ಮನೋರಂಜನೆ

‘ಅತಿರಥ’ನ ಸ್ನೇಹ ಮೀಮಾಂಸೆ

Pinterest LinkedIn Tumblr

Atiratha1_0ಪಾಂಡಿಚೇರಿಯಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಘಟನೆಯೊಂದು ಚಿತ್ರರೂಪ ಪಡೆದುಕೊಳ್ಳಲು ಸಜ್ಜಾಗಿದೆ. ಆಟೋ ಚಾಲಕ, ಆತನ ಸ್ನೇಹಿತ ಹಾಗೂ ಹುಡುಗಿಯೊಬ್ಬಳನ್ನು ಒಳಗೊಂಡಿದ್ದ ಘಟನೆಯನ್ನು ‘ಅತಿರಥ’ ಎಂಬ ಹೆಸರಿನೊಂದಿಗೆ ಸಿನಿಮಾ ರೂಪಕ್ಕೆ ತರಲು ಮುತ್ತುರಾಮ್ ಸಿದ್ಧತೆ ನಡೆಸಿದ್ದಾರೆ.

ಮುತ್ತುರಾಮ್ ಮೂಲತಃ ತಮಿಳುನಾಡಿನವರು. ಕನ್ನಡ ಚಿತ್ರ ನಿರ್ದೇಶನ ಮಾಡುವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇದಕ್ಕೂ ಮೊದಲು ಅವರು ಕೆಲವು ತಮಿಳು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಕನ್ನಡ ಭಾಷೆ ಅರ್ಥವಾಗುತ್ತದೆ. ಆದರೆ ಮಾತಾಡಲು ಬರುವುದಿಲ್ಲವಂತೆ. ಹಾಗಾದರೆ ನಿರ್ದೇಶನ ಹೇಗೆ ಮಾಡುತ್ತೀರಿ ಎಂಬ ಸುದ್ದಿಮಿತ್ರರ ಪ್ರಶ್ನೆಗೆ, ‘ಸಿನಿಮಾಕ್ಕೆ ಭಾಷೆಯ ಹಂಗು ಇಲ್ಲ. ನನ್ನ ಸಹಾಯಕರ ನೆರವಿನಿಂದ ಎಲ್ಲ ಸುಲಭವಾಗಲಿದೆ’ ಎನ್ನುತ್ತಾರೆ!

‘ಗೂಳಿಹಟ್ಟಿ’ ಚಿತ್ರೀಕರಣ ನಡೆಯುತ್ತಿದ್ದಾಗ, ಅಲ್ಲಿಗೆ ಭುವನ್ ಚಂದ್ರಕಾಂತ ಭೇಟಿ ನೀಡಿದ್ದರು. ಪವನ್‌ಸೂರ್ಯ – ತೇಜಸ್ವಿನಿ ಅಭಿನಯ ನೋಡಿದ ಅವರು, ತಾವು ನಿರ್ಮಾಣ ಮಾಡುವ ಸಿನಿಮಾಕ್ಕೆ ಅವರೇ ನಾಯಕ – ನಾಯಕಿ ಎಂದು ನಿರ್ಧಾರ ಮಾಡಿದ್ದರಂತೆ. ‘ಸಿನಿಮಾ ನಟನಾಗಬೇಕು ಎಂಬ ಆಸೆ ನನಗಿತ್ತು. ಅದು ಸಾಧ್ಯವಾಗಲಿಲ್ಲ. ಆದರೆ ಅತಿರಥ ಮೂಲಕ ನಿರ್ಮಾಪಕನಾಗುತ್ತಿದ್ದೇನೆ’ ಎಂದು ಖುಷಿಪಟ್ಟರು.

ಎರಡನೇ ಸಿನಿಮಾದಲ್ಲಿ ಕೂಡ ತಮಗೊಂದು ಒಳ್ಳೆಯ ಪಾತ್ರ ಸಿಕ್ಕಿದೆ ಎಂದ ಪವನ್‌ಸೂರ್ಯ, ಸ್ನೇಹಿತರ ಮಧ್ಯೆ ನಡೆಯುವ ಕಥೆ ಇದು ಎಂದರು. ‘ಸಾವಿರ ಪುಸ್ತಕಗಳು ಒಬ್ಬ ಉತ್ತಮ ಸ್ನೇಹಿತನಿಗೆ ಸಮ; ಒಬ್ಬ ಕೆಟ್ಟ ಗೆಳೆಯ ಸಾವಿರ ಸಮಸ್ಯೆಗೆ ಸಮ ಎಂಬುದನ್ನು ನಿರ್ದೇಶಕರು ತೋರಿಸಲಿದ್ದಾರೆ. ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡರೆ ಬದುಕು ಸುಲಭ. ಅದನ್ನು ಕೆಟ್ಟದ್ದಕ್ಕೆ ಬಳಸಿದರೆ ಜೀವನದಲ್ಲಿ ಸಮಸ್ಯೆ ಎದುರಾಗುತ್ತದೆ– ಈ ಸಂದೇಶ ಚಿತ್ರಕಥೆಯಲ್ಲಿದೆ’ ಎಂದು ಪವನ್ ಹೇಳಿದರು.

ಕನ್ನಡ ಚಿತ್ರರಂಗಕ್ಕೆ ಮತ್ತೆ ಬರುವ ನಿರೀಕ್ಷೆ ಇರಲಿಲ್ಲ. ಆದರೆ ಈಗ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ ಎಂದು ಸಂತಸದಿಂದ ನುಡಿದ ನಾಯಕಿ ತೇಜಸ್ವಿನಿ, ಈ ಚಿತ್ರದಲ್ಲಿ ತಮ್ಮದು ಸಾಫ್ಟ್‌ವೇರ್ ಎಂಜಿನಿಯರ್ ಪಾತ್ರ ಎಂದರು. ಕಾರ್ಯಕಾರಿ ನಿರ್ಮಾಪಕ ಮಹೇಶ್ ಸಿಎನ್., ಸಂಕಲನಕಾರ ನಾಗೇಂದ್ರ ಅರಸ್ ಮತ್ತಿತರರು ಮಾತನಾಡಿದರು. ಇದಕ್ಕೂ ಮುನ್ನ ಚಿತ್ರದ ಮುಹೂರ್ತವು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಚಿತ್ರರಂಗದ ಗಣ್ಯರು ಆಗಮಿಸಿ, ಶುಭಕೋರಿದರು.

Write A Comment