ್ಲದೆ, ಸಿಂಪಲ್ ಎನಿಸಿದರೂ ಸುಂದರವಾಗಿ ನಿರೂಪಿಸಿದ್ದಾರೆ ನಿರ್ದೇಶಕರು

ಇಲ್ಲಿ ಭ್ರಷ್ಟ ರಾಜಕಾರಣಿಗಳು ಹೆಣೆದಿರುವ ವ್ಯೂಹವಿದೆ. ಅದಕ್ಕೆ ಭ್ರಷ್ಟ ಪೊಲೀಸ್ ಅಧಿಕಾರಿಗಳ ಬೆಂಬಲವಿದೆ. ಅಂಥ ವ್ಯೂಹವನ್ನು ನಾಯಕ ಹೇಗೆ ಭೇದಿಸುತ್ತಾನೆ ಎಂಬುದೇ ಕಥೆಯ ಸ್ವಾರಸ್ಯ. ಅಲ್ಲಲ್ಲಿ ನುಸುಳುವ ಡಬಲ್ ಮೀನಿಂಗ್ ಸಂಭಾಷಣೆಗಳು ಶಿಳ್ಳೆ ಗಿಟ್ಟಿಸಿದರೂ ‘ಅರ್ಜುನ’ನ ವ್ಯಕ್ತಿತ್ವಕ್ಕೆ ಅವೇ ಮಾರಕ. ನಾಯಕಿ ಭಾಮಾಗೆ ಅವಕಾಶ ಕಮ್ಮಿ. ಆದರೂ ಇರುವಷ್ಟು ಹೊತ್ತು ಅವರೇ ಪರದೆ ಆವರಿಸಿಕೊಂಡಿದ್ದಾರೆ. ನಾಯಕನಿಗೆ ಸಮನಾಗಿ ಮಿಂಚಿದ್ದಾರೆ ದೇವರಾಜ್. ಮೊದಲಾರ್ಧ ಕಾಮಿಡಿ ಪೀಸ್ ಆಗಿ, ದ್ವಿತೀಯಾರ್ಧ ಖಳನಾಗಿ ಇಷ್ಟವಾಗುತ್ತಾರೆ ‘ಕಡ್ಡಿಪುಡಿ’ ಚಂದ್ರು. ಇರುವ ಒಂದೇ ಹಾಡಿನಲ್ಲಿ ಗುಂಗು ಹತ್ತಿಸುತ್ತಾರೆ ಅರ್ಜುನ್ ಜನ್ಯ. ಅನಗತ್ಯ ಹೀರೋಯಿಸಂ ಇಲ್ಲದೆ ಹೇಳಬೇಕಾದ್ದನ್ನು 104 ನಿಮಿಷದಲ್ಲಿ ಹೇಳಿ ಮುಗಿಸುವ ‘ಅರ್ಜುನ’ ಚಿತ್ರಕ್ಕೆ ‘ವಿಜಯವಾಣಿ’ ಓದುಗ ವಿಮರ್ಶಕರು ನೀಡಿರುವ ಸರಾಸರಿ

ಅಂಕ 10ಕ್ಕೆ 6. ಸ್ಟಾರ್ ಲೆಕ್ಕದಲ್ಲಿ **

****

ಚಿತ್ರ: ಅರ್ಜುನ | ನಿರ್ವಣ: ಕೆ. ಮುತ್ತುರಾಜ್,

ಪಿ. ರಮೇಶ್ | ನಿರ್ದೇಶನ: ಪಿ.ಸಿ. ಶೇಖರ್ | ಪಾತ್ರವರ್ಗ: ಪ್ರಜ್ವಲ್ ದೇವರಾಜ್, ಭಾಮಾ, ದೇವರಾಜ್, ‘ಕಡ್ಡಿಪುಡಿ’ ಚಂದ್ರು, ರಮೇಶ್ ಭಟ್ ಮುಂತಾದವರು

****

ಭಾಮಾ ಆಕರ್ಷಣೆ

ಕೊಲೆ ಪ್ರಕರಣವನ್ನು

ದೇವರಾಜ್ ಭೇದಿಸುವ ಶೈಲಿ ಚೆನ್ನಾಗಿದೆ. ನಟನೆಯೂ ಅದ್ಭುತ ಎನಿಸುತ್ತದೆ. ಅರ್ಜುನ್​ಜನ್ಯ ಸಂಗೀತ ಇಂಪಾಗಿದೆ. ಇವರೆಲ್ಲರ ನಡುವೆ ನಾಯಕಿ ಭಾಮಾ ನಟನೆ ಮನಸೆಳೆಯುತ್ತದೆ.

ರಮೇಶ್ ಭಟ್, ಶೀತಲ್

ಶೆಟ್ಟಿ ಪಾತ್ರಗಳಿಗೆ ಹೆಚ್ಚು

ಪ್ರಾಮುಖ್ಯತೆ ಇಲ್ಲ.

| ರಸೂಲ್ ನದಾಫ್ ಜಮಖಂಡಿ

****

ನಿರೂಪಣೆ ಕುತೂಹಲ ಕಾಯ್ದುಕೊಂಡಿದೆ!

ಒಂದು ಕೊಲೆಯ ಸುತ್ತ ಸುತ್ತುವ ಚಿತ್ರ ಪೇಕ್ಷಕರನ್ನು ಸಂಪೂರ್ಣವಾಗಿ ಆವರಿಸುತ್ತದೆ. ಮುಂದೇನಾಗುತ್ತದೆ ಎಂಬ ಕಾತರ ಹುಟ್ಟಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಪ್ರಜ್ವಲ್ ದೇವರಾಜ್ ಅಷ್ಟಾಗಿ ಇಷ್ಟವಾಗುವುದಿಲ್ಲ. ಕೊಟ್ಟ ಪಾತ್ರದಲ್ಲಿ ದೇವರಾಜ್ ಖದರ್ ತೋರಿಸಿದ್ದಾರೆ.

| ನಾಗೇಶ್ ಶಿವಮೊಗ್ಗ

****

ಸಸ್ಪೆನ್ಸ್ ಪ್ರಿಯರಿಗೆ ಇಷ್ಟವಾಗುತ್ತದೆ

ಕಥೆ ವೇಗವಾಗಿದ್ದು, ಪಾತ್ರಗಳ ಚಲನೆ ಕೂಡ ಜೋರು. ಕುತೂಹಲಕಾರಿ ತಿರುವುಗಳುಳ್ಳ ಸಿನಿಮಾದಲ್ಲಿ ಹಿನ್ನೆಲೆ ಸಂಗೀತ ಆಕರ್ಷಕ. ನಾಯಕಿ ಅಷ್ಟೊಂದು ಗಮನ ಸೆಳೆಯುವುದಿಲ್ಲ. ಕ್ಯಾಮರಾ ಮೂಲಕ ಸೆರೆಯಾಗಿರುವ ದೃಶ್ಯಾವಳಿಗಳು ಸಿನಿಮಾಗೆ ಚೆಂದದ ಚೌಕಟ್ಟು ಒದಗಿಸಿವೆ. ಕ್ಲೈಮ್ಯಾಕ್ಸ್ ರೋಮಾಂಚನಕಾರಿ. ಪ್ರಜ್ವಲ್ ದೇವರಾಜ್ ಮಾಗಿದ ಅಭಿನಯ, ಮೌನದೊಂದಿಗಿನ ಅವರ ತಾಕಲಾಟ ಒಳ್ಳೆಯ ಅನುಭವ ಕೊಡುತ್ತದೆ. ಸಸ್ಪೆನ್ಸ್ ಇಷ್ಟಪಡುವವರು ಸಿನಿಮಾ ನೋಡಬಹುದು.

| ಭೀಮಪ್ಪ ಬೆಳಗಾವಿ

****

ಅತಿ ನಿರೀಕ್ಷೆ ಬೇಡ

ಖಡಕ್ ಡೈಲಾಗ್​ಗಳು ನೆನಪಿನಲ್ಲಿ ಉಳಿಯುತ್ತವೆ. ‘ಅರ್ಜುನ’ನ ಅವತಾರದಲ್ಲಿ

ಪ್ರಜ್ವಲ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಹಾಗಂತ ಎಲ್ಲ ವರ್ಗದ ಜನರಿಗೆ ಇಷ್ಟವಾಗುತ್ತದೆ ಎಂದು ಹೇಳುವುದು ಕಷ್ಟ. ಅತಿಯಾದ ನಿರೀಕ್ಷೆ ಇಟ್ಟುಕೊಂಡು ಬಂದರೆ ನಿರಾಸೆ ಕಟ್ಟಿಟ್ಟ ಬುತ್ತಿ!

| ಚಂದನಾ ಮಂಗಳೂರು

***

ಫೈಟ್ ಚೆನ್ನಾಗಿದೆ

ಮರ್ಡರ್ ಮಿಸ್ಟರಿ ಕಥೆಯುಳ್ಳ ಚಿತ್ರವಿದು. ಆದರೂ ಹೆಚ್ಚಿನ ರಕ್ತಪಾತವಿಲ್ಲ! ಚಿಕ್ಕ ಕೊಠಡಿಯಲ್ಲಿ ನಡೆಯುವ ಕೊನೆಯ ಫೈಟ್ ಚೆನ್ನಾಗಿದೆ. ಮಧ್ಯಮ ವರ್ಗದ ಯುವಕನಾಗಿ ಪ್ರಜ್ವಲ್ ಮನಸೆಳೆಯುತ್ತಾರೆ. ಅನಗತ್ಯ ಕಾಮಿಡಿ ದೃಶ್ಯಗಳನ್ನು ತುರುಕದೆ ಪೋಷಕ ಪಾತ್ರಧಾರಿಗಳಿಂದಲೇ ಹಾಸ್ಯ ಹೊಮ್ಮಿಸಿರುವುದು ಪ್ಲಸ್​ಪಾಯಿಂಟ್.

| ಅಭಿಷೇಕ್ ಬೆಂಗಳೂರು

****

ಅಪ್ಪ-ಮಗನ ಜುಗಲ್​ಬಂದಿ

ಚಿತ್ರದಲ್ಲಿ ಅಪ್ಪ-ಮಗನ (ದೇವರಾಜ್ ಮತ್ತು ಪ್ರಜ್ವಲ್) ಜುಗಲ್​ಬಂದಿ ಖುಷಿ ನೀಡುತ್ತದೆ. ಪತ್ತೆದಾರಿ ಕಥೆಯ ಬೆನ್ನು ಬಿದ್ದಿರುವ ನಿರ್ದೇಶಕ ಪಿ.ಸಿ. ಶೇಖರ್ ಕೊಂಚ ಭರವಸೆ ಉಳಿಸಿಕೊಂಡಿದ್ದಾರೆ. ಸ್ಟಂಟ್ಸ್​ಗೆ ಹೆಸರು ಮಾಡಿರುವ ಅಪ್ಪ-ಮಗ ಇಬ್ಬರೂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರೂ ಒಂದೇ ಫೈಟ್ ಇರುವುದು ನಿರಾಸೆ ಮೂಡಿಸುತ್ತದೆ!

| ಮಂಜು ಹೊಸಪೇಟೆ

****

ಥ್ರಿಲ್ಲಿಂಗ್ ಆಗಿದೆ

ಬಕ್ರೀದ್ ಹಬ್ಬದ ದಿನ ಸಮಯ ಕಳೆಯುವುದಕ್ಕೆಂದು ಚಿತ್ರಮಂದಿರಕ್ಕೆ ಬಂದಿದ್ದು ಸಾರ್ಥಕ ವಾಯಿತು. ಉತ್ತಮ ಚಿತ್ರ ನೋಡಿದ ಥ್ರಿಲ್ ಸಿಕ್ಕಿತು. ನಿರ್ದೇಶಕರು ಕಥೆ ಹೇಳುವ ವಿಧಾನ ಇಷ್ಟವಾಯಿತು.

| ರಾಜಾಸಾಬ್ ಹಾಸನ

****

ಬೋರ್ ಆಗಲ್ಲ

ಎಲ್ಲಿಯೂ ಬೋರ್ ಆಗದಂತೆ ನೋಡಿಸಿಕೊಳ್ಳುವ ಗುಣ ಚಿತ್ರಕ್ಕಿದೆ. ಹಾಗಾಗಿ ಯುವಜನರಿಗೆ ಹಿಡಿಸುತ್ತದೆ ಅನ್ನಬಹುದು. ಬಹುದಿನಗಳ ನಂತರ ದೇವರಾಜ್ ಅವರನ್ನು ತೆರೆಯ ಮೇಲೆ ನೋಡಿ ಖುಷಿಯಾಯಿತು.

| ಅಮೋಘಪ್ರಭು, ಕಲಬುರಗಿ

****

ಹಾಸ್ಯ- ಹಾಡಿನ ಕೊರತೆ

ಪತ್ತೆದಾರಿ ಕಥೆಯಂತೆ ಗಂಭೀರ ಚಿತ್ರವಾಗಿ ಕಂಡುಬಂದರೂ ಪರಿಣಾಮಕಾರಿಯಾಗಿ ಬಂದಿಲ್ಲ. ದೇವರಾಜ್ ಎಂದಿನಂತೆ ತನಿಖಾ ಅಧಿಕಾರಿಯ ಗತ್ತಿನಲ್ಲಿ ಗಮನ ಸೆಳೆಯುತ್ತಾರೆ. ಪ್ರಜ್ವಲ್​ಗಿಂತಲೂ ದೇವರಾಜ್ ನಟನೆಯೇ ಸೂಪರ್. ಏಕೈಕ ಹಾಡು ಇರುವುದರಿಂದ ಒಂದಿಷ್ಟು ಬೇಸರ ಆಗುವುದು ಸಹಜ. ಹಾಸ್ಯ ಸನ್ನಿವೇಶಗಳ ಕೊರತೆಯೂ ಕಾಡುತ್ತದೆ.

| ಮಂಜು ಜಾಡರ ಶಿಗ್ಗಾವಿ

Write A Comment