ನಿರ್ದೇಶಕ ಮಧು ಚಂದ್ರ ಮತ್ತು ನಟ ಕಿಶೋರ್ ಕಾಂಬಿನೇಷನ್‌ನ ‘ವಾಸ್ಕೋಡಿಗಾಮ’ ಚಿತ್ರ ಶಿಕ್ಷಣ ಕ್ಷೇತ್ರದ ಕುರಿತು ಮಾತನಾಡಲಿದೆ ಎನ್ನುವುದು ತಿಳಿದೇ ಇದೆ.
ಈಗಾಗಲೇ ಕಿಶೋರ್ ಮಸ್ತ್ ಮಸ್ತ್ ಸ್ಟೇಫ್ಸ್ ಗೀತೆಗಳನ್ನು ಪ್ರೇಕ್ಷಕರು ಕಂಡಾಗಿದೆ. ಶಿಕ್ಷಣ ಒಳ–ಹೊರಗಿನ ಗಂಭೀರ ವಿಷಯವನ್ನು ಅದು ಹೇಗೆ ನಿರ್ದೇಶಕರು ಮನರಂಜನೆಗೆ ಬ್ಲಂಡ್ ಮಾಡಿದ್ದಾರೆ ಎನ್ನುವುದನ್ನು ಸಿನಿಮಾ ತೆರೆಗೆ ಬಂದ ನಂತರ ಕಾಣಬಹುದು.
‘ವಾಸ್ಕೋಡಿಗಾಮ’ನ ವರ್ತಮಾನದ ಸುದ್ದಿ ಎಂದರೆ ಸೋಮವಾರ (ಆಗಸ್ಟ್ 10) ಚಿತ್ರದ ಟ್ರೇಲರ್ ರಾಜ್ಯದ 200 ಕಾಲೇಜುಗಳಲ್ಲಿ ಬಿಡುಗಡೆಯಾಗುತ್ತಿರುವುದು. ಈಗಾಗಲೇ ಒಂದು ಸುತ್ತಿನ ಪ್ರಚಾರ ಕಾರ್ಯ ಮುಗಿಸಿರುವ ಚಿತ್ರತಂಡ ‘ವಾಸ್ಕೋಡಿಗಾಮ’ ಏನನ್ನು ಸಂಶೋಧಿಸಲಿದ್ದಾನೆ ಮತ್ತು ಶಿಕ್ಷಣದ ಬಗ್ಗೆ ಏನು ಮಾತನಾಡುವನು ಎನ್ನುವುದನ್ನು ಹೇಳಿದೆ.
‘ವಾಸ್ಕೋಡಿಗಾಮ’ ಎಂದರೆ ಅರ್ಥ ಏನು ಗೊತ್ತೇ? ವಾಸು ಡಿ. ಗಾಮನಗಳ್ಳಿ ಅಂತ. ಈ ವಾಸು ‘ವಾಸ್ಕೋಡಿಗಾಮ’ನಾಗಿದ್ದು ಹೇಗೆ ಎನ್ನುವುದೇ ಚಿತ್ರದ ಹೈಲೆಟ್.
ಸೋಮವಾರ ನಗರದಲ್ಲಿ ನಟ ಶ್ರೀಮುರುಳಿ ಟ್ರೇಲರ್ ಅನಾವರಣಗೊಳಿಸಲಿದ್ದು, ನಂತರ ಯೂ–ಟ್ಯೂಬ್ ಲಿಂಕ್‌ನಿಂದ 200 ಕಾಲೇಜುಗಳಲ್ಲಿ ‘ವಾಸ್ಕೋಡಿಗಾಮ’ನ ಝಲಕ್‌ನ ದರ್ಶನವಾಗಲಿದೆ. ವಿದ್ಯಾರ್ಥಿಗಳು ಕಾಲೇಜು ಆವರಣ, ಕ್ಯಾಂಟೀನ್ ಹೀಗೆ ಅವರಿಗೆ ಎಲ್ಲಿ ಅನುಕೂಲವೋ ಅಲ್ಲಿ ಟ್ರೇಲರ್ ಬಿಡುಗಡೆ ಮಾಡಬಹುದು. ಇದಕ್ಕೆ ವೇದಿಕೆ–ಸಭಾ ಕಾರ್ಯಕ್ರಮವೇ ಆಗಬೇಕು ಎಂದೇನಿಲ್ಲ.
ಇದು ವಿದ್ಯಾರ್ಥಿಗಳೇ ಮಾಡುತ್ತಿರುವ ಕೆಲಸ. ವಾಸ್ಕೋಡಿಗಾಮನಿಗೆ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎನ್ನುತ್ತಿದೆ ಮಧು ಚಂದ್ರರ ಚಿತ್ರತಂಡ. ಅಂದುಕೊಂಡಂತೆ ಆದರೆ ಆಗಸ್ಟ್ ಕೊನೆಯ ವಾರದಲ್ಲಿ ಸಿನಿಮಾ ತೆರೆಗೆ ಬರಲಿದೆ.