ಮನೋರಂಜನೆ

ಬಿಜಾಪುರ ಬುಲ್ಸ್‌ಗೆ ‘ಸಮರ್ಥ’ ಜಯ

Pinterest LinkedIn Tumblr

samarth-bijapur

ಹುಬ್ಬಳ್ಳಿ, ಸೆ.9: ರವಿಕುಮಾರ್ ಸಮರ್ಥ್ ಬ್ಯಾಟಿಂಗ್ ವೈಭವ ಮತ್ತು ಸುನೀಲ್ ರಾಜು ಕೊನೆಯ ಎಸೆತದಲ್ಲಿ ಬೌಂಡರಿ ಕೊಡುಗೆ ಬಿಜಾಪುರ ಬುಲ್ಸ್‌ಗೆ ಇಲ್ಲಿ ನಡೆದ ಕೆಪಿಎಲ್‌ನ 13ನೆ ಪಂದ್ಯದಲ್ಲಿ ಭರ್ಜರಿ ಗೆಲುವು ತಂದು ಕೊಟ್ಟಿದೆ.

ಈ ಗೆಲುವಿನೊಂದಿಗೆ ಬಿಜಾಪುರ ಬುಲ್ಸ್ ಅಂಕಪಟ್ಟಿಯಲ್ಲಿ 2ನೆ ಸ್ಥಾನ ಪಡೆದಿದೆ. ನಮ್ಮ ಶಿವಮೊಗ್ಗ ತಂಡ ಸತತ ಮೂರು ಗೆಲುವಿನ ಬಳಿಕ ನಾಲ್ಕನೆ ಆವೃತ್ತಿಯ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದೆ.

ಗೆಲುವಿಗೆ 162 ರನ್‌ಗಳ ಸವಾಲನ್ನು ಪಡೆದ ಬಿಜಾಪುರ ಬುಲ್ಸ್ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 165 ರನ್ ಗಳಿಸಿ ಗೆಲುವಿನ ದಡ ಸೇರಿತು.

ಅಂತಿಮ ಓವರ್‌ನ ಕೊನೆಯ ಎಸೆತದಲ್ಲಿ ಬಿಜಾಪುರ ಬುಲ್ಸ್ ನ ಗೆಲುವಿಗೆ 1 ರನ್ ಅಗತ್ಯತೆ ಇತ್ತು. ಸುನೀಲ್ ರಾಜು ಅವರು ಭವೇಶ್ ಗುಲೇಚ ಎಸೆತದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿ ಬುಲ್ಸ್‌ನ್ನು ಗೆಲುವಿನ ದಡ ಸೇರಿಸಿದರು.

ಆರಂಭಿಕ ದಾಂಡಿಗ ರವಿಕುಮಾರ್ ಸಮರ್ಥ್ ಔಟಾಗದೆ 78 ರನ್(60ಎ, 8ಬೌ,1ಸಿ), ರಾಜು ಭಟ್ಕಳ 39 ರನ್(30ಎ,5ಬೌ) ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ 36 ರನ್(24ಎ, 3ಬೌ,1ಸಿ) ಗಳಿಸಿ ಬುಲ್ಸ್‌ನ ಭರ್ಜರಿ ಗೆಲುವಿಗೆ ಸಹಾಯ ಮಾಡಿದರು.

ಆರಂಭಿಕ ದಾಂಡಿಗ ರವಿಕುಮಾರ್ ಸಮರ್ಥ್ ಮತ್ತು ರಾಜು ಭಟ್ಕಳ ಮೊದಲ ವಿಕೆಟ್‌ಗೆ 9.2 ಓವರ್‌ಗಳಲ್ಲಿ 81 ರನ್ ಸೇರಿಸಿ ಭದ್ರವಾದ ಅಡಿಪಾಯ ಹಾಕಿಕೊಟ್ಟರು. ಬಳಿಕ ಎರಡನೆ ವಿಕೆಟ್‌ಗೆ ರವಿಕುಮಾರ್ ಮತ್ತು ರಾಬಿನ್ ಉತ್ತಪ್ಪ 68 ರನ್ ಕೊಡುಗೆ ನೀಡಿ ತಂಡದ ಗೆಲುವಿಗೆ ನೆರವಾದರು.

ಕಿರ್ಮಾನಿ -ಅಬ್ಬಾಸ್ ಅರ್ಧಶತಕ ವ್ಯರ್ಥ: ಸಾದಿಕ್ ಕಿರ್ಮಾನಿ 61 ರನ್(43ಎ, 4ಬೌ, 5ಸಿ), ಕೆ ಅಬ್ಬಾಸ್ 58 ರನ್(42ಎ, 2ಬೌ,3ಸಿ) ಸಹಾಯದಿಂದ ನಮ್ಮ ಶಿವಮೊಗ್ಗ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 161 ರನ್ ಸಂಪಾದಿಸಿತ್ತು.

ವೈಶಾಕ್ ವಿ. ದಾಳಿಗೆ ಸಿಲುಕಿ ನಮ್ಮ ಶಿವಮೊಗ್ಗದ ಆರಂಭಿಕ ದಾಂಡಿಗ ಸಮರ್ಥ್ ಊಟಿ (3) ಅವರನ್ನು ಬೇಗನೆ ಕಳೆದು ಕೊಂಡಿತ್ತು. ಎರಡನೆ ವಿಕೆಟ್‌ಗೆ ಸಾದಿಕ್ ಕಿರ್ಮಾನಿ ಮತ್ತು ಕೌನೈನ್ ಅಬ್ಬಾಸ್ 10 ಓವರ್‌ಗಳಲ್ಲಿ 90 ರನ್ ಸೇರಿಸಿದರು. ಶ್ರೇಯಸ್ ಗೋಪಾಲ್ (ಔಟಾಗದೆ 17) ಮತ್ತು ದಿನೇಶ್ ಬೊರ್ವಾಂಕರ್(12) ಎರಡಂಕೆಯ ಕೊಡುಗೆಯ ಫಲವಾಗಿ ನಮ್ಮ ಶಿವಮೊಗ್ಗ ತಂಡದ ಸ್ಕೋರ್ 160ರ ಗಡಿ ದಾಟಿತು.

Write A Comment