ಮನೋರಂಜನೆ

ಬಾಂಗ್ಲಾದೇಶ ‘ಎ’ ತಂಡದ ಎದುರಿನ ಕ್ರಿಕೆಟ್‌ ಸರಣಿಗೆ ಭಾರತದ ಪರ ಆಡಲಿದ್ದಾರೆ ರಾಜ್ಯದ ಆರು ಆಟಗಾರರು

Pinterest LinkedIn Tumblr

state

ನವದೆಹಲಿ: ಮುಂದಿನ ವಾರ ನಡೆಯಲಿರುವ ಬಾಂಗ್ಲಾದೇಶ ‘ಎ’ ತಂಡದ ಎದುರಿನ ಏಕದಿನ ಮತ್ತು ಮೂರು ದಿನಗಳ ಎರಡು ಕ್ರಿಕೆಟ್‌ ಪಂದ್ಯಗಳಿಗೆ ಭಾರತ ‘ಎ’ ತಂಡವನ್ನು ಬುಧವಾರ ಪ್ರಕಟಿಸಲಾಗಿದ್ದು, ಕರ್ನಾಟಕದ ಆರು ಆಟಗಾರರಿಗೆ ಸ್ಥಾನ ಲಭಿಸಿದೆ.

ಅಕ್ಟೋಬರ್‌ನಲ್ಲಿ ಆರಂಭವಾಗ ಲಿರುವ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌, ಏಕದಿನ ಮತ್ತು ಟ್ವೆಂಟಿ–20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲು ಬಾಂಗ್ಲಾ ಎದುರಿನ ಸರಣಿ ಪ್ರಮುಖ ವೇದಿಕೆಯೆನಿಸಿದೆ.

ಬಾಂಗ್ಲಾ ತಂಡ ಬೆಂಗಳೂರಿನಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಈ ತಂಡದಲ್ಲಿ ಕರ್ನಾಟಕದ ಮಯಂಕ್ ಅಗರವಾಲ್‌, ಮನೀಷ್‌ ಪಾಂಡೆ, ಕರುಣ್‌ ನಾಯರ್‌, ಬಲಗೈ ವೇಗಿ ಎಸ್‌. ಅರವಿಂದ್‌ ಸ್ಥಾನ ಪಡೆದುಕೊಂಡಿದ್ದಾರೆ. ಬಾಂಗ್ಲಾ ಮತ್ತು ರಣಜಿ ಚಾಂಪಿಯನ್‌ ಕರ್ನಾಟಕ ತಂಡದ ನಡುವೆ ಸೆಪ್ಟೆಂಬರ್‌ 22ರಿಂದ ಮೈಸೂರಿನಲ್ಲಿ ಮೂರು ದಿನಗಳ ಪಂದ್ಯ ನಡೆಯಲಿದೆ. ಇದೇ ಮಾದರಿಯ ಇನ್ನೊಂದು ಪಂದ್ಯ ಸೆ. 27ರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದೆ. ಈ ತಂಡದಲ್ಲೂ ಬಲಗೈ ಬ್ಯಾಟ್ಸ್‌ಮನ್‌ ಕರುಣ್‌ಗೆ ಸ್ಥಾನ ಸಿಕ್ಕಿದೆ.

ರಾಜ್ಯ ತಂಡದ ಪ್ರಮುಖ ಆಟಗಾರ ಕರುಣ್‌ ಲಂಕಾ ಎದುರು ನಡೆದ ಮೂರನೇ ಟೆಸ್ಟ್‌ಗೆ ಸ್ಥಾನ ಪಡೆದಿದ್ದರು. ಆದರೆ, ಅಂತಿಮ ಹನ್ನೊಂದರಲ್ಲಿ ಆಡಿರಲಿಲ್ಲ. ಲೆಗ್‌ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ ಮತ್ತು ವೇಗಿ ಅಭಿಮನ್ಯು ಮಿಥುನ್‌ ಅವಕಾಶ ಪಡೆದಿದ್ದಾರೆ. ಅನುಭವಿ ಆಟಗಾರ ಶಿಖರ್ ಧವನ್‌ ಮೂರು ದಿನಗಳ ಪಂದ್ಯಕ್ಕೆ ತಂಡವನ್ನು ಮುನ್ನಡೆಸಲಿದ್ದಾರೆ.

ಸುರೇಶ್ ರೈನಾ ಮತ್ತು ಧವನ್‌ ಫಿಟ್‌ನೆಸ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮುಂಬರುವ ಸರಣಿಯ ವೇಳೆಗೆ ಸಜ್ಜಾಗಲು ‘ಎ’ ತಂಡದಲ್ಲಿ
ಸ್ಥಾನ ನೀಡಲಾಗಿದೆ. ಧವನ್‌ ಲಂಕಾ ಎದುರಿನ ಟೆಸ್ಟ್‌ ಸರಣಿಯ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು.

ತಂಡಗಳು ಇಂತಿವೆ: ಏಕದಿನ ಸರಣಿಗೆ ತಂಡ: ಉನ್ಮುಕ್ತ್ ಚಾಂದ್ (ನಾಯಕ), ಮಯಂಕ್‌ ಅಗರವಾಲ್‌, ಮನೀಷ್‌ ಪಾಂಡೆ, ಸುರೇಶ್ ರೈನಾ, ಕೇದಾರ್ ಜಾಧವ್‌, ಸಂಜು ಸ್ಯಾಮ್ಸನ್‌, ಕರುಣ್‌ ನಾಯರ್‌, ಕುಲದೀಪ್‌ ಯಾದವ್‌, ಜಯಂತ್ ಯಾದವ್‌, ಕರಣ್‌ ಶರ್ಮಾ, ರಿಷಿ ಧವನ್‌, ಎಸ್‌. ಅರವಿಂದ್, ಧವಳ್‌ ಕುಲಕರ್ಣಿ, ರುಷ್‌ ಕಲಾರಿಯಾ ಮತ್ತು ಗುರುಕೀರತ್‌ ಸಿಂಗ್. ಮೂರು ದಿನಗಳ ಪಂದ್ಯಗಳಿಗೆ ತಂಡ: ಶಿಖರ್ ಧವನ್‌ (ನಾಯಕ), ಅಭಿನವ್‌ ಮುಕುಂದ್‌, ಕರುಣ್‌ ನಾಯರ್, ಶ್ರೇಯಸ್ ಅಯ್ಯರ್, ಬಾಬಾ ಅಪರಾಜಿತ್‌, ನಮನ್‌ ಓಜಾ,ಜಯಂತ್‌ ಯಾದವ್, ವಿಜಯ್ ಶಂಕರ್‌, ರವೀಂದ್ರ ಜಡೇಜ, ಶ್ರೇಯಸ್‌ ಗೋಪಾಲ್‌, ಅಭಿಮನ್ಯು ಮಿಥುನ್‌, ವರುಣ್ ಆ್ಯರನ್‌, ಈಶ್ವರ್ ಪಾಂಡೆ ಮತ್ತು ಶೆಲ್ಡನ್‌ ಜಾಕ್ಸನ್‌.

ಬೆಂಗಳೂರಿನಲ್ಲಿ ತಂಡ ಆಯ್ಕೆ
ಮುಂಬೈ (ಪಿಟಿಐ): ಬಾಂಗ್ಲಾ ‘ಎ’ ತಂಡದ ಎದುರು ನೀಡುವ ಸಾಮರ್ಥ್ಯದ ಆಧಾರದ ಮೇಲೆ ದಕ್ಷಿಣ ಆಫ್ರಿಕಾ ಎದುರಿನ ಟ್ವೆಂಟಿ–20 ಪಂದ್ಯಗಳ ಸರಣಿಗೆ ಭಾರತ ತಂಡವನ್ನು ಸೆ. 18ರಂದು ಬೆಂಗಳೂರಿನಲ್ಲಿ ತಂಡವನ್ನು ಆಯ್ಕೆ ಮಾಡಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ದಕ್ಷಿಣ ಆಫ್ರಿಕಾ ಎದುರು ಆತಿಥೇಯ ತಂಡ ಧರ್ಮಶಾಲಾ (ಅ. 2), ಕಟಕ್‌ (ಅ. 5) ಮತ್ತು ಕೋಲ್ಕತ್ತದಲ್ಲಿ (ಅ. 8) ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ. ಬಳಿಕ ಏಕದಿನ ಮತ್ತು ಟೆಸ್ಟ್‌ ಸರಣಿ ಆಯೋಜನೆಯಾಗಿದೆ.

Write A Comment