ನವರಸನಾಯಕ ಜಗ್ಗೇಶ್ ಅವರು ಕಿರುತೆರೆಗೆ ಬರುತ್ತಿದ್ದಾರೆ. ಇನ್ಮುಂದೆ ಸಿನಿಮಾ ಮಾಡಲ್ವಾ? ಸೀರಿಯಲ್ಲಲ್ಲಿ ನಟಿಸ್ತಾರಾ ಅಂತೆಲ್ಲ ಕೇಳಬೇಡಿ. ಅವರು ಕಿರುತೆರೆ ಪ್ರವೇಶಿಸುತ್ತಿರುವುದು ನಿರ್ಮಾಪಕರಾಗಿ!
ಜಗ್ಗೇಶ್‌ಗೆ ಕಿರುತೆರೆ ಹೊಸತಲ್ಲ. ಈ ಹಿಂದೆ ಉದಯದಲ್ಲಿ ‘ಕೈಯಲ್ಲಿ ಕೋಟಿ… ಹೇಳ್ಬಿಟ್ ಹೊಡೀರಿ’ ಎಂಬ ಗೇಮ್ ಶೋ ನಡೆಸಿಕೊಟ್ಟಿದ್ದರು. ಕಸ್ತೂರಿ ಚಾನಲ್‌ಗಾಗಿ ಕಾಗೆ ಹಾರಿಸೋ ಕಾಮಿಡಿ ಪ್ರೊಗ್ರಾಮೊಂದನ್ನೂ ಮಾಡಿಕೊಟ್ಟಿದ್ದರು. ಆದರೆ ನಿರ್ಮಾಪಕರಾಗಿ ಇದು ಹೊಸ ಹೆಜ್ಜೆ.
ಜಗ್ಗೇಶ್ ಅಂದಮೇಲೆ ಅದು ಕಾಮಿಡಿ ಸ್ಲಾಟೇ ಆಗಿರಬೇಕು. ಹೌದು ಜೀ ಕನ್ನಡವಾಹಿನಿಗಾಗಿ ರಾತ್ರಿ ಹತ್ತೂವರೆಗೆ ಹೊಸ ಕಾಮಿಡಿ ಧಾರವಾಹಿ ನಿರ್ಮಿಸಲು ಜಗ್ಗೇಶ್ ಆಫರ್ ಪಡೆದಿದ್ದಾರೆ. ಅವರ ಹಿರಿಯ ಪುತ್ರ ಗುರುರಾಜ್ ಅಧಿಕೃತ ನಿರ್ಮಾಪಕರ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಧಾರವಾಹಿ ‘ಪಾಪ್‌ಕಾರ್ನ್’ ಅಥವಾ ‘ಶ್ರೀಮಾನ್ ಶ್ರೀಮತಿ’ ಎಂಬೆರಡು ಹೆಸರುಗಳು ಮನಸಲ್ಲಿದ್ದರೂ ಶ್ರೀಮಾನ್ ಶ್ರೀಮತಿಯೇ ಫಿಕ್ಸ್ ಆಗುವ ಸಾಧ್ಯತೆ ಇದೆ. ಜೀ ಅವರದ್ದೇ ಹಿಂದಿ ಚಾನಲ್‌ನಲ್ಲಿ ಪ್ರಸಾರವಾಗುತ್ತಿರುವ ‘ಭಾಬಿಜಿ ಘರ್ ಪರ್ ಹೈ’ ಎಂಬ ಹಾಸ್ಯ ಧಾರಾವಾಹಿಯ ರೀಮೇಕ್ ಆಗಿರುವ ಇದನ್ನು ಪೃಥ್ವಿರಾಜ್ ನಿರ್ದೇಶಿಸುತ್ತಿದ್ದಾರೆ. ದಕ್ಷಿಣಾಮೂರ್ತಿ, ಭರತ್ ಸಂಭಾಷಣೆ ಬರೆದಿದ್ದಾರೆ.
ಪಾತ್ರ ಪರಿಚಯ ಹಾಗೂ ಧಾರವಾಹಿ ಪರಿಚಯಿಸಲು ಜಗ್ಗೇಶ್ ಬರುತ್ತಾರದರೂ ಅವರು ನಟಿಸುವುದಿಲ್ಲ. ಆದರೆ ಅವರ ಪುತ್ರರಲ್ಲೊಬ್ಬರು ಕಾಣಿಸಿಕೊಳ್ಳುತ್ತಾರಂತೆ.