ರಾಷ್ಟ್ರೀಯ

ರಾಜಸ್ತಾನ: ಜಾಟರಿಗೆ ಒಬಿಸಿ ಮೀಸಲಾತಿ ಗೊಂದಲ: ವಸುಂಧರಾ ರಾಜೇ ಸರ್ಕಾರಕ್ಕೆ ಹೊಸ ತಲೆನೋವು

Pinterest LinkedIn Tumblr

VASUUUಜೈಪುರ: ಗುಜ್ಜರ್‌ ಸಮುದಾಯದವರಿಗೆ ಮೀಸಲಾತಿ ವಿಷಯ ಇನ್ನೂ ಇತ್ಯರ್ಥವಾಗದ ಹೊತ್ತಿನಲ್ಲಿಯೇ   ಜಾಟರ ಮೀಸಲಾತಿ ವಿಷಯವು ರಾಜಸ್ತಾನ  ಮುಖ್ಯ ಮಂತ್ರಿ ವಸುಂಧರಾ ರಾಜೇ ಅವರಿಗೆ ಹೊಸ ಸಮಸ್ಯೆಯಾಗಿ ಕಾಡುತ್ತಿದೆ.

ರಾಜ್ಯದ ಭರತ್‌ಪುರ ಹಾಗೂ ಧೋಲ್‌ಪುರ ಜಿಲ್ಲೆಗಳಿಗೆ ಸೇರಿದ ಜಾಟ ಸಮುದಾಯಕ್ಕೆ  ಇತರ ಹಿಂದುಳಿದ ವರ್ಗಗಳ ಅಡಿ (ಒಬಿಸಿ)ನೀಡಿರುವ ಮೀಸಲಾತಿ ಸೌಲಭ್ಯವನ್ನು ರದ್ದುಗೊಳಿಸಿ ರಾಜಸ್ತಾನದ ಹೈಕೋರ್ಟ್‌ ಆದೇಶ ಹೊರಡಿಸಿದ ಬಳಿಕ ರಾಜೇ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ರಾಜ್ಯ ಸರ್ಕಾರವು ಹೈಕೋರ್ಟ್‌ನಲ್ಲಿ ಈ ವಿಷಯವಾಗಿ ಸರಿಯಾಗಿ ವಾದಮಂಡಿಸಿಲ್ಲ ಎಂದು ಈ ಸಮುದಾಯದ ಮುಖಂಡರು  ಹಿಡಿ ಶಾಪ ಹಾಕುತ್ತಿದ್ದಾರೆ. ಜಾಟರು ಸೇರಿದಂತೆ ಸುಮಾರು 81 ಜಾತಿಗಳಿಗೆ ಒಬಿಸಿ ಕೋಟಾದ ಅಡಿ ನೀಡಿರುವ ಶೇ21ರಷ್ಟು ಮೀಸಲಾತಿಯನ್ನು  ಪುನರ್‌ಪರಿಶೀಲಿಸುವುದಕ್ಕೆ ರಾಜ್ಯ ಸರ್ಕಾರವು  ಶಾಸನಬದ್ಧ ಒಬಿಸಿ ಆಯೋಗ ರಚಿಸಬೇಕು ಎಂದೂ ಹೈಕೋರ್ಟ್‌ ಹೇಳಿತ್ತು.

ಕೋರ್ಟ್‌ ಆದೇಶದಿಂದಾಗಿ ಒಬಿಸಿ ವರ್ಗಗಳಲ್ಲಿ ಅನಿಶ್ಚಿತತೆ ಮೂಡಿದೆ ಎನ್ನುವುದು ಮುಖಂಡ  ಆರೋಪ.  ‘ಜಾಟರಿಗೆ ಮೀಸಲಾತಿ ವಿಷಯದಲ್ಲಿ ಹೈಕೋರ್ಟ್‌ ತನ್ನ ಅಧಿಕಾರ ವ್ಯಾಪ್ತಿ ಮೀರಿ   ಆದೇಶ ನೀಡಿದೆ. ಆದ ಕಾರಣ ರಾಜ್ಯ ಸರ್ಕಾರವು ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಆ ಮೂಲಕ ರಾಜಸ್ತಾನವನ್ನು   ಜಾತಿ   ಕಲಹದಿಂದ ಮುಕ್ತಗೊಳಿಸಿಬೇಕು’ ಎಂದೂ ಮುಖಂಡರು ಒತ್ತಾಯಿಸುತ್ತಿದ್ದಾರೆ.

‘ಜಾಟರಿಗೆ ಮೀಸಲಾತಿ ರದ್ದು ಮಾಡಬೇಕು ಎಂದು ಆಗ್ರಹಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು.  ಕೃಷ್ಣನ್‌ ಆಯೋಗದ ಶಿಫಾರಸಿನ ಮೇಲೆ ಜಾಟ ಸಮುದಾಯಕ್ಕೆ ಮೀಸಲಾತಿ ನೀಡಲಾಗಿದೆ.  ವಿಸ್ತೃತ ಅಧ್ಯಯನ ಮಾಡಿಯೇ ಸಮಿತಿ ಈ ಶಿಫಾರಸು ಮಾಡಿತ್ತು. ಆದ ಕಾರಣ ಹೈಕೋರ್ಟ್‌ ಆಗಲೀ, ಸುಪ್ರೀಂಕೋರ್ಟ್‌ ಆಗಲೀ ಇದನ್ನು ರದ್ದು ಮಾಡಲು ಸಾಧ್ಯವಿಲ್ಲ’ ಎಂದು ಮಾಜಿ ಸಂಸದ, ರಾಜ್ಯದ ಪ್ರಭಾವಿ  ಜಾಟ ಮುಖಂಡ  ಡಾ. ಹರಿ ಸಿಂಗ್‌ ಹೇಳಿದ್ದಾರೆ.

‘ಆಗಿನ ಅಶೋಕ್‌ ಗೆಹ್ಲೊಟ್‌ ಸರ್ಕಾರ  ಕೃಷ್ಣನ್‌ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡಿತ್ತು. ಅದೇ ಪ್ರಕಾರ ಜಾಟ ಸಮುದಾಯವನ್ನು ಒಬಿಸಿ ವರ್ಗಕ್ಕೆ ಸೇರಿಸಿತ್ತು. ಮೀಸಲಾತಿಯನ್ನು ರದ್ದು ಮಾಡಲು ಸಾಧ್ಯವಾಗದಿರುವಾಗ ಇದನ್ನು ಒಬಿಸಿ ಆಯೋಗದ ಮುಂದೆ ಇಡುವ ಅಗತ್ಯವೇ ಇಲ್ಲ’ ಎಂದೂ ಅವರು  ತಿಳಿಸಿದ್ದಾರೆ.

ಒಬಿಸಿ ಮೀಸಲಾತಿ ಅಧ್ಯಯನಕ್ಕೆ ಶಾಸನಬದ್ಧ ಆಯೋಗ ನೀಡಬೇಕು ಎಂದು ಹೈಕೋರ್ಟ್‌ ನೀಡಿರುವ ನಿರ್ದೇಶನ  ರಾಜ್ಯದಲ್ಲಿ ಹೊಸ ಚರ್ಚೆಗೆ ವೇದಿಕೆ ಮಾಡಿಕೊಟ್ಟಿದೆ. ಒಂದು ವೇಳೆ ಜಾಟರಿಗೆ ಮೀಸಲಾತಿ ನೀಡಬೇಕು ಎಂದು ಸಾಮಾನ್ಯ ಆಯೋಗ ಶಿಫಾರಸು ನೀಡಿದರೆ ರಾಜ್ಯ ಸರ್ಕಾರವು ಅದನ್ನು ಒಪ್ಪಿಕೊಳ್ಳವ ಅಗತ್ಯವಿಲ್ಲ. ಆದರೆ ಶಾಸನಬದ್ಧ ಆಯೋಗವು ನೀಡುವ ಶಿಫಾರಸುಗಳನ್ನು ಸರ್ಕಾರವು ಕಡ್ಡಾಯವಾಗಿ ಪರಿಗಣಿಸಬೇಕಾಗುತ್ತದೆ ಎಂದು ಜಾಟ ಮುಖಂಡರು ಅಭಿಪ್ರಾಯಪಡುತ್ತಾರೆ.

‘ಶಾಸನಬದ್ಧ ಆಯೋಗಕ್ಕೆ ರಾಜ್ಯ ಸರ್ಕಾರವು ಕೇವಲ ಸದಸ್ಯರನ್ನು ನೇಮಕ ಮಾಡಬಹುದು.  ಒಬಿಸಿ ಆಯೋಗವನ್ನು ಪುನರ್‌ ಪರಿಶೀಲಿಸುವುದಾದರೆ ಆಗ ಬುಡಕಟ್ಟು ಸೇರಿದಂತೆ ರಾಜ್ಯದ ಎಲ್ಲ ಆಯೋಗಗಳನ್ನು ಪುನರ್‌ಪರಿಶೀಲಿಸಬೇಕಾಗುತ್ತದೆ’ ಎಂದು ಹರಿ ಸಿಂಗ್‌ ಹೇಳುತ್ತಾರೆ.

‘ಜಾಟರಿಗೆ ಮೀಸಲಾತಿ ರದ್ದು ಮಾಡುವಂತೆ ಕೋರಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿಯ ಬಗ್ಗೆ ರಾಜ್ಯ ಸರ್ಕಾರವು ಉದ್ದೇಶಪೂರ್ವಕವಾಗಿಯೇ  ಆಸಕ್ತಿ ತೋರಿಸುತ್ತಿಲ್ಲ. ಕೋರ್ಟ್‌ನಲ್ಲಿ ಸರ್ಕಾರವು ಬಲವಾಗಿ ಸಮರ್ಥನೆ ಮಾಡಿಕೊಂಡಿದ್ದರೆ ರಾಜಸ್ತಾನದಲ್ಲಿ ಒಬಿಸಿ ಮೀಸಲಾತಿ ವಿಷಯ ಯಾವತ್ತೂ ವಿವಾದಕ್ಕೆ ಕಾರಣವಾಗುತ್ತಿರಲಿಲ್ಲ’ ಎಂದೂ ಜಾಟ ಮುಖಂಡರು ಅಭಿಪ್ರಾಯಪಡುತ್ತಾರೆ.

‘ಜಾಟರಿಗೆ ನೀಡಿರುವ ಮೀಸಲಾತಿಯನ್ನು ವಿವಾದ ಮಾಡುವ ಮೂಲಕ ಮುಖ್ಯಮಂತ್ರಿ ರಾಜೇ ಅವರು ಈ ಸಮುದಾಯವನ್ನು ನಿಯಂತ್ರಿಸುವುದಕ್ಕೆ  ಬಯಸಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಗಳಲ್ಲಿ   ಜಾಟರನ್ನು ಸಂಭವನೀಯ ಮತ ಬ್ಯಾಂಕ್‌ ಆಗಿ ಬಳಸಿಕೊಳ್ಳುವ ಇರಾದೆ ಅವರಿಗೆ ಇದೆ’ ಎಂದು ಹರಿ ಸಿಂಗ್ ಆರೋಪಿಸಿದ್ದಾರೆ.

‘ರಾಜಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಜಾಟರು ಶೇ20ಕ್ಕೂ ಹೆಚ್ಚು  ಇದ್ದಾರೆ. ಇವರ ಮತಗಳ ಧ್ರುವೀಕರಣದಿಂದಾಗಿ ಬಿಜೆಲಿಯು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ವಿಜಯ ಸಾಧಿಸಿತು’ ಎಂದು ಪ್ರಮುಖ ಜಾಟ ಮುಖಂಡರೊಬ್ಬರು ಹೇಳುತ್ತಾರೆ.

ವರ: ಕೋರ್ಟ್‌  ಆದೇಶವು ಭವಿಷ್ಯದಲ್ಲಿ ರಾಜೇ ಹಾಗೂ ಇತರ ರಾಜಕೀಯ ಪಕ್ಷಗಳ ಪಾಲಿಗೆ ವರವಾಗಿ ಪರಿಣಮಿಸಿದೆ. ಕೋರ್ಟ್‌ ಆದೇಶದ ಬಳಿಕ ರಾಜ್ಯ ಸರ್ಕಾರವು ಮೀಸಲಾತಿ ವಿಷಯದಲ್ಲಿ ಒಬಿಸಿ ವರ್ಗಗಳ ಒತ್ತಡಕ್ಕೆ ಮಣಿಯುವುದಕ್ಕೆ ಯಾವುದೇ ಕಾರಣ ಇಲ್ಲ. ಸದ್ಯಕ್ಕಂತೂ  ಒಬಿಸಿ ಮೀಸಲಾತಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಂದ ರಾಜೇ  ಬಚಾವ್‌ ಆಗಿದ್ದಾರೆ.

ಈ ವಿಷಯವು ಮುಂದಿನ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆವರೆಗೆ ಚರ್ಚೆಯಲ್ಲಿರುವ ಸಾಧ್ಯತೆ ಇದೆ. ಇದರಿಂದಾಗಿ  ಕಾಂಗ್ರೆಸ್‌ ಹಾಗೂ ಬಿಜೆಪಿ ರಾಜಕೀಯ ಲಾಭ ಪಡೆದುಕೊಳ್ಳಬಹುದಾಗಿದೆ. ತಜ್ಞರ ಪ್ರಕಾರ, ರಾಜ್ಯ ಸರ್ಕಾರವು ಶಾಶ್ವತ ಒಬಿಸಿ ಆಯೋಗ ರಚಿಸುವ ಸಂಬಂಧ ಶೀಘ್ರವೇ ಅಧಿಸೂಚನೆ ಹೊರಡಿಸಲಿದೆ.

Write A Comment