ಮನೋರಂಜನೆ

ಆಗಸ್ಟ್‌ 7ರಿಂದ ಭಾರೀ ಮಳೆ: ಆರ್‌ ಚಂದ್ರು ಹವಾಮಾನ ವರದಿ

Pinterest LinkedIn Tumblr

maleಈಗ ಮಳೆ ಸುರಿಯೋ ಕಾಲ… ಹೌದು, ಅಂತೂ ಇಂತೂ ರಾಜ್ಯದೆಲ್ಲೆಡೆ ಜೋರು ಮಳೆಯ ಸಿಂಚನವಾಗುವ ದಿನಗಳು ಹತ್ತಿರವಾಗುತ್ತಿವೆ. ಇಲ್ಲಿ ಮಳೆ ಅಂದಾಕ್ಷಣ, ಆಗಸದಿಂದ ಬೀಳ್ಳೋ ಮಳೆ ಅಂದುಕೊಳ್ಳುವಂತಿಲ್ಲ. ಇದು ಗಾಂಧಿನಗರದ “ಮಳೆ’ ಸುದ್ದಿ. ಆರ್‌. ಚಂದ್ರು ನಿರ್ಮಾಣದ ಎರಡನೇ ಸಿನಿಮಾ ಇದು. ಅಮೂಲ್ಯ ಮತ್ತು ಪ್ರೇಮ್‌ ಜೋಡಿಯ “ಮಳೆ’ ಆಗಸ್ಟ್‌ 7 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಎಲ್ಲೆಡೆ ನಿರೀಕ್ಷೆ ಹೆಚ್ಚಿಸಿರುವ “ಮಳೆ’ ನೋಡಲು ಅಮೂಲ್ಯ ಮತ್ತು ಪ್ರೇಮ್‌ ಅಭಿಮಾನಿಗಳು ಕಾತರದಲ್ಲಿದ್ದಾರೆ. ಅಂತೆಯೇ ದೇಸಿ ಸೊಗಡು ಇಟ್ಟುಕೊಂಡು ಭಾವನೆಗಳಿಗೆ ಹೆಚ್ಚು ಆದ್ಯತೆ ಕೊಡುವ ಆರ್‌.ಚಂದ್ರು, ಕಥೆ ಮತ್ತು ಚಿತ್ರಕಥೆ ಬರೆಯುವ ಮೂಲಕ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸಾಕಷ್ಟು ದಿನಗಳಿಂದಲೂ ಬಿಡುಗಡೆಯ ದಿನವನ್ನು ಎದುರು ನೋಡುತ್ತಿದ್ದ “ಮಳೆ’ ಆಗಸ್ಟ್‌ 7 ರಂದು ಪ್ರೇಕ್ಷಕರ ಮನ ತಣಿಸಲು ರೆಡಿಯಾಗಿದೆ. ನಿರ್ಮಾಪಕ ಚಂದ್ರು “ಮಳೆ’ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದಾರೆ. ಅಷ್ಟೇ ನಂಬಿಕೆಯನ್ನೂ ಇಟ್ಟುಕೊಂಡಿದ್ದಾರೆ. ಮಳೆ ಅನ್ನೋದು ಸಮೃದ್ಧಿಯ ಸಂಕೇತ. ಅದು ನಮ್ಮ ತಂಡಕ್ಕೆ ಹೊಸ ಜೋಶ್‌ ತಂದುಕೊಡಲಿದೆ ಎಂಬ ವಿಶ್ವಾಸದ ಮಾತುಗಳನ್ನಾಡುತ್ತಲೇ, “ಮಳೆ’ ಕುರಿತು ಒಂದಷ್ಟು ಹೇಳಿಕೊಂಡಿದ್ದಾರೆ.

ತಂಪು ಮಳೆಯ ನಿರೀಕ್ಷೆಯಲ್ಲಿ….
“ನಿಜವಾಗಿಯೂ “ಮಳೆ’ ಇಷ್ಟೊಂದು ನಿರೀಕ್ಷೆ ಹೆಚ್ಚಿಸಿದೆ ಅಂದುಕೊಂಡಿರಲಿಲ್ಲ. ಬಹಳಷ್ಟು ಮಂದಿ, “ಮಳೆ’ ಯಾವಾಗ ಬರುತ್ತೆ ಅನ್ನೋ ಪ್ರಶ್ನೆ ಕೇಳುತ್ತಿದ್ದಾರೆ. “ಮಳೆ’ಯೊಳಗೆ ಪ್ರೀತಿ ಹೆಚ್ಚಾಗಿದೆಯಾ ಅಥವಾ ಸೆಂಟಿಮೆಂಟ್‌ಗೆ ಜಾಸ್ತಿ ಜಾಗ ಕೊಟ್ಟಿ ದ್ದೀರಾ ಅನ್ನುತ್ತಿದ್ದಾರೆ. ಇಲ್ಲೂ “ತಾಜ್‌ಮಹಲ್‌’, “ಚಾರ್‌ಮಿನಾರ್‌’ ಚಿತ್ರಗಳ ಛಾಯೆ ಇದೆಯೇ ಎನ್ನುತ್ತಿದ್ದಾರೆ. ಚಿತ್ರವನ್ನು ಆಗಸ್ಟ್‌ 7 ರಂದು ತೆರೆಗೆ ತರುತ್ತಿದ್ದೇನೆ. ಈಗಾಗಲೇ 175 ಚಿತ್ರಮಂದಿರಗಳಲ್ಲಿ ಮಳೆ ಬಿಡುಗಡೆಯಾಗಲು ಸಿದ್ಧತೆ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಮಂದಿರಗಳು ಹೆಚ್ಚುವ ಮೂಲಕ ಅದು 225 ಚಿತ್ರಮಂದಿರಗಳ ಗುರಿ ಮುಟ್ಟುವ ವಿಶ್ವಾಸ ನನಗಿದೆ’ ಎನ್ನುತ್ತಾರೆ ಚಂದ್ರು.

“ಬಹಳಷ್ಟು ಚಿತ್ರಮಂದಿರಗಳ ಮಾಲೀಕರು, ನನ್ನ ಹಿಂದಿನ “ತಾಜ್‌ಮಹಲ್‌’ ಮತ್ತು “ಚಾರ್‌ಮಿನಾರ್‌’ ಚಿತ್ರಗಳ ಯಶಸ್ಸನ್ನು ಗಮನಿಸಿ, “ಮಳೆ’ಯನ್ನು ನಮ್ಮ ಚಿತ್ರಮಂದಿರಕ್ಕೂ ಕೊಡಿ ಅನ್ನುತ್ತಿದ್ದಾರೆ. ಒಬ್ಬ ನಿರ್ಮಾಪಕನಿಗೆ ಇದಕ್ಕಿಂತ ಖುಷಿ ಬೇರೊಂದಿಲ್ಲ. ಇನ್ನೊಂದು ವಿಷಯವೆಂದರೆ, “ಮಳೆ’ ಜತೆಗೆ ಬೇರೆ ಯಾವ ಸಿನಿಮಾ ಕೂಡ ಬರೋಕೆ ಹಿಂದೆ ಮುಂದೆ ನೋಡುತ್ತಿವೆ. ಅದು ಭಯವಲ್ಲ, “ಮಳೆ’ ಮೇಲಿರುವ ಪ್ರೀತಿ. ಒಂದು ಕನ್ನಡ ಸಿನಿಮಾಗೆ ಮತ್ತೂಂದು ಕನ್ನಡ ಚಿತ್ರ ಸಹಕರಿಸುವ ರೀತಿಯೆಂದರೆ ಇದೇ ಇರಬೇಕು. ಅವರಿಗೆಲ್ಲಾ ನಾನು ಕೃತಜ್ಞತೆ ಸಲ್ಲಿಸುತ್ತೇನೆ’ ಎನ್ನುತ್ತಾರೆ ಚಂದ್ರು.

ರಿಲೀಸ್‌ ಮುನ್ನವೇ ಗೆಲುವಿನ ನಗು
“ನನ್ನ ಬ್ಯಾನರ್‌ನ ಎರಡನೇ ಸಿನಿಮಾ ಇದು. ಹಾಗಾಗಿ ನನಗೆ ಒಂದಷ್ಟು ಭಯ ಮತ್ತು ಖುಷಿ ಎರಡೂ ಇದೆ. ಭಯ ಯಾಕೆಂದರೆ, ಚಿತ್ರ ತಡವಾಯ್ತು. ಜನರು ಹೇಗೆ ಸ್ವೀಕರಿಸುತ್ತಾರೋ ಎಂದು. ಖುಷಿ ಯಾಕೆಂದರೆ, ನನ್ನ ಹಿಂದಿನ ಎರಡು ಸಿನಿಮಾಗಳಿಗಿಂತಲೂ ಕೊಂಚ ವಿಭಿನ್ನ ಪ್ರಯತ್ನ ಈ “ಮಳೆ’ ಮೂಲಕ ಮಾಡಲಾಗಿದೆ ಅನ್ನೋದು. ಈಗಾಗಲೇ ಹಾಡುಗಳು ಹಿಟ್‌ ಆಗಿರುವುದೇ ಆ ಖುಷಿಗೆ ಕಾರಣ. ಈಗಾಗಲೇ “ನನ್ನದೆ ಪುಸ್ತಕದಲ್ಲಿ …’ ಮತ್ತು “ಕ್ಷಮಿಸಿ ಬಿಡು ಕ್ಷಮಿಸಿ ಗೆಳೆಯ …’ ಹಾಡುಗಳು ಸೂಪರ್‌ ಹಿಟ್‌ ಆಗಿವೆ. ಹುಡುಗರ ಬಾಯಲ್ಲಂತೂ ಅದೇ ಹಾಡು ಗುನುಗುತ್ತಿದೆ. ಇದು ನನ್ನ ಖುಷಿಗೆ ಇನ್ನೊಂದು ಕಾರಣ. ಇನ್ನು, ಎಲ್ಲದ್ದಕ್ಕಿಂತಲೂ ಒಬ್ಬ ನಿರ್ದೇಶಕನಾದವನು ಮತ್ತೂಬ್ಬನಿಗೆ ಅವಕಾಶ ಕೊಟ್ಟು ನಿರ್ದೇಶಕನ ಪಟ್ಟ ಕೊಡಿಸುವುದು ಸುಲಭವಲ್ಲ. ಕಥೆ, ಚಿತ್ರಕಥೆ ಬರೆದು, ಗೆಳೆಯನಿಗಾಗಿ ನಿರ್ಮಾಣಕ್ಕಿಳಿದು, ಅವನನ್ನೇ ನಿರ್ದೇಶಕನನ್ನಾಗಿಸಿದ್ದಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನನ್ನ ನಂಬಿಕೆಯನ್ನು ನಿರ್ದೇಶಕ ಶಿವತೇಜಸ್‌ ಉಳಿಸಿಕೊಂಡಿದ್ದಾರೆ. ಚಿತ್ರ ಬಿಡುಗಡೆ ಮುನ್ನವೇ, ಗೆಲುವಿನ ದಡ ಸೇರಿಸಿದೆ’ ಎಂದು ಚಿತ್ರ ತಂಡದ ಬಗ್ಗೆ ಮೆಚ್ಚುಗೆ ಪಡುತ್ತಾರೆ ಚಂದ್ರು.

ಯಶಸ್ವಿ ಜೋಡಿ ನಿರೀಕ್ಷೆ ಸಿನಿಮಾ
“ನನಗೆ ಮತ್ತೂಂದು ಖುಷಿಯ ವಿಷಯವೆಂದರೆ, ಈ ಚಿತ್ರದಲ್ಲಿ ಅಮೂಲ್ಯ ಮತ್ತು ಪ್ರೇಮ್‌ ಜೋಡಿ ತುಂಬಾ ಕ್ಯೂಟ್‌ ಆಗಿ ಕಾಣಿಸಿಕೊಂಡಿರೋದು. ಅಮೂಲ್ಯ ಮತ್ತು ಪ್ರೇಮ್‌ ಇವರಿಬ್ಬರಿಗೂ ಫಿಲ್ಮ್ಫೇರ್‌ ಅವಾರ್ಡ್‌ ಬಂದಿದೆ. ಪ್ರಶಸ್ತಿ ವಿಜೇತರಿಬ್ಬರೂ “ಮಳೆ’ಯಲ್ಲಿದ್ದಾರೆ. ಯಶಸ್ವಿ ಜೋಡಿ ಸಿನಿಮಾ ಆಗಿರುವುದರಿಂದ ಸಹಜವಾಗಿಯೇ ಚಿತ್ರದ ಮೇಲೆ ನಿರೀಕ್ಷೆ ಸಹಜ. ಅದು ನಮಗೂ ಇದೆ. ಈಗಾಗಲೇ “ಮಳೆ’ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿರುವುದನ್ನು ಗಮನಿಸಿದರೆ, ನಾನು ಧೈರ್ಯ ಮಾಡಿ ನಿರ್ಮಾಣ ಮಾಡಿದ್ದಕ್ಕೂ ಸಾರ್ಥಕ ಎನಿಸುತ್ತಿದೆ’ ಎಂದು ವಿವರ ಕೊಡುತ್ತಾರೆ ನಿರ್ಮಾಪಕ ಚಂದ್ರು.

ವಿತರಣೆ ಸಂಸ್ಥೆಗೊಂದು ಥ್ಯಾಂಕ್ಸ್‌
“ಚಿತ್ರಕ್ಕೆ ಒಳ್ಳೆಯ ವಿತರಕರು ಸಿಕ್ಕಿರೋದು ನನ್ನ ಅದೃಷ್ಟ. ಆರ್‌.ಎಸ್‌ ಸಿನಿಮಾಸ್‌ ಚಿತ್ರದ ವಿತರಣೆ ಮಾಡುತ್ತಿದೆ. ಕನಕಪುರ ಶ್ರೀನಿವಾಸ್‌ ಅವರು ಒಳ್ಳೆಯ ಚಿತ್ರಗಳನ್ನು ಯಾವತ್ತೂ ಕೈ ಬಿಡೋದಿಲ್ಲ. ಈಗಾಗಲೇ ಅವರ ವಿತರಣೆ ಸಂಸ್ಥೆ ಮೂಲಕ “ಬಾಹುಬಲಿ’ ಹಾಗು “ಭಜರಂಗಿ ಭಾಯಿಜಾನ್‌’ ಚಿತ್ರವನ್ನು ರಿಲೀಸ್‌ ಮಾಡಲಾಗಿದೆ. ಎರಡು ಚಿತ್ರಗಳೂ ಹಿಟ್‌ ಆಗಿವೆ. ಅವರ ಸಂಸ್ಥೆಯ ಮೂರನೇ ಚಿತ್ರ ನಮ್ಮ “ಮಳೆ’. ಹ್ಯಾಟ್ರಿಕ್‌ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಒಳ್ಳೆಯ ಚಿತ್ರಮಂದಿರಗಳನ್ನು ಸೆಟಪ್‌ ಮಾಡಿರುವ ಕನಕಪುರ ಶ್ರೀನಿವಾಸ್‌ಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈಗಾಗಲೇ ಉತ್ತರ ಕರ್ನಾಟಕದಲ್ಲಂತೂ “ಮಳೆ’ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ’ ಎನ್ನುತ್ತಾರೆ ಚಂದ್ರು.

2015 ನಂಬಿಕೆಯ ವರ್ಷ
ಚಿತ್ರದಲ್ಲಿ ದೊಡ್ಡ ತಾರಾಬಳಗವೇ ತುಂಬಿದೆ. ಸಾಧು ಕೋಕಿಲ, ಬುಲೆಟ್‌ ಪ್ರಕಾಶ್‌, ಶಿವರಾಂ, ಜೈಜಗದೀಶ್‌, ಪದ್ಮಜಾರಾವ್‌ ಸೇರಿದಂತೆ ಇತರೆ ಕಲಾವಿದರು ನಟಿಸಿದ್ದಾರೆ. ವಿಶೇಷವೆಂದರೆ, ಚಿತ್ರದಲ್ಲಿ ಐವರು ಹುಡುಗ, ಹುಡುಗಿಯರಿದ್ದಾರೆ. 2015 ನನಗೆ ತುಂಬಾ ಲಕ್ಕಿ ವರ್ಷ. ಯಾಕೆಂದರೆ, ನನ್ನ ತೆಲುಗು ನಿರ್ದೇಶನದ ಚಿತ್ರ ಬಿಡುಗಡೆಗೊಂದಿದೆ. ಇನ್ನು, ಈ ವರ್ಷವೇ ನನ್ನ ಕನಸಿನ “ಮಳೆ’ ಕೂಡ ಸುರಿಯುತ್ತಿದೆ. ಇದೇ ವರ್ಷದಲ್ಲಿ ಹೊಸ ಹುಡುಗನ ಸಿನಿಮಾ ಕೈಗೆತ್ತಿಕೊಂಡಿದ್ದೇನೆ. ಒಟ್ಟಲ್ಲಿ, ನಾನು 2015 ರ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ ಎನ್ನುತ್ತಾರೆ.
-ಉದಯವಾಣಿ

Write A Comment