ಮಂಡ್ಯ, ಸೆ.9: ಭೂ ವಿವಾದ ಸಂಬಂಧ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಘರ್ಷಣೆ ನಡೆದು ಲಾಠಿ ಪ್ರಹಾರದಿಂದ ಐದು ಮಹಿಳೆಯರು ಸೇರಿದಂತೆ 7 ಮಂದಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ರಾಜೇಗೌಡನದೊಡ್ಡಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ನಾಥೇಗೌಡ(65), ಚೌಡೇಶ್, ಶೋಭಾ, ಭಾಗ್ಯಮ್ಮ, ಚಿಕ್ಕೋಳಮ್ಮ, ಜಯಮ್ಮ ಹಾಗೂ ವರಲಕ್ಷ್ಮೀ ಘಟನೆಯಲ್ಲಿ ಗಾಯಗೊಂಡಿದ್ದು, ಮದ್ದೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಲ್ಲಿ ಗ್ರಾಮಸ್ಥರ ಹಲ್ಲೆಯಿಂದ ಗಾಯಗೊಂ ಡಿದ್ದೇವೆಂದು ಪಿಎಸ್ಸೈಗಳಾದ ಕಲಾವತಿ, ಜಯಲಕ್ಷ್ಮಮ್ಮ, ವೆಂಕಟೇಶ್ ಮತ್ತು ಎಎಸ್ಸೈ ಹೇಮಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ತಾವು ಪೊಲೀಸರ ಮೇಲೆ ಹಲ್ಲೆ ನಡೆಸಿಲ್ಲವೆಂದು ಗ್ರಾಮಸ್ಥರು ಹೇಳಿದ್ದಾರೆ.
ಘರ್ಷಣೆಗೆ ಕಾರಣ: ಮದ್ದೂರು ಸಿಪಿಐ ಪ್ರಸಾದ್, ಪಿಎಸ್ಸೈ ವೆಂಕಟೇಗೌಡ ನೇತೃತ್ವದಲ್ಲಿ ಅಕ್ಕಪಕ್ಕದ ಠಾಣೆಯ ಪೊಲೀಸರು, ಅಗ್ಮಿಶಾಮಕ ವಾಹನದ ರಕ್ಷಣೆಯಲ್ಲಿ ಬುಧವಾರ ಬೆಳಗ್ಗೆ ಸತೀಶ್ಬಾಬು ಅವರ ತಮ್ಮ ದಿನೇಶ್, ಭೂಮಿ ಉಳುಮೆ ಮಾಡಲು ಟ್ರ್ಯಾಕ್ಟರ್ ಸಮೇತ ರಾಜೇಗೌಡನ ದೊಡ್ಡಿಗೆ ಆಗಮಿಸಿದ್ದಾರೆ.
ನೂರಾರು ಪೊಲೀಸರ ರಕ್ಷಣೆಯಲ್ಲಿ ತಮ್ಮ ಗ್ರಾಮದ ಇನಾಂ ಜಮೀನನ್ನು ವಶಪಡಿಸಿಕೊಳ್ಳಲು ಆಗಮಿಸಿದ ದಿನೇಶ್ ಅವರಿಗೆ, ಭೂಮಿ ಉಳುಮೆ ಮಾಡಲು ಮಹಿಳೆಯರಾದಿಯಾಗಿ ಒಗ್ಗೂಡಿದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಉದ್ರಿಕ್ತ ಸ್ಥಿತಿ ತಲುಪುತ್ತಿದ್ದಂತೆ ಪೊಲೀಸರು ಲಾಠಿ ಬೀಸಿ ಗ್ರಾಮಸ್ಥರನ್ನು ಚದುರಿಸಿದರು. ಈ ಸಂದರ್ಭದಲ್ಲಿ ಮಹಿಳೆಯರೂ ಸೇರಿದಂತೆ ಹಲವಾರು ಮಂದಿ ಗ್ರಾಮಸ್ಥರು ಗಾಯಗೊಂಡರು.
ಘಟನೆಯನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆಯಿಡುತ್ತಿದ್ದುದ್ದನ್ನು ಗಮನಿಸಿದ ಪೊಲೀಸರು, ಯುವಕರ ಬಳಿ ತೆರಳಿ ಅವರ ಮೊಬೈಲ್ಗಳನ್ನು ಕಿತ್ತುಕೊಂಡು ಫೋಟೊಗಳನ್ನು ಅಳಿಸಿ ಹಾಕುವ ಯತ್ನ ನಡೆಸಿದ್ದಾರೆ. ಆದರೂ, ಗ್ರಾಮಸ್ಥರು ಭೂಮಿ ಉಳುಮೆಗೆ ಅವಕಾಶ ನೀಡಿಲ್ಲ.
ಘಟನೆಯಲ್ಲಿ ಗ್ರಾಮಸ್ಥರು ಗಾಯಗೊಂಡಿದ್ದನ್ನು ಕಂಡು ಗಾಬರಿಗೊಂಡ ಪೊಲೀಸರು, ಕೂಡಲೇ ಗ್ರಾಮದಿಂದ ಹಿಂದಿರುಗಿದರು. ಗಾಯಗೊಂಡ ಗ್ರಾಮಸ್ಥರನ್ನು ಕೂಡಲೇ ಮದ್ದೂರಿನ ಸರಕಾರಿ ಆಸ್ಪತ್ರೆಗೆ ಸೇರಿಸಲಾಯಿತು. 7 ಮಂದಿ ಒಳರೋಗಿಗಳಾಗಿ ದಾಖಲಾಗಿದ್ದು, ಕೆಲವರು ಹೊರರೋಗಿ ಗಳಾಗಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.
ಪೊಲೀಸರ ದೌರ್ಜನ್ಯದಿಂದ ಗ್ರಾಮಸ್ಥರು ಗಾಯಗೊಂ ಡಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ತಮಗೂ ಗಾಯವಾಗಿದೆ ಎಂದು ಕೆಲವು ಪೊಲೀಸರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
