ಮನೋರಂಜನೆ

ಡಬಲ್ಸ್‌ನಲ್ಲಿ ಹುಸಿಯಾದ ಭಾರತದ ನಿರೀಕ್ಷೆ

Pinterest LinkedIn Tumblr

TENNIS-DAVIS-IND-CZEನವದೆಹಲಿ (ಪಿಟಿಐ/ಐಎಎನ್‌ಎಸ್‌): ಡೇವಿಸ್‌ಕಪ್‌ ಟೆನಿಸ್‌ನಲ್ಲಿ  ವಿಶ್ವ ಗುಂಪಿಗೆ ಅರ್ಹತೆ ಗಳಿಸುವ ಭಾರತದ ಕನಸಿಗೆ ಅಲ್ಪ ಹಿನ್ನಡೆ ಉಂಟಾಗಿದೆ. ಡಬಲ್ಸ್‌ ವಿಭಾಗದಲ್ಲಿ ಲಿಯಾಂಡರ್‌ ಪೇಸ್‌ ಮತ್ತು ರೋಹನ್‌ ಬೋಪಣ್ಣ ಸೋಲು ಕಂಡಿದ್ದು ಇದಕ್ಕೆ ಕಾರಣ.

ಹೀಗಾಗಿ ಭಾನುವಾರ ನಡೆಯುವ ರಿವರ್ಸ್‌ ಸಿಂಗಲ್ಸ್‌ ಪಂದ್ಯಗಳತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯಗಳಲ್ಲಿ ಯೂಕಿ ಭಾಂಬ್ರಿ ಮತ್ತು ಸೋಮದೇವ್‌ ದೇವವರ್ಮನ್‌ ಗೆಲುವು ದಾಖಲಿಸು ವುದು ಅನಿವಾರ್ಯ.

ಶುಕ್ರವಾರ ನಡೆದ ಸಿಂಗಲ್ಸ್‌ ವಿಭಾಗದ ಮೊದಲ ಪಂದ್ಯದಲ್ಲಿ ಯೂಕಿ ಸೋತಿದ್ದರು. ಆದರೆ ಸೋಮದೇವ್‌ ಎರಡನೇ ಸಿಂಗಲ್ಸ್‌ನಲ್ಲಿ ಗೆದ್ದು ಭಾರತದ ಕನಸಿಗೆ ಜೀವ ತುಂಬಿದ್ದರು. ಹೀಗಾಗಿ ಡಬಲ್ಸ್‌ ವಿಭಾಗದ ಪಂದ್ಯ ಕುತೂಹಲ ಮೂಡಿಸಿತ್ತು.

ಅನುಭವಿ ಆಟಗಾರ ಲಿಯಾಂಡರ್‌ ಪೇಸ್‌ ಮತ್ತು ರೋಹನ್‌ ಬೋಪಣ್ಣ ಜತೆಯಾಗಿ ಆಡುತ್ತಿದ್ದ ಕಾರಣ ಭಾರತಕ್ಕೆ  ಗೆಲುವು ಒಲಿಯಬಹುದು ಎಂದು ಭಾವಿಸಲಾಗಿತ್ತು.

ಆದರೆ ಪೇಸ್‌ ಮತ್ತು ಬೋಪಣ್ಣ 5–7, 2–6, 2–6ರಲ್ಲಿ ಜೆಕ್‌ ಗಣರಾಜ್ಯದ ರಾಡೆಕ್‌ ಸ್ಟೆಪಾನಕ್‌ ಮತ್ತು ಆ್ಯಡಮ್‌ ಪೆವಲಾಸೆಕ್‌ ಎದುರು ಸೋತು ತಮ್ಮ ಮೇಲಿನ ನಿರೀಕ್ಷೆ ಹುಸಿಗೊಳಿಸಿದರು.

ಹಿಂದಿನ 15 ವರ್ಷಗಳ ಅವಧಿಯಲ್ಲಿ ಡೇವಿಸ್‌ಕಪ್‌ ಡಬಲ್ಸ್‌ನಲ್ಲಿ ಪೇಸ್‌ಗೆ ಎದುರಾದ ಎರಡನೇ ಸೋಲು ಇದಾಗಿದೆ. 2012ರಲ್ಲಿ ಉಜ್‌ಬೆಕಿಸ್ತಾನದ ವಿರುದ್ಧ ಬೋಪಣ್ಣ ಜತೆಗೂಡಿ ಆಡಿದ್ದ ಪೇಸ್‌ ಮೊದಲ ಬಾರಿಗೆ ಸೋಲು ಕಂಡಿದ್ದರು.

ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಜತೆಗೂಡಿ ಅಮೆರಿಕ ಓಪನ್‌ನ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದ ಪೇಸ್‌ ಬುಧವಾರ ತಂಡ ಸೇರಿಕೊಂಡಿದ್ದರು. ಹೀಗಾಗಿ ಬೋಪಣ್ಣ ಜತೆಗೂಡಿ ಅಭ್ಯಾಸ ಮಾಡಲು ಅವರಿಗೆ ಹೆಚ್ಚು ಸಮಯ ಸಿಕ್ಕಿರಲಿಲ್ಲ. ಇದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.

ತವರಿನ ತಂಡದ ಆಟ ಕಣ್ತುಂಬಿಕೊ ಳ್ಳುವ ಸಲುವಾಗಿ ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬಂದಿದ್ದ ಟೆನಿಸ್‌ ಪ್ರಿಯರಿಗೆ ಆರಂಭದಲ್ಲೇ ನಿರಾಸೆ ಕಾಡಿತು.

ಮಹತ್ವದ ಪಂದ್ಯದ ಮೊದಲ ಸೆಟ್‌ನಲ್ಲೇ ಪೇಸ್‌ ಮತ್ತು  ಬೋಪಣ್ಣ ಹೊಂದಾಣಿಕೆಯ ಆಟ ಆಡುವಲ್ಲಿ ಎಡವಿದರು. ವಿಶ್ವ ಕ್ರಮಾಂಕಪಟ್ಟಿಯಲ್ಲಿ 13ನೇ ಸ್ಥಾನ ಹೊಂದಿರುವ ಬೋಪಣ್ಣ ದಿಟ್ಟ ಸರ್ವ್‌ ಮಾಡಲು ವಿಫಲರಾದರು. ಅನುಭವಿ ಪೇಸ್‌ ಕೂಡಾ ಇದೇ ಹಾದಿ ಹಿಡಿದರು. ಪೇಸ್‌ ನಾಲ್ಕು ಬಾರಿ ತಮ್ಮ ಸರ್ವ್‌ ಕೈಚೆಲ್ಲಿದರೆ, ಬೋಪಣ್ಣ ಮೂರು ಬಾರಿ ಸರ್ವ್‌ ಹಾಳು ಮಾಡಿದರು.

ಜತೆಗೆ ಎದುರಾಳಿಗಳ ಸರ್ವ್‌ ಮುರಿಯುವಲ್ಲೂ  ಎಡವಿದರು.  ಹೀಗಾಗಿ ಸ್ಟೆಪಾನಕ್‌ ಮತ್ತು ಆ್ಯಡಮ್‌ ಗೆ ಮೊದಲ ಸೆಟ್‌ನಲ್ಲಿ ನಿರೀಕ್ಷಿಸಿ ದ್ದಕ್ಕಿಂತಲೂ ಸುಲಭವಾಗಿ ಗೆಲುವು ದಕ್ಕಿತು. ಎರಡನೇ ಸೆಟ್‌ನಲ್ಲಿ ಭಾರತದ ಜೋಡಿ ಚೇತರಿಕೆ ಆಟ ಆಡಬಹುದು ಎಂದು ಕಾದು ಕುಳಿತ್ತಿದ್ದವರಿಗೆ ಮತ್ತೆ ನಿರಾಸೆ ಕಾಡಿತು. ಬೋಪಣ್ಣ ಮತ್ತೆ ತಮ್ಮ ಮೊದಲ ಸರ್ವ್‌ ಕಳೆದುಕೊಂಡರು. ಎದುರಾಳಿ ಆಟಗಾರ ರಿಟರ್ನ್‌ ಮಾಡಿದ ಚೆಂಡನ್ನು ಅವರು ಅಂಗಳದ ಆಚೆ ಬಾರಿಸಿದರು.

ಬಳಿಕ ಭಾರತದ ಜೋಡಿ ಆ್ಯಡಮ್‌ ಅವರ ಸರ್ವ್‌ ಮುರಿದು ಭರವಸೆ ಮೂಡಿಸಿತು. ಆದರೆ ಜೆಕ್‌ ಗಣರಾಜ್ಯದ ಜೋಡಿ ಪೇಸ್‌ ಅವರ ಸರ್ವ್‌ ಮುರಿದು ಮುನ್ನಡೆ ತನ್ನದಾಗಿಸಿಕೊಂಡಿತು.

ಬಳಿಕದ ಗೇಮ್‌ನಲ್ಲಿ ಸ್ಟೆಪಾನೆಕ್‌ ತಮ್ಮ ಸರ್ವ್‌ ಕಾಪಾಡಿಕೊಂಡು ತಂಡದ ಮುನ್ನಡೆ ಹೆಚ್ಚಿಸಿದರು. ಆದರೆ ಪೇಸ್‌ ಮತ್ತೆ ಸರ್ವ್‌ ಕಳೆದುಕೊಂಡಿದ್ದರಿಂದ ಜೆಕ್‌ ತಂಡದ ಮುನ್ನಡೆ 4–1ಕ್ಕೆ ಹಿಗ್ಗಿತು.

ಐದನೇ ಗೇಮ್‌ನಲ್ಲಿ ಪ್ರವಾಸಿ ತಂಡದ  ತಂಡದ ಆ್ಯಡಮ್‌ ಅಮೋಘ ಕ್ರಾಸ್‌ಕೊರ್ಟ್‌ ವಿನ್ನರ್‌ಗಳನ್ನು ಸಿಡಿಸಿದರಲ್ಲದೇ ಎರಡು ಬ್ರೇಕ್‌ ಪಾಯಿಂಟ್‌ ಕಲೆಹಾಕಿ ಬೋಪಣ್ಣ ಅವರ ಸರ್ವ್‌ ಮುರಿದರು. ಬಳಿಕ ಅನುಭವಿ ಸ್ಟೆಪಾನಕ್‌ ತಮ್ಮ ಸರ್ವ್‌ ಉಳಿಸಿಕೊಂಡು ಸುಲಭ ಗೆಲುವಿನ ಸವಿಯುಂಡರು. ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲೂ ಪೇಸ್‌ ಮತ್ತು ಬೋಪಣ್ಣ ಎಡವಿದರು.

ಮತ್ತೆ ಸರ್ವ್‌ ಕಾಪಾಡಿ ಕೊಳ್ಳಲು ವಿಫಲವಾದ ಭಾರತದ ಜೋಡಿ ಕಿಂಚಿತ್ತೂ ಹೋರಾಟ ನೀಡದೆ ಪಂದ್ಯ ಕೈಚೆಲ್ಲಿತು. ಭಾನುವಾರ ನಡೆ ಯುವ ರಿವರ್ಸ್‌ ಸಿಂಗಲ್ಸ್‌ನಲ್ಲಿ ಯೂಕಿಗೆ  ಜಿರಿ ವೆಸ್ಲಿ ಸವಾಲು ಎದುರಾದರೆ, ಸೋಮದೇವ್‌ ಅವರು ಲೂಕಾಸ್‌ ರೊಸೊಲ್‌ ವಿರುದ್ಧ ಆಡಲಿದ್ದಾರೆ. ಇದರಲ್ಲಿ ಒಬ್ಬರು ಸೋತರೂ ಭಾರತದ ಕನಸು ಭಗ್ನಗೊಳ್ಳುವುದು ನಿಶ್ಚಿತ.

ರಮ್‌ ಕೊಂಡೊಯ್ಯುವೆ!
‘ಭಾನುವಾರ ಡೇವಿಸ್‌ ಕಪ್‌ ಪಂದ್ಯ ಮುಗಿಯಲಿದ್ದು ತವರಿಗೆ ಮರಳುವಾಗ ಕುಟುಂಬದ ಸದಸ್ಯರು ಮತ್ತು ಸ್ನೇಹಿತರಿಗಾಗಿ ಭಾರತದಿಂದ ರಮ್‌ ಮತ್ತು ಚಹದ ಸಂಸ್ಕರಿಸಿದ ಎಲೆಗಳನ್ನು ತೆಗೆದುಕೊಂಡು ಹೋಗುತ್ತೇನೆ’ ಎಂದು ಜೆಕ್‌ ಗಣರಾಜ್ಯ ತಂಡದ ರಾಡೆಕ್‌ ಸ್ಟೆಪಾನಕ್‌ ಹೇಳಿದ್ದಾರೆ.

‘ನಾನು ಭಾರತದ ರಮ್‌ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಇಲ್ಲಿನ ಚಹಾ ತುಂಬಾ ಚೆನ್ನಾಗಿರುತ್ತದೆ ಎಂಬುದೂ ನನಗೆ ಗೊತ್ತಿದೆ. ಹೀಗಾಗಿ ನಾವೆಲ್ಲಾಇವುಗಳನ್ನು ಮನೆಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ.

ಒಲಿಂಪಿಕ್‌ನಲ್ಲಿ ಪದಕದ ಇಂಗಿತ
‘ನಾನು ಮತ್ತು ಬೋಪಣ್ಣ ರಿಯೊ ಒಲಿಂಪಿಕ್ಸ್‌ನ ಪುರುಷರ ಡಬಲ್ಸ್‌ನಲ್ಲಿ ಜತೆಯಾಗಿ ಆಡಲಿದ್ದು ಅಲ್ಲಿ ಖಂಡಿತವಾಗಿಯೂ ಪದಕ ಗೆಲ್ಲುತ್ತೇವೆ’ ಎಂದು ಲಿಯಾಂಡರ್‌ ಪೇಸ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಬೋಪಣ್ಣ ಪ್ರತಿಭಾನ್ವಿತ ಆಟಗಾರ. ಅವರ ಸಾಮರ್ಥ್ಯದ ಬಗ್ಗೆ ನನಗೆ ಅಪಾರ ನಂಬಿಕೆ ಇದೆ. ನಾನು ತುಂಬಾ ವರ್ಷದಿಂದ ಅವರನ್ನು ನೋಡುತ್ತಿದ್ದೇನೆ. ನಮ್ಮಿಬ್ಬರಲ್ಲಿ ಉತ್ತಮ ಹೊಂದಾಣಿ ಕೆಯೂ ಇದೆ. ಹೀಗಾಗಿ ಒಲಿಂಪಿಕ್‌ ನಲ್ಲಿ ಪದಕ ಗೆಲ್ಲುವ ವಿಶ್ವಾಸ ಹೆಚ್ಚಿದೆ’ ಎಂದಿದ್ದಾರೆ.

‘ಬೋಪಣ್ಣ 2010ರ ಅಮೆರಿಕ ಓಪನ್‌ ಟೂರ್ನಿಯ ಡಬಲ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದರು. ಈ ವರ್ಷ ನಡೆದ ವಿಂಬಲ್ಡನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪಿದ್ದು ಸಾಮಾನ್ಯ ಸಾಧನೆಯೇನಲ್ಲ. ಹೀಗಾಗಿಯೇ ಒಲಿಂಪಿಕ್ಸ್‌ನಲ್ಲಿ ಅವರೊಂದಿಗೆ ಆಡಲು ಉತ್ಸುಕ ನಾಗಿದ್ದೇನೆ’ ಎಂದು 43ರ ಹರೆಯದ ಪೇಸ್‌ ನುಡಿದಿದ್ದಾರೆ.

‘ನಾನು ಮತ್ತು ಮಹೇಶ್‌ ಭೂಪತಿ ಹಿಂದೆ ಜತೆಯಾಗಿ ಆಡಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದೆವು. ನಾವಿಬ್ಬರೂ ಸತತ 24 ಪಂದ್ಯಗಳಲ್ಲಿ ಜಯ ದಾಖಲಿಸಿದ್ದೆವು.  ಕಠಿಣ ಪರಿ ಶ್ರಮ ಹಾಕಿದರೆ ಅಸಾಧ್ಯ ವಾದುದು ಏನೂ ಇಲ್ಲ’ ಎಂದಿದ್ದಾರೆ.
**

ನಮಗೆ ಗೆಲುವಿನ ಅವಕಾಶ ಹೆಚ್ಚಿತ್ತು. ಆದರೆ ಆ್ಯಡಮ್‌ ಆಕರ್ಷಕ ಆಟ ಆಡಿ ನಮ್ಮ ವಿಶ್ವಾಸಕ್ಕೆ ಪೆಟ್ಟು ನೀಡಿದರು. ಇಲ್ಲಿ ಎದುರಾದ ಸೋಲಿನಿಂದ ತುಂಬಾ ನಿರಾಸೆಯಾಗಿದೆ
-ಲಿಯಾಂಡರ್‌ ಪೇಸ್‌

ಈ ಪಂದ್ಯ ನಮ್ಮ ಪಾಲಿಗೆ ತುಂಬಾ ಮಹತ್ವದ್ದಾಗಿತ್ತು. ಈ ಜಯದಿಂದ ನಿರಾಳತೆಯ ಭಾವ ಮೂಡಿದೆ. ಈಗ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ
-ರಾಡೆಕ್‌ ಸ್ಟೆಪಾನಕ್‌

Write A Comment