ಬೆಂಗಳೂರು: ಔದ್ಯೋಗಿಕವಾಗಿ ಕಿಚ್ಚ ಸುದೀಪ್‌ಗೆ ವಿಜಯಲಕ್ಷ್ಮಿ ಕೈ ಹಿಡಿದಿದ್ದಾಳೆ. ಅವರ ‘ರನ್ನ’ ಇವತ್ತಿಗೂ ಓಡುತ್ತಿದೆ. ಅಲ್ಲದೇ ಶಿವಮೊಗ್ಗ ಐಪಿಎಲ್ ಟೀಂ ಅನ್ನು ಕೊಂಡು, ಕ್ರಿಕೆಟ್ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಆದರೆ, ಅವರ ಆರೋಗ್ಯ ಪದೇ ಪದೇ ಕೈ ಕೊಡುತ್ತಿದ್ದು, ಮಂಗಳವಾರವೂ ಆಸ್ಪತ್ರೆಗೆ ದಾಖಲಾಗಿದ್ದರು.
ಈಗ್ಗೆ ಕೆಲವು ದಿನಗಳ ಹಿಂದೆ ಅತೀವ ಆ್ಯಸಿಡಿಟಿಯಿಂದ ಸುದೀಪ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದರು. ಅಲ್ಲದೇ ಸುಮಾರು 20 ವರ್ಷಗಳಿಂದಲೂ ಬೆನ್ನು ನೋವು ಮತ್ತು ಮೈಗ್ರೇನ್ ಸಮಸ್ಯೆಯಿಂದ ಸುದೀಪ್ ಬಳಲುತ್ತಿದ್ದಾರೆ. ಈ ಎಲ್ಲ ಅನಾರೋಗ್ಯ ಕಾರಣಗಳಿಂದ ಸುದೀಪ್ ಮಂಗಳವಾರ ಬೆಳಗ್ಗೆಯೂ ಮತ್ತೆ ಆಸ್ಪತ್ರೆಗೆ ದಾಖಲಾಗಿ, ಮಧ್ಯಾಹ್ನದ ಹೊತ್ತಿಗೆ ಬಿಡುಗಡೆಯಾಗಿದ್ದಾರೆ. ಕಳೆದ ಮೂರು ನಾಲ್ಕು ವಾರಗಳಿಂದಲೂ ಸುದೀಪ್ ತುಸು ವಿಶ್ರಾಂತಿಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
