ಕರೆಯದೆ ಬಂದ ಅವಕಾಶವನ್ನು ಸದುಪಯೋಗ ಮಾಡಿಕೊಂಡರೆ ಅದು ಭವಿಷ್ಯದಲ್ಲಿ ಭಾಗ್ಯದ ಬಾಗಿಲನ್ನೇ ತೆರೆಯಬಲ್ಲದು ಎಂಬುದಕ್ಕೆ ‘ಬೆತ್ತನಗೆರೆ’ ಚಿತ್ರದ ನಾಯಕಿ ನೈನಾ ಅವರೇ ಉದಾಹರಣೆ. ಮೊದಲ ವರ್ಷದ ಬಿ.ಕಾಂ ಓದುವಾಗಲೇ ನೈನಾಗೆ ಸಿನಿಮಾ ನಟನೆಗೆ ಕರೆ ಬಂದಿದ್ದು. ಆ ಅವಕಾಶವನ್ನು ಬರಮಾಡಿಕೊಂಡಿದ್ದಕ್ಕಾಗಿ ಅವರಿಗಿಂದು ಬಿಡುವಿಲ್ಲದಷ್ಟು ಕೆಲಸ.
ನೈನಾ ನಟನೆ, ನೃತ್ಯವನ್ನೆಲ್ಲ ಕಲಿತಿಲ್ಲವಾದರೂ ನೃತ್ಯದ ಬಗ್ಗೆ ಮೋಹವಿದೆ. ಆರಂಭದಲ್ಲಿ ನಟನೆ, ನೃತ್ಯ ಸ್ವಲ್ಪ ಕಷ್ಟವೆನಿಸಿದರೂ ನಂತರ ಅವೆಲ್ಲ ಸುಲಭವಾಗಿದೆ. ಮೊದಲ ಚಿತ್ರ ‘ಬೆತ್ತನಗೆರೆ’ ಅವರಿಗೆ ಪಾಠಶಾಲೆಯಾಗಿ ಪರಿಣಮಿಸಿದೆ. ಸಹ ಕಲಾವಿದರು ಹೇಗೆ ಸಿದ್ಧತೆ ನಡೆಸುತ್ತಾರೆ, ಸೆಟ್ ಹೇಗಿರುತ್ತದೆ ಎಂದೆಲ್ಲ ಗ್ರಹಿಕೆಯಿಂದಲೇ ತಿಳಿದುಕೊಂಡಿದ್ದಾರೆ. ಕ್ಯಾಮೆರಾ ಎದುರಿಸುವ ಭಯವಂತೂ ಅವರಿಗೆ ಇಲ್ಲವೇ ಇಲ್ಲ.
ನೈನಾ ಹುಟ್ಟಿದ್ದು, ಓದಿದ್ದು ಎಲ್ಲ ಬೆಂಗಳೂರಿನಲ್ಲೇ. ಅವರ ತಾಯಿ ಬೆಂಗಳೂರಿನವರೇ, ತಂದೆ ದೆಹಲಿಯವರು. ಮನೆಯಲ್ಲಿ ಪೂರ್ತಿಯಾಗಿ ಕನ್ನಡ ಬಳಕೆ ಇಲ್ಲದ್ದಕ್ಕೆ ‘ಕನ್ನಡ – ಇಂಗ್ಲಿಷ್ ಎರಡೂ ಸೇರಿಸಿ ಮಾತನಾಡಿದ್ರೆ ಪರವಾಗಿಲ್ವಾ’ ಎಂದೇ ಮಾತಿಗಾರಂಭಿಸುತ್ತಾರೆ. ಆದರೆ ಕನ್ನಡ ಅರ್ಥವಾಗುತ್ತದೆ. ‘ಬೆತ್ತನಗೆರೆ’ ಚಿತ್ರದ ಜೊತೆಗೇ ಇನ್ನೂ ಮೂರು ಚಿತ್ರಗಳಲ್ಲಿ ನೈನಾ ನಟಿಸಿದ್ದಾರಾದರೂ ಕಾಲೇಜು ಜೀವನವನ್ನೂ ಕಾಪಿಟ್ಟುಕೊಂಡಿದ್ದಾರೆ.
ಸದ್ಯ ಮೂರನೇ ವರ್ಷದ ಬಿ.ಕಾಂ ಓದುತ್ತಿರುವ ನೈನಾ ಅವರ ಮೊದಲ ಚಿತ್ರ ‘ಬೆತ್ತನಗೆರೆ’ ಆರಂಭವಾಗಿದ್ದು ಒಂದೂವರೆ ವರ್ಷಗಳ ಹಿಂದೆ. ಇತ್ತೀಚೆಗಷ್ಟೇ ಆಡಿಯೊ ಬಿಡುಗಡೆ ಮಾಡಿಕೊಂಡಿರುವ ಚಿತ್ರ ಶೀಘ್ರ ತೆರೆಗೆ ಬರುವ ಮುನ್ಸೂಚನೆ ನೀಡಿದೆ. ಒಂದೂವರೆ ವರ್ಷದ ಅವಧಿ ದೀರ್ಘ ಎನ್ನಿಸಿದರೂ ಅದು ನೈನಾಗೆ ಬೇಸರ ತಂದಿಲ್ಲ. ಬದಲಾಗಿ ವಿವಾದಿತ, ನೈಜ ಕಥೆಯನ್ನು ಅಷ್ಟೇ ಚೆನ್ನಾಗಿ ಚಿತ್ರದ ಚೌಕಟ್ಟಿಗೆ ಒಗ್ಗಿಸುವ ನಿಟ್ಟಿನಲ್ಲಿ ಸಾಕಷ್ಟು ಅಡೆತಡೆಗಳು ಎದುರಾದರೂ ಅದನ್ನು ಬಿಟ್ಟುಕೊಡದ ನಿರ್ದೇಶಕ ಮೋಹನ್ ಗೌಡ ಅವರ ಪ್ರಯತ್ನವನ್ನು ಅವರು ಮೆಚ್ಚುತ್ತಾರೆ.
ನೈನಾ ಇಲ್ಲಿ ಹಳ್ಳಿ ಹುಡುಗಿಯ ಮುಗ್ಧ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಾದರೂ ಒಂದು ಹಾಡಿನಲ್ಲಿ ಸಾಕಷ್ಟು ಗ್ಲಾಮರಸ್ ಆಗಿಯೂ ಅವರನ್ನು ತೋರಿಸಲಾಗಿದೆಯಂತೆ. ಚಿತ್ರದಲ್ಲಿ ಒಂದಷ್ಟು ಹೆಸರುಗಳು ಮತ್ತು ಐಟಂ ಹಾಡಿನ ಕೆಲವು ಸಾಲುಗಳನ್ನು ಸೆನ್ಸಾರ್ ಮಂಡಳಿ ಬದಲಿಸಲು ಸೂಚಿಸಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು. ತನ್ನ ಮೊದಲ ಚಿತ್ರಕ್ಕೇ ಇಂಥ ತೊಂದರೆ ಉಂಟಾಗಿದ್ದರೂ ಅದೇನು ಅಪಶಕುನ ಎನ್ನಿಸಿಲ್ಲ ಅವರಿಗೆ.
ಚಿತ್ರರಂಗಕ್ಕೆ ಬರುತ್ತೇನೆಂಬ ಕಲ್ಪನೆಯೂ ಇಲ್ಲದ ನೈನಾಗೆ ಕೆಲವು ಚಿತ್ರಗಳ ಅವಕಾಶ ಬಂದಿದ್ದವು. ಆದರೆ, ‘ಮಾಡಿದರೆ ಒಳ್ಳೆಯ ಸಿನಿಮಾವನ್ನೇ ಮಾಡಬೇಕು’ ಎಂದುಕೊಂಡಿದ್ದ ಅವರಿಗೆ ಒಂದು ದಿನ ‘ಬೆತ್ತನಗೆರೆ’ ತಂಡ ಭೇಟಿಯಾಗಿ ಕಥೆ ಹೇಳಿತ್ತು. ನೈಜ ಘಟನೆಯನ್ನಾಧರಿಸಿದ ಈ ಕಥೆಯನ್ನು ಕೇಳಿದ ನೈನಾಗೆ, ‘ನಾನು ಕಾಯುತ್ತಿರುವ ಒಳ್ಳೆಯ ಅವಕಾಶ ಈಗ ಬಂದಿದೆ’ ಎಂದನಿಸಿದ್ದೇ ತಡ, ಕಥೆ ಕೇಳಿದ ಇಪ್ಪತ್ನಾಲ್ಕು ಗಂಟೆಯೊಳಗೆ ಚಿತ್ರವನ್ನು ಒಪ್ಪಿಕೊಂಡಾಗಿತ್ತು.
‘ಬೆತ್ತನಗೆರೆ’ ಚಿತ್ರ ಒಪ್ಪಿಕೊಳ್ಳಲು ಇನ್ನೊಂದು ಮುಖ್ಯ ಕಾರಣವೆಂದರೆ, ಈ ಚಿತ್ರದ ಅವಕಾಶ ಬಂದ ಸಂದರ್ಭದಲ್ಲಿ ಸುಮಂತ್ ಶೈಲೇಂದ್ರ ಅಭಿನಯದ ‘ದಿಲ್‌ವಾಲ’ ಚಿತ್ರದ ಪೋಸ್ಟರ್‌ಗಳು ಅಲ್ಲಲ್ಲಿ ಕಾಣುತ್ತಿದ್ದವು. ಆ ಚಿತ್ರದ ನಾಯಕನ ಜೊತೆ ತಾನು ನಟಿಸುವ ಅವಕಾಶ ಸಿಕ್ಕುತ್ತಿದೆ ಎಂಬುದು ಕೂಡ ನೈನಾಗೆ ರೋಮಾಂಚನ ತರುವ ಸಂಗತಿಯಾಗಿತ್ತು.
ಒಮ್ಮೆಲೇ ನಾಲ್ಕು ಚಿತ್ರಗಳು
ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ನಾಲ್ಕು ಚಿತ್ರಗಳಿಗೆ ನಾಯಕಿಯಾಗುವ ಅವಕಾಶ ಎಷ್ಟು ನಟಿಯರಿಗೆ ಸಿಕ್ಕೀತು? ನೈನಾಗೆ ಸಿಕ್ಕಿದೆ. ಅದೇ ಕಾರಣಕ್ಕಾಗಿ ನೈನಾ ಕೂಡ ಫುಲ್ ಖುಷ್. ಸದ್ಯ ನೈನಾ ಅಭಿನಯದ ಮೂರು ಚಿತ್ರಗಳು ಬಿಡುಗಡೆಗೆ ಹೊಸ್ತಿಲಲ್ಲಿವೆ. ಗಾಡ್‌ಫಾದರ್ ಇಲ್ಲದಿದ್ದರೂ, ಒಂದೂ ಚಿತ್ರ ಬಿಡುಗಡೆಯಾಗದಿದ್ದರೂ ಅದ್ಹೇಗೆ ಇಷ್ಟೊಂದು ಚಿತ್ರಗಳಿಗೆ ಆಯ್ಕೆಯಾದೆ ಎಂಬುದು ಮಾತ್ರ ಅವರಿಗೂ ಅರ್ಥವಾಗಿಲ್ಲವಂತೆ!
‘ಜುಗಾರಿ’ ಅವಿನಾಶ್ ಜೊತೆ ‘ಊಟಿ’, ಲೂಸ್ ಮಾದ ಯೋಗೀಶ್ ಜೊತೆ ‘ಕೋಲಾರ’, ತಮಿಳಿನ ‘ಕೊಳಂಜಿ’– ಇವಿಷ್ಟು ಚಿತ್ರಗಳನ್ನು ನೈನಾ ಬಹುತೇಕ ಮುಗಿಸಿದ್ದಾರೆ. ಕನ್ನಡದ ನಾಲ್ಕನೇ ಹಾಗೂ ಒಟ್ಟಾರೆ ಐದನೇ ಚಿತ್ರ ‘ಹೇ ರಾಮ್’ಗೆ ಈಗಷ್ಟೇ ಸಹಿ ಹಾಕಿದ್ದಾರೆ, ಅದಕ್ಕಾಗಿ ಫೋಟೊ ಶೂಟ್ ಕೂಡ ಮುಗಿಸಿದ್ದಾರೆ. ‘ಹೇ ರಾಮ್’ ಚಿತ್ರದಲ್ಲಿ ಶ್ರೀನಗರ ಕಿಟ್ಟಿಯ ಜತೆ ನೈನಾ ಯುಗಳ ಗೀತೆ ಹಾಡಲಿದ್ದಾರೆ.
ತಮ್ಮ ಈವರೆಗಿನ ಚಿತ್ರಗಳಲ್ಲಿ ನೈನಾ ಗುರ್ತಿಸುವ ವಿಶೇಷಣವೆಂದರೆ, ಐದು ಚಿತ್ರಗಳಲ್ಲಿ ನಾಲ್ಕು ನೈಜ ಘಟನೆಯನ್ನಾಧರಿಸಿದವು. ಅವುಗಳಲ್ಲಿ ಮೂರು ರೌಡಿಸಂ ಕಥೆ. ಮೂರು ಚಿತ್ರಗಳ ಹೆಸರು ಒಂದೊಂದು ಊರಿನ ಹೆಸರನ್ನು ಪ್ರತಿನಿಧಿಸುತ್ತದೆ. ಇವೆಲ್ಲದರಲ್ಲೂ ಪಾತ್ರದಿಂದ ಪಾತ್ರಕ್ಕೆ ಬದಲಾವಣೆ ಸಿಕ್ಕಿದೆ ಎಂಬುದು ಅವರಿಗೆ ಹಿಗ್ಗು.
‘ಬೆತ್ತನಗೆರೆ’, ‘ಊಟಿ’ ಬಿಡುಗಡೆಗೆ ಸಿದ್ಧವಿದ್ದು, ‘ಕೋಲಾರ’ವೂ ಕೆಲವೇ ದಿನಗಳಲ್ಲಿ ಸಿದ್ಧವಾಗಲಿದೆ. ಅಲ್ಲಿಗೆ ಈ ವರ್ಷದ ಅಂತ್ಯದಲ್ಲಿ ನೈನಾ ಅಭಿನಯದ ಮೂರು ಚಿತ್ರಗಳು ತೆರೆಕಾಣಲಿವೆ. ತಮ್ಮ ಚಿತ್ರಗಳೇ ಒಂದಕ್ಕೊಂದು ಪೈಪೋಟಿ ಆಗದಂತೆ ಎಚ್ಚರದಿಂದ ಬಿಡುಗಡೆ ಆಗಬೇಕಿರುವುದು ಸದ್ಯ ಅವರಿಗಿರುವ ಕಾಳಜಿ.
ಈವರೆಗೆ ನೈನಾ ಪ್ರತಿ ಚಿತ್ರವನ್ನೂ ಕಲಾವಿದರು, ಕಥೆ, ಪಾತ್ರ ಹೀಗೆ ಎಲ್ಲ ಅಂಶಗಳನ್ನೂ ಪರಿಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಮುಂದೆಯೂ ಇದೇ ಮಾನದಂಡಗಳನ್ನು ಅನುಸರಿಸಲಿದ್ದಾರೆ. ‘ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶವಿರುವ ಪಾತ್ರಕ್ಕೆ ನನ್ನ ಮೊದಲ ಆದ್ಯತೆ ’ ಎನ್ನುತ್ತಾರೆ ಅವರು.
ಅದೂ ಅಲ್ಲದೆ, ಸಮಕಾಲೀನ ಹುಡುಗಿಯನ್ನು ಪ್ರತಿನಿಧಿಸುವ ಪಾತ್ರ ಖುಷಿ ನೀಡುತ್ತದಾದರೂ, ‘ಸಿಂಪಲ್ ಸಿಂಪಲ್ ಪಾತ್ರಗಳೆಂದರೆ ಇಷ್ಟ’ ಎನ್ನುತ್ತಾರೆ. ಚಿತ್ರರಂಗದಿಂದ ದೊಡ್ಡ ನಿರೀಕ್ಷೆಗಳೇನನ್ನೂ ಇಟ್ಟುಕೊಳ್ಳದ ನೈನಾ ನಿರೀಕ್ಷಿಸುವುದು ಸಹೃದಯ ಪ್ರೇಕ್ಷಕ ಮೆಚ್ಚುವ ಪಾತ್ರಗಳನ್ನಷ್ಟೇ.