ನ್ಯೂಯಾರ್ಕ್ (ಎಎಫ್ಪಿ/ ರಾಯಿಟರ್ಸ್): ಹಾಲಿ ಚಾಂಪಿಯನ್ಗ ಳಾದ ಮರಿನ್ ಸಿಲಿಕ್ ಮತ್ತು ಸೆರೆನಾ ವಿಲಿಯಮ್ಸ್ ಮೇಲೆ ನಿರೀಕ್ಷೆ ಹೆಚ್ಚಿದೆ. ಸೋಮವಾರ ಆರಂಭವಾಗುವ ಅಮೆ ರಿಕ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಉಳಿಸಿಕೊಳ್ಳಬೇಕಾದ ಸವಾಲು ಇವರ ಮುಂದಿದೆ.
33 ವರ್ಷದ ಅಮೆರಿಕದ ಸೆರೆನಾ ಹೋದ ವರ್ಷ ಇಲ್ಲಿ ಪ್ರಶಸ್ತಿ ಜಯಿಸಿದ ಬಳಿಕವೂ ಉತ್ತಮ ಲಯ ಉಳಿಸಿ ಕೊಂಡು ಬಂದಿದ್ದಾರೆ. ಈ ವರ್ಷ ಆಸ್ಟ್ರೇಲಿಯಾ, ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದು ಇದಕ್ಕೆ ಸಾಕ್ಷಿ.
ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಹೊಂದಿರುವ ಅವರು ಈ ಬಾರಿಯೂ ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರ್ತಿ ಎನಿಸಿದ್ದಾರೆ. ರುಮೇನಿಯಾದ ಸಿಮೊನಾ ಹಲೆಪ್ ಅಮೆರಿಕದ ಆಟಗಾರ್ತಿಗೆ ಪ್ರಬಲ ಸವಾಲು ಒಡ್ಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಸೆರೆನಾ ಮೊದಲ ಸುತ್ತಿನ ಪಂದ್ಯದಲ್ಲಿ ರಷ್ಯಾದ ವಿಟಾಲಿಯಾ ಡಿಯಾಟ್ಹೆಂಕೊ ವಿರುದ್ಧ ಆಡಲಿದ್ದಾರೆ.
ಮೂರನೇ ಶ್ರೇಯಾಂಕ ಹೊಂದಿ ರುವ ರಷ್ಯಾದ ಮರಿಯಾ ಶರಪೋವಾ, ನಾಲ್ಕನೇ ಶ್ರೇಯಾಂಕದ ಕ್ಯಾರೊಲಿನ್ ವೊಜ್ನಿಯಾಕಿ, 2012 ಮತ್ತು 2013ರ ಅಮೆರಿಕ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದ ಬೆಲಾರಸ್ನ ವಿಕ್ಟೋರಿಯಾ ಅಜ ರೆಂಕಾ ಕಾಲು ನೋವಿನಿಂದ ಬಳಲು ತ್ತಿದ್ದಾರೆ. 2011ರ ಇದೇ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಸಮಂತಾ ಸ್ಟಾಸರ್ ಚಾಂಪಿಯನ್ ಆಗಿದ್ದರು. ಫೈನಲ್ನಲ್ಲಿ ಅವರು ಸೆರೆನಾ ಎದುರು ಗೆಲುವು ಪಡೆದಿದ್ದರು.
ಮತ್ತೆ ಮಿಂಚುವರೇ ಮರಿನ್: 2014ರ ಇದೇ ಟೂರ್ನಿಯಲ್ಲಿ ಮರಿನ್ ಫೈನಲ್ ನಲ್ಲಿ ಕೀ ನಿಶಿಕೋರಿ ಎದುರು ಗೆಲುವು ಪಡೆದು ಚಾಂಪಿಯನ್ ಆಗಿದ್ದರು. ಮರಿನ್ ಈ ವರ್ಷದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ನಾಲ್ಕನೇ ಸುತ್ತು ಮತ್ತು ವಿಂಬಲ್ಡನ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು. 26 ವರ್ಷದ ಮರಿನ್ ಈ ಬಾರಿ ನಿಶಿಕೋರಿ, ಸರ್ಬಿಯಾದ ಜೊಕೊವಿಚ್, ನಡಾಲ್, ಫೆಡರರ್, ಆ್ಯಂಡಿ ಮರ್ರೆ ಅವರಂಥ ಬಲಿಷ್ಠ ಆಟಗಾರರ ಸವಾಲು ಎದುರಿಸಬೇಕಿದೆ.
ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಟೂರ್ನಿಯಲ್ಲಿ ಜೊಕೊವಿಚ್ ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ಏಕೆಂದರೆ, ಈ ಆಟಗಾರ 2015ರ ಮೂರೂ ಗ್ರ್ಯಾಂಡ್ ಸ್ಲಾಮ್ ಟೂರ್ನಿಗಳಲ್ಲಿ ಚಾಂಪಿಯನ್ ಆಗಿದ್ದರು.
ಫೈನಲ್ ಪಂದ್ಯಗಳಲ್ಲಿ ಅವರು ಆ್ಯಂಡಿ ಮರ್ರೆ (ಆಸ್ಟ್ರೇಲಿಯಾ ಓಪನ್), ಸ್ಟಾನಿಸ್ಲಾಸ್ ವಾವ್ರಿಂಕ (ಫ್ರೆಂಚ್ ಓಪನ್) ಮತ್ತು ರೋಜರ್ ಫೆಡರರ್ (ವಿಂಬಲ್ಡನ್) ಎದುರು ಗೆಲುವು ಪಡೆದಿದ್ದರು. ಆದ್ದರಿಂದ ಜೊಕೊವಿಚ್ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದಾರೆ. ಹೋದ ವರ್ಷ ಇದೇ ಟೂರ್ನಿಯ ಸೆಮಿಫೈನಲ್ನಲ್ಲಿ ನಿಶಿಕೋರಿ ಎದುರು ಸೋತಿದ್ದರು.
ಗಾಯದಿಂದ ಬಳಲಿ ಚೇತರಿಸಿ ಕೊಂಡಿರುವ ಸ್ಪೇನ್ನ ರಫೆಲ್ ನಡಾಲ್ ಇಲ್ಲಿ ಮೂರನೇ ಪ್ರಶಸ್ತಿ ಜಯಿಸುವ ಆಸೆ ಹೊಂದಿದ್ದಾರೆ. 14 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳ ಒಡೆಯ ನಡಾಲ್ ಅಮೆರಿಕ ಓಪನ್ ಟೂರ್ನಿಯಲ್ಲಿ 2010 ಮತ್ತು 2013ರಲ್ಲಿ ಚಾಂಪಿಯನ್ ಆಗಿದ್ದರು.
ವಿಶ್ವ ರ್ಯಾಂಕಿಂಗ್ನಲ್ಲಿ ಎರಡನೇ ಸ್ಥಾನ ಹೊಂದಿರುವ ಫೆಡರರ್ ಇಲ್ಲಿ 2008ರಲ್ಲಿ ಕೊನೆಯ ಬಾರಿಗೆ ಪ್ರಶಸ್ತಿ ಗೆದ್ದಿ ದ್ದರು. ಕಳೆದ ಎರಡು ವರ್ಷಗಳಿಂದ ಅವರು ಒಂದೂ ಗ್ರ್ಯಾಂಡ್ ಸ್ಲಾಮ್ ಜಯಿ ಸಿಲ್ಲ. ಪ್ರಶಸ್ತಿಯ ಬರ ಎದುರಿಸುತ್ತಿರುವ ಫೆಡರರ್ ಮೋಡಿ ಈ ಬಾರಿಯ ಅಮೆರಿಕ ಓಪನ್ ಟೂರ್ನಿಯಲ್ಲಿ ಹೇಗಿರಲಿದೆಯೋ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಭಾರತೀಯರ ಸವಾಲು: ಹೋದ ತಿಂಗ ಳಷ್ಟೇ ವಿಂಬಲ್ಡನ್ ಟೂರ್ನಿಯ ಮಹಿಳಾ ವಿಭಾಗದ ಡಬಲ್ಸ್ನಲ್ಲಿ ಚಾಂಪಿಯನ್ ಆಗಿದ್ದ ಭಾರತದ ಸಾನಿಯಾ ಮಿರ್ಜಾ ಮತ್ತೊಂದು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯ ಜಯಿಸುವ ಆಸೆ ಹೊಂದಿದ್ದಾರೆ.
2014ರ ಅಮೆರಿಕ ಓಪನ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತದ ಆಟಗಾರ್ತಿ ಈಗ ಉತ್ತಮ ಲಯದಲ್ಲಿದ್ದಾರೆ.
ಶನಿವಾರ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿರುವ ಸಾನಿಯಾ, ‘ಒಲಿಂಪಿಕ್ಸ್ನಲ್ಲಿ ಶ್ರೇಷ್ಠ ಆಟವಾಡುವ ಗುರಿ ಹೊಂದಿದ್ದೇನೆ. ಅದಕ್ಕೂ ಮೊದಲು ಈಗಿರುವ ಟೂರ್ನಿಯ ಬಗ್ಗೆ ಗಮನವಿದೆ’ ಎಂದಿ ದ್ದರು. ಹೋದ ವರ್ಷ ಈ ಆಟಗಾರ್ತಿ ಬ್ರೆಜಿಲ್ನ ಬ್ರೊನೊ ಸೊರಸ್ ಜೊತೆ ಆಡಿದ್ದರು. ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಹೊಂದಿರುವ ಸಾನಿಯಾ ಮಿಶ್ರ ಡಬಲ್ಸ್ನಲ್ಲಿ ಮೂರು ಗ್ರ್ಯಾಂಡ್ ಸ್ಲಾಮ್ ಟ್ರೋಫಿ ಗೆದ್ದಿದ್ದಾರೆ.
ದಾಖಲೆ ಸರಿಗಟ್ಟಲು ಅವಕಾಶ
22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಜಯಿಸಿರುವ ಜರ್ಮನಿಯ ಸ್ಟೆಫಿ ಗ್ರಾಫ್ ದಾಖಲೆ ಸರಿಗಟ್ಟಲು ಸೆರೆನಾ ವಿಲಿಯಮ್ಸ್ಗೆ ಅವಕಾಶ ಲಭಿಸಿದೆ. ಸೆರೆನಾ ಒಟ್ಟು 21 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. ಆಸ್ಟ್ರೇ ಲಿಯಾ ಓಪನ್ (6), ಫ್ರೆಂಚ್ ಓಪನ್ (3), ವಿಂಬಲ್ಡನ್ (6) ಮತ್ತು ಅಮೆ ರಿಕ ಓಪನ್ (6) ಟೂರ್ನಿಗಳಲ್ಲಿ ಚಾಂಪಿಯನ್ ಆಗಿದ್ದಾರೆ.
ಸೋಮವಾರದಿಂದ ಸೆಪ್ಟೆಂಬರ್ 13ರ ವರೆಗೆ ನಡೆಯಲಿರುವ ಅಮೆರಿಕ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರೆ ಸ್ಟೆಫಿ ಗ್ರಾಫ್ ದಾಖಲೆ ಸರಿಗಟ್ಟಲಿದ್ದಾರೆ. ಆಸ್ಟ್ರೇಲಿಯಾದ ಮಾರ್ಗರೆಟ್ ಕೋರ್ಟ್ 24 ಬಾರಿ ಗ್ರ್ಯಾಂಡ್ ಸ್ಲಾಮ್ ಜಯಿಸಿದ್ದು ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ದಾಖಲೆ ಹೊಂದಿದ್ದಾರೆ. ಅಮೆರಿಕ ಓಪನ್ನಲ್ಲಿ ಅವರು ಐದು ಸಲ ಚಾಂಪಿಯನ್ ಆಗಿದ್ದರು.
ಸಾಧನೆ ಮಾಡುವ ಹೊಸ್ತಿಲಲ್ಲಿರುವ ಸೆರೆನಾ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ ‘ಸಾಧನೆ ಮಾಡಬೇಕೆನ್ನುವ ಆಸೆಯಿದೆ. ಆದರೆ ಒತ್ತಡವೇನೂ ಇಲ್ಲ. ಏಕೆಂದರೆ ಒತ್ತಡದಿಂದ ಆಡಿದರೆ ಯಾವ ಸಾಧನೆಯೂ ಸಾಧ್ಯವಾಗುವುದಿಲ್ಲ’ ಎಂದಿದ್ದಾರೆ.
‘ದಾಖಲೆಯನ್ನು ಮುರಿಯುವ ಆಸೆಯಿಂದ ಆಡುವುದಿಲ್ಲ. ಉತ್ತಮ ಆರಂಭ ಪಡೆಯಬೇಕೆನ್ನುವುದು ಗುರಿ. ಹಿಂದಿನ ಕೆಲ ವಾರಗಳಿಂದ ಕಠಿಣ ಅಭ್ಯಾಸ ನಡೆಸಿದ್ದೇನೆ. ಸೋಲು, ಗೆಲುವು ಅದರ ಬಗ್ಗೆ ಯೋಚಿಸುವುದಿಲ್ಲ’ ಎಂದು ಸೆರೆನಾ ಹೇಳಿದ್ದಾರೆ.
ಈ ಟೂರ್ನಿಯಲ್ಲಿ ಸೆರೆನಾ ಸತತ ನಾಲ್ಕನೇ ವರ್ಷವೂ ಅಗ್ರಶ್ರೇಯಾಂಕ ಹೊಂದಿದ್ದಾರೆ. 2002, 2013 ಮತ್ತು 2014ರಲ್ಲಿ ಅಗ್ರಶ್ರೇಯಾಂಕ ಪಡೆದಿದ್ದಾಗಲೂ ಚಾಂಪಿಯನ್ ಆಗಿದ್ದರು. ಇಲ್ಲಿ ಎರಡನೇ ಶ್ರೇಯಾಂಕ ಹೊಂದಿರುವ ಸಿಮೊನ್ ಹಲೆಪ್ ಅವರಿಗೆ ಕಠಿಣ ಪೈಪೋಟಿ ಒಡ್ಡುವ ಸಾಧ್ಯತೆಯಿದೆ.