ಮನೋರಂಜನೆ

ಸೂರಿಯೇ ಹೀರೋ! ಕೆಂಡಸಂಪಿಗೆಯ ಪೋಸ್ಟರಿನಲ್ಲಿ ದುನಿಯಾ ಸೂರಿ

Pinterest LinkedIn Tumblr

kendaಚಿತ್ರರಂಗದ ನಿಯಮವೇ ಅದು. ಯಾರ ಹೆಸರು ಚಾಲ್ತಿಯಲ್ಲಿದೆಯೋ ಅವರ ಹೆಸರಲ್ಲಿ ಸಿನಿಮಾವನ್ನು ಪ್ರಮೋಟ್‌ ಮಾಡುವುದಕ್ಕೆ ನಿರ್ಮಾಪಕರು ಯತ್ನಿಸುತ್ತಾರೆ. ಕೆಲವೊಮ್ಮೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಖ್ಯಾತನಟರು ಪೋಸ್ಟರಿನಲ್ಲಿ ರಾರಾಜಿಸುವುದೂ ಉಂಟು.

ಇದೀಗ ಕೆಂಡಸಂಪಿಗೆ ಚಿತ್ರದ ಪೋಸ್ಟರಿನಲ್ಲಿ ದುನಿಯಾ ಸೂರಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಶುಕ್ರವಾರ ಬಿಡುಗಡೆಯಾದ ಚಿತ್ರದ ಜಾಹೀರಾತಿನಲ್ಲಿ ಕಪ್ಪು ರೇಬಾನ್‌ ಗ್ಲಾಸ್‌ ತೊಟ್ಟಿರುವ ಸೂರಿಯ ಮುಖವೊಂದೇ ಪ್ರಧಾನವಾಗಿ ಕಾಣಿಸಿಕೊಂಡಿದೆ. ಅಲ್ಲಿಗೆ ಚಿತ್ರದ ನಟ, ನಟಿ. ಮಿಕ್ಕ ತಾರಾಗಣ ಗೌಣ ಅನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಸೂರಿ ಆ ಚಿತ್ರದಲ್ಲಿ ಪಾತ್ರ ವಹಿಸಿದ್ದಾರಾ? ಅವರ ಆತ್ಮೀಯರ ಪ್ರಕಾರ ಸೂರಿ ಪಾತ್ರ ಮಾಡಿಲ್ಲ. ಆದರೆ ಇಡೀ ಚಿತ್ರದ ಪರಿಕಲ್ಪನೆಯೇ ಅವರದು. ಸಿನಿಮಾ ಅನ್ನೋದು ನಿರ್ದೇಶಕನ ಮಾಧ್ಯಮ ಆಗಿರೋದರಿಂದ ಸೂರಿ ಫೋಟೋ ಹಾಕಿರೋದರಲ್ಲಿ ಯಾವ ತಪ್ಪೂ ಇಲ್ಲ. ಎಲ್ಲಾ ನಿರ್ದೇಶಕರೂ ಇಂಥದ್ದನ್ನೇ ಮಾಡುವ ಮೂಲಕ ನಿರ್ದೇಶಕರಿಗೆ ಗೌರವ ಹೆಚ್ಚುವಂತೆ ಮಾಡಬೇಕು ಅನ್ನುವ ಮಾತನ್ನೂ ಸೂರಿ ಮಿತ್ರರು ಆಡುತ್ತಾರೆ. ಆದರೆ ದೊಡ್ಮನೆ ಹುಡುಗ ಚಿತ್ರದ ಪೋಸ್ಟರಿನಲ್ಲಿ ನಿರ್ದೇಶಕರಿರುತ್ತಾರೋ ಹೀರೋ ಇರುತ್ತಾರೋ ಅನ್ನೋದು ಕುತೂಹಲಕಾರಿ.

ಈ ಹಿಂದೆಯೂ ನಿರ್ದೇಶಕರು ಹೀಗೆ ತಮ್ಮದೇ ಫೋಟೋ ಹಾಕಿಕೊಳ್ಳುವ ಸಂಪ್ರದಾಯ ಆರಂಭಿಸಿದ್ದರು. ಇಂದ್ರಜಿತ್‌ ಎಷ್ಟೋ ಸಿನಿಮಾಗಳಲ್ಲಿ ಹೀರೋ ಫೋಟೋಗಿಂತ ದೊಡ್ಡದಾಗಿ ತಮ್ಮದೇ ಫೋಟೋ ಹಾಕಿಕೊಳ್ಳುತ್ತಾರೆ. ನಿರ್ದೇಶಕ ಗುರುಪ್ರಸಾದ್‌ ಕೂಡ ಡೈರೆಕ್ಟರ್‌ ಸ್ಪೆಷಲ್‌ ಚಿತ್ರದಲ್ಲಿ ತಮ್ಮದೇ ಕಟೌಟ್‌ ನಿಲ್ಲಿಸಿ ಸುದ್ದಿಯಾಗಿದ್ದರು. ಇದೀಗ ಸೂರಿಯ ಸರದಿ.
-ಉದಯವಾಣಿ

Write A Comment