1995 ರಲ್ಲಿ ಬಿಡುಗಡೆಗೊಂಡ ಉಪೇಂದ್ರ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಓಂ’ ಚಿತ್ರ ಯಾರಿಗೆ ಗೊತ್ತಿಲ್ಲ ಹೇಳಿ. ಈ ಚಿತ್ರ ಅಂದು ಸೂಪರ್ ಹಿಟ್ ಆಗಿತ್ತಲ್ಲದೇ ಅದಾದ ಬಳಿಕವೂ ಆನೇಕ ಬಾರಿ ಬಿಡುಗಡೆಗೊಂಡಿದ್ದು, ಪ್ರೇಕ್ಷಕರು ಮುಗಿ ಬಿದ್ದು ನೋಡಿದ್ದರು.
ಕಿರು ತೆರೆಯಲ್ಲಿ ಪ್ರಸಾರ ಮಾಡಲು ಚಿತ್ರದ ಸೆಟಲೈಟ್ ಹಕ್ಕುಗಳನ್ನು ಪಡೆಯಲು ಆನೇಕ ಟಿವಿ ಚಾನೆಲ್ ಗಳು ಪೈಪೋಟಿ ನಡೆಸಿದ್ದರೂ ಅದನ್ನು ಯಾರಿಗೂ ಕೊಟ್ಟಿರಲಿಲ್ಲ. ಈ ಚಿತ್ರವನ್ನು ವೀಕ್ಷಿಸಬೇಕೆಂದರೆ ಮತ್ತೊಮ್ಮೆ ಬಿಡುಗಡೆಯಾಗುವುದನ್ನು ಪ್ರೇಕ್ಷಕರು ಕಾಯಬೇಕಾಗಿತ್ತು. ಆದರೆ ಈಗ ಸಂತಸದ ಸುದ್ದಿಯೊಂದು ಹೊರ ಬಿದ್ದಿದೆ.
ಉದಯ ವಾಹಿನಿಯವರು ‘ಓಂ’ ಚಿತ್ರದ ಸೆಟಲೈಟ್ ಹಕ್ಕನ್ನು ಬರೋಬ್ಬರಿ 10 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ. ‘ಓಂ’ ಚಿತ್ರದ ಹಕ್ಕನ್ನು ಖರೀದಿಸಿರುವ ಉದಯ ವಾಹಿನಿಯವರು ಯಾವಾಗ ಈ ಚಿತ್ರ ಪ್ರಸಾರವಾಗುತ್ತದೆಂಬುದನ್ನು ಬಹಿರಂಗಪಡಿಸಿಲ್ಲವಾದರೂ ಶೀಘ್ರದಲ್ಲೇ ಕಿರು ತೆರೆ ಮೇಲೆ ‘ಓಂ’ ಪ್ರದರ್ಶನಗೊಳ್ಳಲಿದೆ ಎನ್ನಲಾಗಿದೆ.