ಉತ್ತರ ಪ್ರದೇಶ: ಕಾನೂನು ಕುರಿತು ತಿಳಿ ಹೇಳಬೇಕಾದ ವಕೀಲನೊಬ್ಬ ತಾನೇ ಆರೋಪಿಯಾಗಿರುವ ಪ್ರಕರಣವಿದು. ವಿವಾಹಿತ ಮಹಿಳೆಯೊಬ್ಬಳ ಮೇಲೆ ತನ್ನ ಸಹಚರರೊಂದಿಗೆ ಅತ್ಯಾಚಾರವೆಸಗಿರುವ ಆರೋಪ ಹೊತ್ತು ಈಗ ತಲೆ ಮರೆಸಿಕೊಂಡಿದ್ದಾನೆ.
ಈ ಘಟನೆ ಉತ್ತರ ಪ್ರದೇಶದ ಅಮೇಥಿ ಬಳಿಯ ಖೇರೌನಾ ಗ್ರಾಮದಲ್ಲಿ ನಡೆದಿದ್ದು, ವಕೀಲ ಲಾಲ್ಜಿ ವರ್ಮಾ ಎಂಬಾತ ವಿವಾಹಿತ ಮಹಿಳೆ ತನ್ನ ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ತನ್ನ ಸಹಚರರೊಂದಿಗೆ ನುಗ್ಗಿ ಅತ್ಯಾಚಾರವೆಸಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ವಕೀಲ ಹಾಗೂ ಅತ್ಯಾಚಾರ ಸಂತ್ರಸ್ಥೆಯ ಕುಟುಂಬದವರ ನಡುವೆ ಜಮೀನು ಕುರಿತು ವ್ಯಾಜ್ಯ ನಡೆದಿತ್ತೆಂದು ಹೇಳಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ. ವಕೀಲ ಲಾಲ್ಜಿ ವರ್ಮಾ ಮತ್ತಾತನ ಇಬ್ಬರು ಸಹಚರರು ಪರಾರಿಯಾಗಿದ್ದಾರೆಂದು ಹೇಳಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.