ಬೆಂಗಳೂರು: ಗೀತರಚನಕಾರನಿಂದ ನಿರ್ದೇಶಕನಾಗಿ ಭಡ್ತಿ ಹೊಂದಿರುವ ಕವಿರಾಜ್ ತಮ್ಮ ಚೊಚ್ಚಲ ಸಿನೆಮಾ ‘ಮದುವೆಯ ಮಮತೆಯ ಕರೆಯೋಲೆ’ ಸಿನೆಮಾದ ಚಿತ್ರೀಕರಣವನ್ನು ಭರದಿಂದ ಮುಂದುವರೆಸಿದ್ದಾರೆ. ಇತ್ತೀಚೆಗಷ್ಟೇ ಮತ್ತೊಂದು ಹಾಡಿನ ಚಿತ್ರೀಕರಣ ಸಂಪೂರ್ಣಗೊಳಿಸಿದ್ದಾರೆ.
ಅಮೂಲ್ಯ ಮತ್ತು ಸೂರಜ್ ಗೌಡ ಮುಖ್ಯಭೂಮಿಕೆಯಲ್ಲಿರುವ ಈ ಸಿನೆಮಾದ ಈ ಹಾಡು ಆಚಾರ್ಯ ಕಾಲೇಜು, ಒರಿಯಾನ್ ಮಾಲ್, ಜೆಪಿ ಪಾರ್ಕ್, ಜೆನ್ ಪಾರ್ಕ್ ಗಳಲ್ಲಿ ಚಿತ್ರೀಕರಣಗೊಂಡಿದೆ.
ಈಗ ಮುಂದಿನ ಹಂತದ ಚಿತ್ರೀಕರಣಕ್ಕೆ ಕವಿರಾಜ್ ಸೆಪ್ಟಂಬರ್ ನಲ್ಲಿ ಮಲೇಶಿಯಾಕ್ಕೆ ತೆರಳಲಿದ್ದಾರೆ. “ಬಹಳ ಚಿಂತಿಸಿದ ಮೇಲೆ ಮಲೇಶಿಯಾವನ್ನು ಆಯ್ಕೆ ಮಾಡಿದೆವು ಏಕೆಂದರೆ ಅಲ್ಲಿನ ನಗರಗಳಲ್ಲೇ ಬೀಚುಗಳು ಇರುವುದರಿಂದ” ಎನ್ನುತ್ತಾರೆ ಕವಿರಾಜ್.
‘ಮದುವೆಯ ಮಮತೆಯ ಕರೆಯೋಲೆ’ ಸಿನೆಮಾವನ್ನು ಡಿಸೆಂಬರ್ ನಲ್ಲಿ ಬಿಡುಗಡೆ ಮಾಡಲು ತಂಡ ಸಿದ್ಧತೆ ನಡೆಸುತ್ತಿದೆ. “ಎಲ್ಲ ಯೋಜನೆಯಂತೆಯೇ ಮುಂದುವರೆದಿದೆ. ಸಂಬಾಷಣೆಯ ಭಾಗ ಮತ್ತು ಹಾಡುಗಳನ್ನು ಅಕ್ಟೋಬರ್ ಒಳಗೆ ಮುಗಿಸುತ್ತೇವೆ. ಎಡಿಟಿಂಗ್ ಕಾರ್ಯ ಕೂಡ ಜಾರಿಯಲ್ಲಿದ್ದು, ಡಬ್ಬಿಂಗ್ ಕೂಡ ಪ್ರಗತಿಯಲ್ಲಿದೆ” ಎನ್ನುತ್ತಾರೆ ಅವರು.