ಕನ್ನಡ ಚಿತ್ರರಂಗಕ್ಕೆ ‘ಉಪ್ಪಿಗಿಂತ ರುಚಿ ಬೇರೆ ಇಲ್ಲ’ ಎಂದು ಹೇಳಿಕೊಟ್ಟಿದ್ದು ಚಿತ್ರಾನ್ನಪ್ರಿಯ ನಟ ಕಂ ನಿರ್ದೇಶಕ ಉಪೇಂದ್ರ. ತಾವೇ ಸೃಷ್ಟಿಸಿದ ಟ್ರೆಂಡ್ ಅನ್ನು ತಾವೇ ಮುರಿಯುವುದಕ್ಕೆ ಹೊರಟಿದ್ದು ಅದಕ್ಕೆ ‘ಉಪ್ಪಿ-2’ಗೆ ಎಲ್ಲ ರೀತಿಯ ಮಸಾಲೆಗಳನ್ನು ತುಂಬಿದ್ದಾರೆ.
ಚಿತ್ರದ ಹಾಡುಗಳು ಮೂಲಗಳ ಈಗಾಗಲೇ ಒಂದು ಮಟ್ಟಕ್ಕೆ ಹವಾ ಸೃಷ್ಟಿಸಿರುವ ‘ಉಪ್ಪಿ-2’, ಬಿಡುಗಡೆಯಲ್ಲೂ ದಾಖಲೆ ಮಾಡಲು ಹೊರಟಿದೆ. ಹೌದು, ಬರೋಬ್ಬರಿ 600ಚಿತ್ರಮಂದಿರಗಳಲ್ಲಿ ಈ ಸಿನಿಮಾ ತೆರೆ ಕಾಣುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ ಹಾಡುಗಳಿಗೆ ದೊಡ್ಡ ಮಟ್ಟದಲ್ಲಿ ಹಿಟ್ಸ್ ಸಿಗುತ್ತಿದೆ. ಹಾಡು ಮತ್ತು ಉಪೇಂದ್ರ ಅವರ ಇಮೇಜ್ನಿಂದಲೇ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕ್ರೇಜು ಹೆಚ್ಚಾಗುತ್ತಿರುವ ಹಾಗೆ ಚಿತ್ರವನ್ನು ತೆರೆಗೆ ತರಲು ಉಪೇಂದ್ರ ನಿರ್ಧರಿಸಿದ್ದಾರೆ. ಹೀಗಾಗಿ ಇದೇ ಆಗಸ್ಟ್ 14ರಂದು ಕರ್ನಾಟಕ ಸೇರಿದಂತೆ ಆಂಧ್ರ, ಗುಜರಾತ್, ಬಾಂಬೆ, ಪುಣೆ ಮುಂತಾದ ಕಡೆ ಸಿನಿಮಾ ತೆರೆಗೆ ಬರಲಿದೆ. ಅಲ್ಲದೆ ತೆಲುಗು ಚಿತ್ರರಂಗದಲ್ಲಿ ಉಪೇಂದ್ರ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಇರುವುದರಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣ ಈ ಎರಡೂ ರಾಜ್ಯಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.
ವಿಶೇಷ ಅಂದರೆ, ಉಪ್ಪಿ-2 ಚಿತ್ರದ ಬಿಡುಗಡೆಯ ಹಿಂದೆ ದೊಡ್ಡ ದೊಡ್ಡ ವಿತರಕರು ನಿಂತಿದ್ದಾರೆ. ಕರ್ನಾಟಕದಲ್ಲಿ ಕೆ.ಪಿ.ಶ್ರೀಕಾಂತ್ ವಿತರಣೆ ಮಾಡಿದರೆ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ನಟ ಅಲ್ಲೂ ಅರ್ಜುನ್ ಅಭಿನಯದ ‘ರೇಸುಗುರ್ರಂ’ ಚಿತ್ರವನ್ನು ನಿರ್ಮಾಣ ಮಾಡಿದೆ ಬುಜ್ಜಿ ಎಂಬುವರು ಈಗಾಗಲೇ ‘ಉಪ್ಪಿ-2’ ವಿತರಣೆ ರೈಟ್ಸ್ ತೆಗೆದುಕೊಂಡಿದ್ದಾರೆ.
ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹಾಗೂ ನಟನೆ ಈ ಐದು ವಿಭಾಗಗಳಲ್ಲಿ ಉಪೇಂದ್ರ ಸಿಕ್ಕಾಪಟ್ಟೆ ಶ್ರಮ ಹಾಕಿದ್ದಾರೆ. ರಷ್ಯಾ ಮೂಲಕ ಮಾಡೆಲ್ ಕಂ ನಟಿ ಕ್ರಿಸ್ಟಿನಾ ಚಿತ್ರದ ನಾಯಕಿಯಾಗಿದ್ದಾರೆ. ಪಾರೂಲ್ ಯಾದವ್ ಚಿತ್ರದ ಮತ್ತೊಬ್ಬ ನಾಯಕಿ. ಅಶೋಕ್ ಕಶ್ಯಪ್ ಕ್ಯಾಮೆರಾ ಹಿಡಿದಿದ್ದಾರೆ. ಇನ್ನು ಸಂಗೀತ ನಿರ್ದೇಶಕ ಗುರುಕಿರಣ್ ಈ ಚಿತ್ರದ ಮೂಲಕ ಮತ್ತೆ ತಮ್ಮ ‘ಗುರು’ ದಿನಗಳು ಮರಳುವಂಥ ಹಾಡುಗಳನ್ನು ಕೊಟ್ಟಿದ್ದಾರೆ.