ಮನೋರಂಜನೆ

ಕೋಟ್ಯಧಿಪತಿಗಳಾದ ಭಾರತ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ-ಲಿಂಗ್ಡೊ !

Pinterest LinkedIn Tumblr

isl-auction-2015-sunil-chhetri

ಹೊಸದಿಲ್ಲಿ: ಭಾರತ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಹಾಗೂ ಅವರ ಬೆಂಗಳೂರು ಎಫ್‌ಸಿ ತಂಡದ ಸಹ ಆಟಗಾರ ಯೂಗೆನ್ಸನ್‌ ಲಿಂಗ್ಡೊ ಭಾರತೀಯ ಸೂಪರ್ ಲೀಗ್ (ಐಎಸ್‌ಎಲ್) ಹರಾಜಿನಲ್ಲಿ ಕೋಟ್ಯಧಿಪತಿಗಳಾಗಿದ್ದಾರೆ.

ಮೂಲ ಬೆಲೆ 80 ಲಕ್ಷ ರೂ ಹೊಂದಿದ್ದ ಸುನಿಲ್ ಚೆಟ್ರಿಗೆ ಶುಕ್ರವಾರ ನಡೆದ ಹರಾಜಿನಲ್ಲಿ 1.20 ಕೋಟಿ ರೂ. ಒಲಿದು ಬಂದಿದ್ದು, ಅವರನ್ನು ಮುಂಬಯಿ ಸಿಟಿ ಎಫ್‌ಸಿ ತಂಡ ಖರೀದಿಸಿದೆ. ಅದಕ್ಕಿಂತಲೂ ಮುನ್ನ 27 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಸೆಂಟ್ರಲ್‌ ಮಿಡ್‌ಪೀಲ್ಡರ್‌ ಯೂಗೆನ್ಸನ್‌ ಲಿಂಗ್ಡೊ 1.05 ಕೋಟಿ ರೂ.ಗೆ ಬಿಕರಿಯಾಗಿ ಅಚ್ಚರಿ ಮೂಡಿಸಿದ್ದರು. ಅವರನ್ನು ಪುಣೆ ಎಫ್‌ಸಿ ಖರೀದಿಸಿತ್ತು. ಇದೇ ಐಎಸ್‌ಎಲ್‌ನ ಅತಿ ದೊಡ್ಡ ಮೊತ್ತ ಎಂಬ ಭಾವನೆ ಆರಂಭದಲ್ಲಿ ಎಲ್ಲರಲ್ಲಿತ್ತು. ಆದರೆ ಸುನಿಲ್‌ ಚೆಟ್ರಿ ಅವರಿಗೆ ನಿರೀಕ್ಷೆಯಂತೆ ಅತ್ಯಧಿಕ ಬೇಡಿಕೆ ಕುದುರಿ 1.20 ಕೋಟಿ ರೂ.ಗೆ ಅವರು ಮುಂಬಯಿ ತಂಡದ ಪಾಲಾದರು.

ಭಾರತ ಫುಟ್ಬಾಲ್‌ನ ಹತ್ತು ಪ್ರಮುಖ ಆಟಗಾರರಿಗೆ ದೊಡ್ಡ ಮೊತ್ತ ದೊರಕುವ ನಿರೀಕ್ಷೆ ಎಲ್ಲರಲ್ಲಿತ್ತು. ಆದರೆ ಹಾಗೇನು ಆಗಲಿಲ್ಲ. ಹರಾಜಿನಲ್ಲಿ ಇಬ್ಬರನ್ನು ಬಿಟ್ಟರೆ ಕೋಟಿ ದಾಟುವ ಅವಕಾಶ ಸಿಗಲಿಲ್ಲ. ಬಿಡ್‌ನಲ್ಲಿ ಮೂರನೇ ಅಧಿಕ ಮೊತ್ತಕ್ಕೆ ಮಾರಾಟವಾಗಿದ್ದು ಭಾರತ ತಂಡದ ಡಿಫೆಂಡರ್‌ ರಿನೊ ಅಂಟೊ. ಅವರನ್ನು ಹಾಲಿ ಐಎಸ್‌ಎಲ್‌ ಚಾಂಪಿಯನ್‌ ಅಟ್ಲೆಟಿಕೊ ಡಿ ಕೋಲ್ಕತಾ ತಂಡ 90 ಲಕ್ಷ ರೂ. ನೀಡಿ ಖರೀದಿಸಿತು. ಅವರ ಮೂಲ ಬೆಲೆ ಕೇವಲ 17 ಲಕ್ಷ ರೂ. ಆಗಿತ್ತು.

ಒಟ್ಟಾರೆ 10 ಆಟಗಾರರ ಖರೀದಿಗೆ ಐಎಸ್‌ಎಲ್‌ ಪುಟ್ಬಾಲ್‌ ತಂಡಗಳು 7.22 ಕೋಟಿ ರೂ. ವ್ಯಯಿಸಿದವು. ಎಫ್‌ಸಿ ಗೋವಾ ಹಾಗೂ ಕೇರಳ ಬ್ಲಾಸ್ಟರ್‌ ತಂಡಗಳು ಮಾತ್ರ ಶುಕ್ರವಾರದ ಹರಾಜಿನಲ್ಲಿ ಒಬ್ಬ ಆಟಗಾರನನ್ನೂ ಖರೀದಿಸಲಿಲ್ಲ.

ಕಳೆದ ವರ್ಷದ ಹರಾಜಿನಲ್ಲಿ ತಮ್ಮ ಆಟಗಾರರನ್ನು ಅವರ ತಂಡ ಬಿಟ್ಟುಕೊಡದ ಕಾರಣ ಸುನಿಲ್ ಚೆಟ್ರಿ, ಲಿಂಗ್ಡೊಗೆ ಇದೇ ಮೊದಲ ಬಾರಿಗೆ ಹರಾಜಿನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. 2014ರ ಹರಾಜಿನಲ್ಲಿ ಅವರಿಬ್ಬರೂ ಪಾಲ್ಗೊಂಡಿರಲಿಲ್ಲ.

Write A Comment