ಹೆಚ್. ಡಿ. ಕೋಟೆ: ಮಾಂಸ ಪ್ರಿಯರಿಗೊಂದು ಶಾಕ್ ಸುದ್ದಿ. ನೀವು ಮಾಂಸ ಕೊಳ್ಳಲು ಅಂಗಡಿಗೆ ಹೋದಾಗ ಒಂದಲ್ಲ, ಎರಡು ಬಾರಿ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಆ ನಂತರ ಬಳಿಕ ಖರೀದಿ ಮಾಡಿ, ಇಲ್ಲದಿದ್ದರೆ ಹುಳ ಹಿಡಿದಿರುವ ಕೊಳೆತ ಮಾಂಸ ನಿಮ್ಮ ಹೊಟ್ಟೆ ಸೇರೀತು ಜೋಕೆ. ಅಯ್ಯೋ ಬಿಡಿ ಈಗ ಶ್ರಾವಣ ಮಾಸ ನಾನ್ ವೆಜ್ ತಿನ್ನಂಗಿಲ್ಲ, ಮುಂದೆ ನೋಡೋಣ ಅಂತೀರಾ?
ಹೌದು. ಹೆಚ್ ಡಿ ಕೋಟೆ ಸಮೀಪದ ಹ್ಯಾಂಡ್ ಪೋಸ್ಟ್ ನಲ್ಲಿ ಹುಳು ಬಂದಿದ್ದ ಮೇಕೆ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಯೊಂದರ ಮೇಲೆ ದಾಳಿ ನಡೆಸಿದ ಸಾರ್ವಜನಿಕರೇ ಕೊಳೆತುಹುಳುಬಂದಿದ್ದ ಮಾಂಸದ ಸಮೇತ ಅಂಗಡಿ ಮಾಲಿಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹ್ಯಾಂಡ್ಪೋಸ್ಟ್ನಲ್ಲಿ ಮಾಂಸ ಮಾರಾಟ ಮಾಡುತ್ತಿದ್ದ ಖಲೀಲ್ ಮತ್ತು ಆತನ ಸಹೋದರ ಫಾಜಲ್ ಅವರ ಅಂಗಡಿಯಿಂದ ಮಾಂಸ ಪ್ರಿಯರು ಮಾಂಸ ಖರೀದಿಸಿ ಮನೆಗೆ ತೆರಳಿದ್ದಾರೆ. ಮನೆಯಲ್ಲಿ ಮಾಂಸದ ಪ್ಯಾಕೇಟ್ ತೆರೆದು ನೋಡಿದಾಗ ದುರ್ವಾಸನೆ ಮೂಗಿಗೆ ಬಡಿದಿದೆ. ಇದರಿಂದ ಗಾಬರಿಗೊಂಡು ಮಾಂಸವನ್ನು ವಾಪಸ್ ಅಂಗಡಿಗೆ ತೆಗೆದುಕೊಂಡು ಬಂದು ಪರೀಕ್ಷಿಸಿದ್ದಾರೆ. ಸುಮಾರು ಎಂಟತ್ತು ದಿನಗಳ ಹಿಂದೆ ಕೊಯ್ದಿರುವ ಮೇಕೆ ಮಾಂಸವನ್ನು ಫ್ರಿಡ್ಜ್ ನಲ್ಲಿಟ್ಟು ಮಾರಾಟ ಮಾಡಿದ್ದಾರೆ.
ಪದೇ ಪದೇ ವಿದ್ಯುತ್ ಕೈ ಕೊಟ್ಟಿದ್ದರಿಂದ ಫ್ರಿಡ್ಜ್ ನಲ್ಲಿ ಇಟ್ಟಿದ್ದ ಮಾಂಸ ಕೆಟ್ಟಿದೆ. ಕೊಳೆತ ಮಾಂಸ ಹುಳ ಹಿಡಿದು ದುರ್ವಾಸನೆ ಬೀರತೊಡಗಿದೆ. ಅಂತಹ ಮಾಂಸವನ್ನೇ ಮಾರಿದವರಿಗೆ ಜನ ಸರಿಯಾಗಿಯೇ ಪಾಠ ಕಲಿಸಿದ್ದಾರೆ. ಅಂಗಡಿ ಮಾಲೀಕರ ವಿರುದ್ದ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಫಾಜಲ್ ವಶಕ್ಕೆ ತೆಗೆದುಕೊಂಡ ಪೊಲೀಸರು ಮಾಂಸದಂಗಡಿ ಮಾಲೀಕ ಖಲೀಲ್ ಬಂಧನಕ್ಕೆ ಬಲೆ ಬೀಸಿದ್ದಾರೆ.