ಮನೋರಂಜನೆ

ಸಲ್ಮಾನ್‌ ಅಂಕಲ್‌ ಹಾಗೆ ನಾನೂ ಸೂಪರ್‌ ಸ್ಟಾರ್‌ ಆಗುವೆ: “ಬಜರಂಗಿ ಭಾಯಿಜಾನ್‌ ಬಾಲನಟಿ, ಏಳು ವರ್ಷದ ಹರ್ಷಾಲಿ

Pinterest LinkedIn Tumblr

Harshali-Malhotra-900ಮುಂಬಯಿ: “ಸಲ್ಮಾನ್‌ ಅಂಕಲ್‌ ಹಾಗೆ ನಾನು ಕೂಡ ಮುಂದೊಂದು ಸೂಪರ್‌ ಸ್ಟಾರ್‌ ಅಗುವೆ’ ಎನ್ನುತ್ತಾಳೆ “ಬಜರಂಗಿ ಭಾಯಿಜಾನ್‌’ ಚಿತ್ರದಲ್ಲಿ ಸಲ್ಮಾನ್‌ ಸಹ ಕಲಾವಿದೆಯಾಗಿ ಎಲ್ಲರ ಮನಸೂರೆಗೈದಿರುವ ಬಾಲ ನಟಿ, ಏಳು ವರ್ಷ ಪ್ರಾಯದ ಹರ್ಷಾಲಿ ಮಲ್ಹೋತ್ರಾ.

ಬಿಡುಗಡೆಯಾದ ಎರಡೇ ದಿನಗಳ ಒಳಗೆ ನೂರು ಕೋಟಿ ರೂ.ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಬಾಚಿಕೊಂಡಿರುವ ಸೂಪರ್‌ ಹಿಟ್‌ “ಬಜರಂಗಿ ಭಾಯಿಜಾನ್‌’ ಚಿತ್ರದಲ್ಲಿ ಪಾಕಿಸ್ಥಾನದ ಮೂಕ ಬಾಲಕಿ ಮುನ್ನಿಯಾಗಿ ಅದ್ಭುತವಾಗಿ ನಟಿಸಿರುವ ಹರ್ಷಾಲಿಗೆ ನಟಿಸುವುದು ಮತ್ತು ಹಾಡುವುದೆಂದರೆ ಪಂಚಪ್ರಾಣವಂತೆ. “ನನಗೆ ಹಾಡುವುದು, ನಟಿಸುವುದೆಂದು ತುಂಬಾ ಇಷ್ಟ; ನಾನು ಕೂಡ ಸಲ್ಮಾನ್‌ ಅಂಕಲ್‌ ಹಾಗೆ ಸೂಪರ್‌ ಸ್ಟಾರ್‌ ಆಗಬೇಕೆಂದು ಆಸೆ ಪಡುತ್ತೇನೆ’ ಎಂದು ಹರ್ಷಾಲಿ ಹೇಳಿದ್ದಾಳೆ.

ಹರ್ಷಾಲಿಯ ತಾಯಿ ಕಾಜಲ್‌ ಒಂದು ಬಾರಿ “ಬಜರಂಗಿ ಭಾಯಿಜಾನ್‌’ ಚಿತ್ರದ ನಟ – ನಟಿಯರನ್ನು ಆಯ್ಕೆ ಮಾಡುವ ನಿರ್ದೇಶಕ ಮುಕೇಶ್‌ ಛಾಬ್ರಾ ಅವರನ್ನು ಕಂಡಿದ್ದರು. ಹರ್ಷಾಲಿಯ ಸ್ಕ್ರೀನ್‌ ಟೆಸ್ಟ್‌ ಪಡೆದುಕೊಂಡ ಅವರು ಒಂದು ಕಾಜಲ್‌ ಅವರಿಗೆ ಫೋನ್‌ ಮಾಡಿ “ನಿಮ್ಮ ಮಗಳು ಬಜರಂಗಿ ಭಾಯಿಜಾನ್‌ ಚಿತ್ರಕ್ಕೆ ಬಾಲ ಕಲಾವಿದೆಯಾಗಿ ಆಯ್ಕೆಯಾಗಿದ್ದಾಳೆ’ ಎಂದು ತಿಳಿಸಿದರು.

“ಈ ಚಿತ್ರಕ್ಕೆ ಸಲ್ಮಾನ್‌ ಖಾನ್‌ ನಾಯಕ ನಟರೆಂಬ ವಿಷಯವೇ ನನಗೆ ಗೊತ್ತಿರಲಿಲ್ಲ. ನಮ್ಮ ಮಗಳು ಹರ್ಷಾಲಿ, ಸಲ್ಮಾನ್‌ ಚಿತ್ರಕ್ಕೆ ಆಯ್ಕೆಯಾಗಿದ್ದಾಳೆ ಎಂದು ತಿಳಿದಾಗ ನಮಗೆ ನಂಬಲೇ ಆಗಲಿಲ್ಲ. ಹಾಗೆ ನಂಬುವುದಕ್ಕೂ ನಮಗೆ ಕಷ್ಟವಾಯಿತು’ ಎಂದು ಕಾಜಲ್‌ ಹೇಳಿದರು.

ಸಲ್ಮಾನ್‌ ಖಾನ್‌ “ಬಜರಂಗಿ’ ಚಿತ್ರದ ಸೆಟ್‌ಗಳಲ್ಲಿ ಹರ್ಷಾಲಿ ಜತೆಗೆ ಬಾರ್ಬಿ ಗೇಮ್‌ಗಳನ್ನು, ಟೇಬಲ್‌ ಟೆನಿಸ್‌ ಆಡುವುದು ಸಾಮಾನ್ಯವಾಗಿತ್ತು.

ಹರ್ಷಾಲಿ ಈ ಬಗ್ಗೆ ಹೀಗೆ ಹೇಳುತ್ತಾಳೆ: ಚಿತ್ರದ ಸೆಟ್‌ನಲ್ಲಿ ನಾನು ಸಲ್ಮಾನ್‌ ಅಂಕಲ್‌ ಜತೆಗೆ ಸೆಲ್‌ ಫೋನ್‌ನಲ್ಲಿ, ಬಾರ್ಬಿ ಗೇಮ್‌ಗಳನ್ನು ಆಡುತ್ತಿದ್ದೆ. ಕಬೀರ್‌ ಅಂಕಲ್‌ ತೊಡೆಯ ಮೇಲೆ ಕುಳಿತುಕೊಂಡು ಕೂಡ ಬಾರ್ಬಿ ಆಟಗಳನ್ನು ಆಡುತ್ತಿದ್ದೆ. ಕರೀನಾ ಆಂಟಿ ತನ್ನ ಶೂಟಿಂಗ್‌ನಲ್ಲಿ ತುಂಬಾ ಬ್ಯುಸಿಯಾಗಿರುತ್ತಿದ್ದರು. ಹಾಗಾಗಿ ಅವರೊಂದಿಗೆ ಆಟವಾಡಲು ಸಾಧ್ಯವಾಗುತ್ತಿರಲಿಲ್ಲ.

ಹರ್ಷಾಲಿಯ ತಾಯಿ ಕಾಜಲ್‌ಗೆ ಮಗಳು ಸಿನೇಮಾಗಳಲ್ಲಿ ನಟಿಸುವಷ್ಟೇ ಮುಖ್ಯವಾಗಿ ಶಾಲಾ ಶಿಕ್ಷಣವನ್ನು ಕೂಡ ಪಡೆಯಬೇಕು ಎಂಬ ಇರಾದೆ ಇದೆ. ಆಕೆ ಐದನೇ ಕ್ಲಾಸ್‌ ಮುಗಿಸಿದ ಬಳಿಕ ಮುಂದೆ ಹನ್ನೆರಡನೇ ತರಗತಿಯ ತನಕ – ಅಂದರೆ ಮುಂದಿನ ಆರೇಳು ವರ್ಷಗಳ ಕಾಲ – ಅವಳು ಶಿಕ್ಷಣಕ್ಕೇ ಮೀಸಲಿರಬೇಕೆಂದು ನಾವು ಬಯಸುತ್ತೇವೆ. ಅನಂತರ ಬೇಕಿದ್ದರೆ ಅವಳು ನಟನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಸಲ್ಮಾನ್‌ ಅಂಕಲ್‌ ಆಕ್ಷನ್‌ ದೃಶ್ಯಗಳನ್ನು ಮಾಡುತ್ತಿದ್ದಾಗ ಹರ್ಷಾಲಿಗೆ ಅಳುವೇ ಬರುತ್ತಿತ್ತಂತೆ. ಸಲ್ಮಾನ್‌ ಭಾವನಾತ್ಮಕ ದೃಶ್ಯಗಳಲ್ಲಿ ನಟಿಸುವಾಗ ಕೂಡ ಆಕೆಗೆ ಅಳು ಬರುತ್ತಿತ್ತಂತೆ. ಸಲ್ಮಾನ್‌ ಅಂಕಲ್‌ ಅಳುವಾಗ ನಾನು ಕೂಡ ಅಳುತ್ತಿದ್ದೆ ಎಂದು ಹರ್ಷಾಲಿ ಹೇಳುತ್ತಾಳೆ.
-ಉದಯವಾಣಿ

Write A Comment