ರಾಷ್ಟ್ರೀಯ

ಕಲಾಂ ಸಸ್ಯಾಹಾರಿಯಾಗಿದ್ದರ ಹಿಂದಿನ ಕಥೆ: ಕಲಾಂ ಅವರ ರೂಮ್‌ಮೇಟ್ಸ್ ಹೇಳಿದ್ದು…

Pinterest LinkedIn Tumblr

kalam_alexanderತಿರುವನಂತಪುರಂ: ಅಮೆರಿಕದ ಬಾಲ್ಟ್‌ಮೋರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಕುಳಿತು ಡಾ. ಸಿ.ಎ ಅಲೆಕ್ಸಾಂಡರ್ ಚುಂಡಮಣ್ಣಿಲ್, ತಿರುಚಿನಾಪಳ್ಳಿ ಸೇಂಟ್ ಜೋಸೆಫ್ ಕಾಲೇಜ್ ಹಾಸ್ಟೆಲ್‌ನಲ್ಲಿ ಸಿಕ್ಕಿದ್ದ ಅಬ್ದುಲ್ ಕಲಾಂ ಎಂಬ ಯುವಕನ ಬಗ್ಗೆ ನೆನಪಿಸಿಕೊಂಡಿದ್ದಾರೆ. ಆ ದಿನಗಳ ಸವಿ ಸವಿ ನೆನಪುಗಳು ಅವು. ರಾಮೇಶ್ವರಂನ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದ ಕಲಾಂ ಅವರನ್ನು ಸಸ್ಯಾಹಾರಿಯನ್ನಾಗಿ ಮಾಡಿದ ದಿನಗಳ ಕಥೆ ಅದರಲ್ಲಿತ್ತು.

ಕುಂಬನಾಡ್ ನಿವಾಸಿಯಾದ ಅಲೆಕ್ಸಾಂಡರ್ ಮತ್ತು ಕೊಯಂಬತ್ತೂರ್ ನಿವಾಸಿಯಾದ ಸಂಪತ್ ಮತ್ತು ಕಲಾಂ ಒಂದೇ ಹಾಸ್ಟೆಲ್‌ರೂಂನಲ್ಲಿ ಕಳೆದಿದ್ದರು. ಕಾಲೇಜ್ ನಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರದ ಎರಡು ಮೆಸ್ ಇರುತ್ತಿತ್ತು. ಹಾಸ್ಟೆಲ್ ಗೆ ಸೇರ್ಪಡೆಯಾದೊಡನೆ ನಾನು ಸಸ್ಯಾಹಾರಿ ಎಂದು ಕಲಾಂ ಘೋಷಿಸಿ ಬಿಟ್ಟರು. ಅದನ್ನು ಕೇಳಿ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆಲ್ಲಾ ಅಚ್ಚರಿ! ವಾರಾಂತ್ಯದಲ್ಲಿ ಗೆಳೆಯರೆಲ್ಲರು ಸೇರಿ ಸಿನಿಮಾ ನೋಡಲು, ಹೋಟೆಲ್ ನಲ್ಲಿ ಊಟ ಮಾಡಲು ಹೋಗುವಾಗ ಕಲಾಂ ಒಬ್ಬರೇ ಹಾಸ್ಟೆಲ್ ರೂಂನಲ್ಲಿ ಕುಳಿತಿರುತ್ತಿದ್ದರು. ಗೆಳೆಯರು ಸುತ್ತಾಟ ನಡೆಸಿ ಮಜಾ ಮಾಡುವಾಗ ಕಲಾಂ ಕೋಣೆಯಲ್ಲಿ ಒಬ್ಬರೇ ಕೂತು ಕನಸುಗಳನ್ನು ಹೆಣೆಯುತ್ತಿದ್ದರು.

ಪೈಲೆಟ್ ಆಗಬೇಕೆಂಬುದು ಕಲಾಂ ಅವರ ಕನಸಾಗಿತ್ತು, ಅದನ್ನು ಗೆಳೆಯರಲ್ಲಿಯೂ ಹೇಳಿದ್ದರು. ಆದರೆ ಕಲಾಂ ಜಗತ್ತನ್ನೇ ನಿಬ್ಬೆರಗಾಗಿಸಿದ ವಿಜ್ಞಾನಿಯಾದರು. ಅವರು ರಾಷ್ಟ್ರಪತಿಯಾಗುತ್ತಾರೆ ಎಂದು ಯಾರೊಬ್ಬರೂ ಊಹಿಸಿರಲಿಲ್ಲ.  ಕಲಾಂ ಪೈಲೆಟ್ ಆಗಲಿಲ್ಲ ಅದರ ಬದಲು ಭಾರತದ ಬಾಹ್ಯಾಕಾಶ ಸಂಶೋಧನೆಗಳಿಗೆ ರೆಕ್ಕೆಗಳನ್ನು ನೀಡಿ ವೈಜ್ಞಾನಿಕ, ತಂತ್ರಜ್ಞಾನದ ಸಾಧನೆಗಳಲ್ಲಿ ಭಾರತದ ಹೆಸರು ಕಂಗೊಳಿಸುವಂತೆ ಮಾಡಿದರು.

ಅವರು ರಾಷ್ಟ್ರಪತಿಯಾದಾಗ ಡಾ. ಅಲೆಕ್ಸಾಂಡರ್ ಮತ್ತು ಸಂಪತ್ ಅವರನ್ನು ಭೇಟಿಯಾಗಿದ್ದರು. ಆ ಭೇಟಿಯಲ್ಲಿ ಕಲಾಂ ಒಂದು ರಹಸ್ಯವನ್ನು ತೆರೆದಿಟ್ಟರು. ಹಾಸ್ಟೆಲ್ ದಿನಗಳಲ್ಲಿ ಸಸ್ಯಾಹಾರ ಮೆಸ್‌ನ ಶುಲ್ಕ ಕಡಿಮೆಯಾಗಿತ್ತು. ಆದ್ದರಿಂದಲೇ ನಾನು ಸಸ್ಯಾಹಾರವನ್ನು ಆಯ್ಕೆ ಮಾಡಿಕೊಂಡೆ. ಕೈಯಲ್ಲಿ ದುಡ್ಡಿಲ್ಲದೇ ಇದ್ದ ಕಾರಣ ಗೆಳೆಯರ ಜತೆ ಸುತ್ತಾಡಲು ಹೋಗುತ್ತಿರಲಿಲ್ಲ. ಆಮೇಲೆ ಸಸ್ಯಾಹಾರಕ್ಕೆ ನಾನು ಒಗ್ಗಿಬಿಟ್ಟೆ. ಅಂದು ನಾನು ತೆಗೆದುಕೊಂಡ ತೀರ್ಮಾನ ಸರಿಯಾಗಿತ್ತು ಎಂದು ಕಲಾಂ ಹೇಳಿದರು.

1950ರ ದಶಕದಲ್ಲಿನ ಹಾಸ್ಟೆಲ್ ಜೀವನವಾಗಿತ್ತು ಅದು. ಆಮೇಲೆ ನಾನು ಅಮೆರಿಕಕ್ಕೆ ಮರಳಿದಾಗ ನಮ್ಮ ಗೆಳೆತನ ದೂರವಾಯಿತು. ಹಲವು ವರ್ಷಗಳ ನಂತರ ಕಲಾಂ ವಿಂಗ್ಸ್ ಆಫ್ ಫಯರ್ ಎಂಬ ಆತ್ಮಕತೆಯಲ್ಲಿ ನನ್ನ ಬಗ್ಗೆ ಮತ್ತು ಸಂಪತ್ ಬಗ್ಗೆ ಬರೆದಾಗ ನಾವು ಮತ್ತೆ ಒಂದಾದೆವು. ರಾಷ್ಟ್ರಪತಿ ಭವನದಲ್ಲಿ ನಾವು ಭೇಟಿಯಾದೆವು.

ಅವತ್ತು ಅಲ್ಲಿಂದ ಹೊರಡುವಾಗ ಕಲಾಂ ಹೇಳಿದ್ದು, ನಾನು ರಾಷ್ಟ್ರಪತಿಯಾಗಿದ್ದೇನೆ. ಇಲ್ಲದೇ ಇರುತ್ತಿದ್ದರೆ ನಮಗೆ ಈ ನಗರದಲ್ಲೆಲ್ಲಾ ಸುತ್ತಾಡಬಹುದಾಗಿತ್ತು. ರಾಷ್ಟ್ರಪತಿ ಹುದ್ದೆಯಿಂದ ಹೊರಬಂದ ನಂತರ ನಾವೆಲ್ಲರೂ ಭೇಟಿಯಾಗೋಣ ಎಂದು ಅವರು ಹೇಳಿದ್ದರು. ಆದರೆ ಆ ಭೇಟಿ ಸಾಧ್ಯವಾಗಲೇ ಇಲ್ಲ. ಕಲಾಂ ಅವರ ನಿಧನ ವಾರ್ತೆ ಹೇಳಿ ಡಾ. ಅಲೆಕ್ಸಾಂಡರ್ ಕೊಯಂಬತ್ತೂರಿನಲ್ಲಿರುವ ಸಂಪತ್‌ಗೆ ಕರೆ ಮಾಡಿದ್ದಾರೆ. ಗೆಳೆಯನ ಜತೆಗಿನ ಭೇಟಿ ಈ ರೀತಿಯಾಗಿದೆ ಎಂಬ ಹೇಳುವಾಗ ಅಲೆಕ್ಸಾಂಡರ್ ಕಣ್ಣಲ್ಲಿ ಕಂಬನಿ ಜಿನುಗಿತ್ತು.

ಕಲಾಂ ಬಗ್ಗೆ ಸಂಪತ್ ಹೇಳಿದ ಮಾತುಗಳು

1950-54 ರ ವರ್ಷ.  ನಾನು ಕಲಾಂ ಅವರನ್ನು ಮೊದಲ ಬಾರಿ ನೋಡಿದ್ದು ತುಂಬು ತೋಳಿನ ಬಿಳಿ ಶರ್ಟ್ ಮತ್ತು ಗಾಢಬಣ್ಣದ ಚೆಡ್ಡಿ ಪ್ಯಾಂಟ್ಸ್ ತೊಟ್ಟು. ಕಲಾಂ ಬಿಎಸ್ಸಿ ಫಿಸಿಕ್ಸ್ ಆಯ್ಕೆ ಮಾಡಿಕೊಂಡಿದ್ದರು. ನಾನು ಗಣಿತ ಪದವಿ ಆಯ್ಕೆ ಮಾಡಿದ್ದು, ಅಲೆಕ್ಸಾಂಡರ್ ಬಯಾಲಜಿ ಆಯ್ಕೆ ಮಾಡಿಕೊಂಡಿದ್ದರು. ಮೂರು ಧರ್ಮಗಳಿಗೆ ಸೇರಿದವರು ಒಂದೇ ಹಾಸ್ಟೆಲ್ ರೂಂನಲ್ಲಿದ್ದೆವು. ನಮ್ಮ ಆಚಾರ ವಿಚಾರಗಳು, ನಂಬಿಕೆಗಳು ಬೇರೆಯಾಗಿದ್ದರೂ ನಾವು ಮೂರು ಜನ ಒಂದೇ ಆಗಿದ್ದೆವು.

ಒಂದೇ ರೂಮ್ ನಲ್ಲಿದ್ದರೂ ನಾವು ತಮಿಳು ಮತ್ತು ಇಂಗ್ಲಿಷ್ ಕ್ಲಾಸಿನಲ್ಲಿ ಜತೆಯಾಗುತ್ತಿದ್ದೆವು. ಕಲಾಂ ನನಗಿಂತ ಮೂರು ವರ್ಷದೊಡ್ಡವರಾಗಿದ್ದರೂ ನಾನು ಅವರ ಜತೆ ಜಗಳವಾಡುತ್ತಿದ್ದೆ. ಆದರೆ ಅವರು ಎಂದಿಗೂ ಕೋಪಿಸಿಕೊಳ್ಳುತ್ತಿರಲಿಲ್ಲ. ಬಡ ಕುಟುಂಬದಿಂದ ಬಂದವರಾಗಿದ್ದರೂ ಅವರು ಬೇಸಿಗೆ ರಜಾಕಾಲ ಕಳೆದು ಕ್ಲಾಸಿಗೆ ಬರುವಾಗ ನಮಗೆ ಚಿಪ್ಪುಗಳಿಂದ ಮಾಡಿದ ಗಿಫ್ಟ್‌ಗಳನ್ನು ತರುತ್ತಿದ್ದರು.

ಹಾಸ್ಟೆಲ್‌ನಲ್ಲಿ ನಾವು ಅವರನ್ನು ಕಲಾಂ ಅಯ್ಯರ್ ಎಂದು ಕರೆಯುತ್ತಿದ್ದೆವು. ಮುಸ್ಲಿಂ ಕುಟುಂಬದಿಂದ ಬಂದವನಾಗಿದ್ದರೂ ಸಸ್ಯಾಹಾರವನ್ನೇ ಸೇವಿಸುತ್ತಿದ್ದುದ್ದಕ್ಕೆ ನಾವು ಈ ರೀತಿ ಅಡ್ಡ ಹೆಸರಿಟ್ಟು ಕರೆಯುತ್ತಿದ್ದೆವು. ಅವರು ಕಾಲೇಜಿನ ಸಸ್ಯಾಹಾರ ಮೆಸ್‌ನ ಸೆಕ್ರೆಟರಿ ಕೂಡಾ ಆಗಿದ್ದರು. ಅವರಿಗೆ ಪೂರನ್ ಪೋಳಿ  ಬಲು ಇಷ್ಟವಾಗಿತ್ತು.

ಬೆಳಗ್ಗೆ 5 ಗಂಟೆಗೆ ಏಳುತ್ತಿದ್ದ ಅವರು ರಾತ್ರಿ 11 ಗಂಟೆಯ ವರೆಗೆ ಓದುತ್ತಿರುತ್ತಿದ್ದರು. ಸೇಂಟ್  ಜೋಸೆಫ್ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದಕ್ಕೆ 15,000 ಸಂಗ್ರಹಿಸಿದ್ದೆವು. 1964ರಲ್ಲಿ ರಾಮೇಶ್ವರದ ದನುಷ್ಕೋಡಿಯಲ್ಲಿ ಚಂಡ ಮಾರುತ ಬಂದು ನಾಶ ಸಂಭವಿಸಿದಾಗ ಆ ಹಣವನ್ನು ನಿರ್ಗತಿಕರಿಗೆ ನೀಡುವಂತೆ ಕಲಾಂ ಹೇಳಿದ್ದರು.

ಕಲಾಂ ಅವರಿಗೆ ಮಹಿಳೆಯರ ಮೇಲೆ ತುಂಬಾ ಅಭಿಮಾನವಿತ್ತು. ಅವರಿಗೆ ತಮಿಳು ಸಾಹಿತ್ಯ ಇಷ್ಟ ವಿಷಯವಾಗಿತ್ತು. ಆಗಾಗ್ಗೆ ಅವರು ತಿರುಕ್ಕುರಳ್‌ನ ನುಡಿಗಳನ್ನು ಉಲ್ಲೇಖಿಸುವುದುಂಟು.

ಕಲಾಂ ಉನ್ನತ ಪದವಿಗೇರಿದ್ದಾಗಲೂ ಅವರು 2005, 2010ರಲ್ಲಿ ನಮ್ಮ ಮನೆಗೆ ಬಂದಿದ್ದರು. ನನ್ನ ಪತ್ನಿ ಸರೋಜಾ ನಿಧನರಾದಾಗ ಅವರು ನಮ್ಮ ಮನೆಗೆ ಭೇಟಿ ನೀಡಿದ್ದರು. ಅವಳ ಬಗ್ಗೆ ಏನಾದರೂ ಬರೆಯಿರಿ ಎಂದಾಗ ಕಲಾಂ ಪುನೀದ ಪಿರವಿ (ಪವಿತ್ರ ಹುಟ್ಟು) ಎಂದು ಹೇಳಿದ್ದರು.

ಸೋಮವಾರ ಸಂಜೆ ನನಗೆ ಕರೆ ಬಂತು. ನನ್ನ ಗೆಳೆಯ ಇನ್ನಿಲ್ಲ ಎಂಬ ಸುದ್ದಿ ಕೇಳಿ ನಾನು ದಂಗಾದೆ. ಈಗಲಾದರೂ ವಿಶ್ರಾಂತಿ ತಗೋ, ಶಾಲೆ , ಕಾಲೇಜುಗಳನ್ನು ಸುತ್ತುವುದನ್ನು ಕಡಿಮೆ ಮಾಡು ಎಂದು ನಾನವನಿಗೆ ಹೇಳಿದ್ದೆ. ಆದರೆ ಮಕ್ಕಳ ಮೇಲಿನ ಅಪಾರ ಪ್ರೀತಿಯಿಂದ ಅವರು ನಾನು ಹೇಳಿದ ಮಾತನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ  ಸಂಪತ್ ಅವರು ಗದ್ಗದಿತರಾಗಿ ನುಡಿದರು.

Write A Comment