ಮನೋರಂಜನೆ

ಕಬಡ್ಡಿ ಪ್ರತಿಭೆ ಸಮೀಕ್ಷಾ

Pinterest LinkedIn Tumblr

samikshaಅಪ್ಪಟ ದೇಶಿಯ ಕ್ರೀಡೆಯಾದ ಕಬಡ್ಡಿಗೆ ಈಗ ಸುವರ್ಣ ಕಾಲ. ಟಿ.ವಿಯ ಮುಂದೆ ಕುಳಿತು ಕಬಡ್ಡಿಯ ರೋಮಾಂಚನ ಕ್ಷಣಗಳನ್ನು ನೋಡುವಾಗ ಮೈ ಜುಂ ಎಂದೆನಿಸುವುದು ಸುಳ್ಳಲ್ಲ. ಈ ಪಂದ್ಯಗಳಲ್ಲಿ ಭಾಗವಹಿಸಲು ಅಪಾರ ಶ್ರಮ, ಕಠಿಣ ಅಭ್ಯಾಸ ಬೇಕು.

ಆ ಮಹತ್ವದ ಗುರಿ ಸಾಧಿಸಬೇಕೆಂಬ ಆಸೆ ಕನಸಿನೊಂದಿಗೆ ನಮ್ಮ ನಿಮ್ಮ ನಡುವೆ ಈ ಸಮೀಕ್ಷಾ ಶೆಟ್ಟಿ ಓಡಾಡಿಕೊಂಡಿದ್ದಾಳೆ.

ಸಮೀಕ್ಷಾ ತನ್ನ ಐದನೇ ತರಗತಿಯಿಂದಲೇ ಕಬಡ್ಡಿಯಲ್ಲಿ ಸಕ್ರಿಯವಾಗಿದ್ದರು. ಅಲ್ಲದೆ ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲೂ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದಕ್ಕಾಗಿ ಸಮೀಕ್ಷಾ ಬೆಳಗ್ಗೆ ಆರರಿಂದ ಏಳರವರೆಗೆ, ಸಂಜೆ ನಾಲಕ್ಕರಿಂದ ಆರು ಗಂಟೆಯವರೆಗೆ ಅಭ್ಯಾಸ ನಡೆಸುತ್ತಾರೆ.

ಬಾಲಕೃಷ್ಣ ಸವಣೂರು ಸಮೀಕ್ಷಾಳ ಮೊದಲ ಗುರು, ಕಬಡ್ಡಿಯೊಡೆಗೆ ಇವಳಿಗಿದ್ದ ಆಸಕ್ತಿಯನ್ನು ಗಮನಸಿದ ಸವಣೂರು, ಸಮೀಕ್ಷಾ ಈ ಕ್ರೀಡೆಯಲ್ಲಿ ಮುಂದುವರೆಯಲು ಬೇಕಾದ ಮಾರ್ಗದರ್ಶನ ಮಾಡುತ್ತಿದ್ದಾರೆ.

ಏಳನೇ ತರಗತಿಯಲ್ಲೇ ಸಮೀಕ್ಷಾ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದರು. ಎಂಟನೇ ತರಗತಿಯಲ್ಲಿ ಮಂಗಳೂರಿನಲ್ಲಿ ಜಯ ಕರ್ನಾಟಕ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನದೊಂದಿಗೆ ‘ಬೆಸ್ಟ್ ರೈಡರ್‌’ ಹೆಸರೂ ದೊರೆತಿದೆ.

ಶಿರಸಿಯಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಸಮೀಕ್ಷಾ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಕರ್ನಾಟಕಕ್ಕೆ ಐದನೇ ಸ್ಥಾನ ಪಡೆದಿದ್ದಾರೆ.

ಇಷ್ಟೇ ಅಲ್ಲದೆ ಅನೇಕ ತಾಲೂಕುಮಟ್ಟ, ಜಿಲ್ಲಾಮಟ್ಟ, ರಾಜ್ಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳು, ಪುರಸ್ಕಾರಗಳು ದೊರೆತಿವೆ. ಕಬಡ್ಡಿ ಮಾತ್ರವಲ್ಲದೇ ಗುಂಡೆಸೆತ, ಚಕ್ರ ಎಸೆತದಲ್ಲೂ ವಲಯ ಮಟ್ಟ ಮತ್ತು ಜಿಲ್ಲಾ ಮಟದಲ್ಲಿ ಸಮೀಕ್ಷಾಗೆ ಅನೇಕ ಪ್ರಶಸ್ತಿಗಳು ದೊರೆತಿವೆ.

ಪೂನಾದಲ್ಲಿ ಹೋಟೆಲ್ ಉದ್ಯಮಿಯಾಗಿರುವ ಸತೀಶ್ ಶೆಟ್ಟಿ ಹಾಗೂ ಅಮಿತಾ ಎಸ್.ಶೆಟ್ಟಿ ದಂಪತಿಯ ಪುತ್ರಿ ಸಮೀಕ್ಷಾ ಶೆಟ್ಟಿಯ ಹುಟ್ಟೂರು ಸವಣೂರಿನ ನಡುಬೈಲು. ಪ್ರಸ್ತುತ ಫಿಲೋಮಿನಾ ಪದವಿಪೂರ್ವ ಕಾಲೇಜಿನಲ್ಲಿ ದ್ವಿತಿಯ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ. ಸಮೀಕ್ಷಾಗೆ ಮುಂದೆ ಪೊಲೀಸ್ ಅಧಿಕಾರಿಯಾಗಬೇಂಕೆಂಬ ಆಸೆಯಿದೆ.

– ಅಪರ್ಣಾ ಎ.ಎಸ್. ಸವಣೂರು.

Write A Comment