ಮನೋರಂಜನೆ

ಶಕೀಲಾ ಕುರಿತು ಸಿನ್ಮಾ ಮಾಡ್ತಾರಂತೆ ಇಂದ್ರಜಿತ್‌

Pinterest LinkedIn Tumblr

Love-You-Aalia-(1)ಇಂದ್ರಜಿತ್‌ ಲಂಕೇಶ್‌ ಮೊಗದಲ್ಲೀಗ ಎಂದಿಗಿಂತಲೂ ಕೊಂಚ ಜಾಸ್ತಿ ನಗು ತುಂಬಿದೆ! ವಿಷಯವಿಷ್ಟೇ, ಅವರ “ಲವ್‌ ಯು ಆಲಿಯಾ’ ಚಿತ್ರಕ್ಕೆ ಎಲ್ಲೆಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿರೋದು. ಇದಷ್ಟೇ ಅಲ್ಲ, ಅವರ ನಗು ಹೆಚ್ಚಾಗೋಕೆ ಕಾರಣ, ನಟಿ ಶಕೀಲಾ ಸಹ ಕಾರಣ ಎಂಬುದು ನಿಮಗೆ ಗೊತ್ತಿರಲಿ.

ಇಂದ್ರಜಿತ್‌ ಖುಷಿಯಾಗೋಕೂ, ನಟಿ ಶಕೀಲಾಗೂ ಏನು ಕಾರಣ ಎಂಬ ಪ್ರಶ್ನೆ ಎದುರಾಗಬಹುದು. ವಿಷಯ ಇರೋದೇ ಇಲ್ಲಿ. ಇಂದ್ರಜಿತ್‌ ಈಗ ಶಕೀಲಾ ಅವರ ಹಿಂದೆ ಬಿದ್ದಿದ್ದಾರೆ. ಅಂದರೆ, ಅವರೀಗ ಶಕೀಲಾ ಕುರಿತು ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ. ಶಕೀಲಾ ಅವರು ಬೆಳೆದು ಬಂದ ದಾರಿ ಮತ್ತು ಅವರ ಬದುಕಿನ ಕಥೆ ಆಧರಿಸಿ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಅದು ಹಿಂದಿ ಸಿನಿಮಾ ಅನ್ನೋದು ವಿಶೇಷ.

ಇಂದ್ರಜಿತ್‌ ಲಂಕೇಶ್‌ ಸ್ವತಃ ಈ ವಿಷಯ ಹೇಳಿಕೊಂಡಿದ್ದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ. ಚಿತ್ರತಂಡದ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಇಂದ್ರಜಿತ್‌, ಶಕೀಲಾ ಅವರ ಬಯೋಗ್ರಫಿ ಕುರಿತು ಸಿನಿಮಾ ಮಾಡುವುದಾಗಿ ಹೇಳಿಕೊಂಡರು. ಈಗಾಗಲೇ ಶಕೀಲಾ ಬದುಕಿನ ಕಥೆ ಪುಸ್ತಕರೂಪದಲ್ಲಿ ಬಂದಿವೆ. ಅವೆಲ್ಲವನ್ನು ಓದಿರುವ ಇಂದ್ರಜಿತ್‌, ಸಿನಿಮಾ ಮಾಡುವ ಮನಸ್ಸು ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಕುರಿತು ಶಕೀಲಾ ಅವರೊಂದಿಗೆ ಮಾತುಕತೆಯೂ ನಡೆಸಿದ್ದಾರೆ.

ಅಂದಹಾಗೆ, ಶಕೀಲಾ ಅವರ ಪಾತ್ರ ನಿರ್ವಹಿಸಲು ಬಾಲಿವುಡ್‌ ನಟಿ ಹುಮಾ ಖುರೇಷಿ ಆಯ್ಕೆಯಾಗಿದ್ದಾರೆ. “ಗ್ಯಾಂಗ್ಸ್‌ ಆಫ್ ವಸ್ಸೇಪುರ್‌’, “ಡಿಡೇ’, “ಇಷ್ಕಿಯಾ-2′, “ಬದ್ಲಾಪುರ್‌’ ಚಿತ್ರಗಳಲ್ಲಿ ನಟಿಸಿರುವ ಹುಮಾ ಖುರೇಷಿ, ಶಕೀಲಾ ಬದುಕಿನ ಚಿತ್ರಣ ಅಂದಾಕ್ಷಣ, ಮರುಮಾತಾಡದೆ ನಟಿಸೋಕೆ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ಅಂದಹಾಗೆ, ಈ ಚಿತ್ರವನ್ನು, ಮುಂಬೈನ ಕಾರ್ಪೊರೇಟ್‌ ಸಂಸ್ಥೆಯೊಂದು ನಿರ್ಮಿಸಲು ಮುಂದೆ ಬಂದಿದೆ. ಈಗಾಗಲೇ ಇಂದ್ರಜಿತ್‌ “ಶಕೀಲಾ’ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ.

ಹಾಗಾದರೆ, ಇದು ಹಿಂದಿಯಲ್ಲಿ ಮಾತ್ರ ತಯಾರಾಗುತ್ತಿದೆಯಾ ಅಥವಾ ಕನ್ನಡದಲ್ಲೂ ಆಗುತ್ತಾ? ಈ ಪ್ರಶ್ನೆಗೆ ಇಂದ್ರಜಿತ್‌ ಕೊಡುವ ಉತ್ತರ, ಹಿಂದಿಯಲ್ಲಿ ಮಾತ್ರ ತಯಾರಾಗುತ್ತೆ. ಇಲ್ಲಿನ ತಂತ್ರಜ್ಞರು ಬಾಲಿವುಡ್‌ ಚಿತ್ರಕ್ಕೆ ಕೆಲಸ ಮಾಡುತ್ತಾರಷ್ಟೇ ಎಂದು ವಿವರ ಕೊಡುತ್ತಾರೆ ಅವರು.
-ಉದಯವಾಣಿ

Write A Comment