ಮನೋರಂಜನೆ

ದುಬಾರಿ ಬಜೆಟ್‌ ರಾಜ್ ಬ್ರದರ್ಸ್‌ಗೆ ಕೈಕೊಟ್ಟ ನಿರ್ಮಾಪಕ

Pinterest LinkedIn Tumblr

21– ಎಚ್. ಮಹೇಶ್
ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಒಟ್ಟಿಗೆ ಸಿನಿಮಾವೊಂದರಲ್ಲಿ ನಟಿಸುತ್ತಾರೆ, ಆ ಚಿತ್ರವನ್ನು ಫೈಟ್ ಮಾಸ್ಟರ್ ರವಿವರ್ಮಾ ಡೈರೆಕ್ಟ್ ಮಾಡುತ್ತಾರೆ, ಜಯಣ್ಣ ನಿರ್ಮಾಣ ಮಾಡುತ್ತಾರೆ ಎಂದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಆದರೆ ಈಗ ಆ ಪ್ರಾಜೆಕ್ಟ್ ಶುರುವಾಗುವ ಸೂಚನೆಗಳು ಕಾಣುತ್ತಿಲ್ಲ.

ಇದಕ್ಕೆ ಕಾರಣ ಹುಡುಕುತ್ತ ಹೋದರೆ ಅನೇಕ ವಿಷಯಗಳು ತೆರೆದುಕೊಳ್ಳುತ್ತವೆ. ಈ ಮೊದಲು ಜಯಣ್ಣ ನಿರ್ಮಿಸಿದ್ದ, ಪುನೀತ್ ನಟನೆಯ ರಣವಿಕ್ರಮ ಚಿತ್ರವನ್ನು ಸಂತೋಷ್ ಚಿತ್ರಮಂದಿರದಿಂದ ತೆಗೆದುಹಾಕಿದ್ದೇ ಪುನೀತ್ ಅಪ್‌ಸೆಟ್ ಆಗುವುದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಅದರ ಜತೆಗೆ ಅಣ್ಣ-ತಮ್ಮನ ಚಿತ್ರಕ್ಕೆ 20 ಕೋಟಿ ರೂ. ಹೂಡಲು ಜಯಣ್ಣ ಹಿಂದೇಟು ಹಾಕಿರುವುದು ಪುನೀತ್ ಹಾಗೂ ನಿರ್ದೇಶಕ ರವಿ ವರ್ಮಾರನ್ನು ಕೆರಳಿಸಿದೆ.

ರಣವಿಕ್ರಮ ಚಿತ್ರವನ್ನು ಸರಿಯಾಗಿ ಪ್ರಮೋಟ್ ಮಾಡಲಿಲ್ಲ, ಅದೇ ಯಶ್ ಅಭಿನಯದ ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ ಸಿನಿಮಾವನ್ನು ಚೆನ್ನಾಗಿ ಪ್ರಮೋಟ್ ಮಾಡಿ ಚಿತ್ರಮಂದಿರಗಳಿಂದ ಎತ್ತಂಗಡಿಯಾಗದಂತೆ ನೋಡಿಕೊಂಡಿದ್ದು ಪುನೀತ್ ಅಭಿಮಾನಿಗಳನ್ನು ಕೆರಳಿಸಿತ್ತು ಕೂಡ. ಈ ಎಲ್ಲ ಬೆಳವಣಿಗೆಯಿಂದ ಬೇಸತ್ತಿರುವ ಪುನೀತ್, ಜಯಣ್ಣ ಜತೆ ಚಿತ್ರ ಮಾಡುವ ನಿರ್ಧಾರವನ್ನು ಮುಂದೂಡಿದ್ದಾರೆ.

ಈ ಬಗ್ಗೆ ಪುನೀತ್ ಮ್ಯಾನೇಜರ್ ಅವರನ್ನು ಕೇಳಿದಾಗ, ‘ಪುನೀತ್ ಕೈಲಿ ಐದು ಚಿತ್ರಗಳಿರುವುದರಿಂದ ಸದ್ಯಕ್ಕೆ ಜಯಣ್ಣ ಅವರ ಪ್ರಾಜೆಕ್ಟ್ ಮಾಡುತ್ತಿಲ್ಲ. ರವಿವರ್ಮಾ ಜತೆ ಸಿನಿಮಾ ಮಾಡಲಾಗುವುದು. ಆದರೆ ಈಗ ಡೇಟ್ಸ್ ಇಲ್ಲ. ಪುನೀತ್, ಶಿವರಾಜ್‌ಕುಮಾರ್ ಸಿನಿಮಾ ಎಂದರೆ ತುಂಬಾ ನಿರೀಕ್ಷೆಗಳಿರುತ್ತವೆ. ಅದಕ್ಕೆ ಸಮಯ ಬೇಕು. ನಾವು ಎಲ್ಲೂ ಜಯಣ್ಣ ಜತೆ ಸಿನಿಮಾ ಮಾಡುತ್ತೇವೆ, ಮಾಡುವುದಿಲ್ಲ ಎಂದು ಹೇಳಿರಲಿಲ್ಲ. ಪುನೀತ್ ಬರ್ತ್ ಡೇ ದಿನ ಎಲ್ಲರೂ ಜಾಹೀರಾತು ಕೊಟ್ಟಂತೆ ಜಯಣ್ಣ ಕೂಡ ಕೊಟ್ಟಿದ್ದರು. ಅದನ್ನು ತಪ್ಪು ಎಂದಾಗಲಿ, ಸರಿ ಎಂದಾಗಲಿ ಹೇಳುವುದಿಲ್ಲ. ಈಗ ಸದ್ಯಕ್ಕೆ ಪುನೀತ್, ಜಯಣ್ಣ ಪ್ರಾಜೆಕ್ಟ್ ಮಾಡುತ್ತಿಲ್ಲ. ಮುಂದೆ ನೋಡೋಣ. ಈ ವಿಷಯವಾಗಿ ಕಳೆದ ವಾರ ಜಯಣ್ಣ, ರವಿವರ್ಮಾ ಮತ್ತು ನಾವು ಚರ್ಚೆ ಮಾಡಿ ಈ ನಿರ್ಧಾರಕ್ಕೆ ಬಂದಿದ್ದೇವೆ’ ಎಂದರು.

ರಣವಿಕ್ರಮ ಚಿತ್ರವನ್ನು ಎತ್ತಂಗಡಿ ಮಾಡಿದ್ದಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆಯಾ ಎಂಬ ಪ್ರಶ್ನೆಗೆ, ‘ರಣವಿಕ್ರಮ ಚಿತ್ರ ಚೆನ್ನಾಗಿ ಓಡಿದೆ. ಆ ಬಗ್ಗೆ ಯಾವುದೇ ಬೇಜಾರು ಇಲ್ಲ. ನಿರ್ದೇಶಕರು ಕತೆ ರೆಡಿ ಮಾಡುತ್ತಿದ್ದಾರೆ. ಅಷ್ಟನ್ನು ಮಾತ್ರ ಹೇಳಬಹುದು’ ಎಂದರು ಕುಮಾರ್.

ಒಟ್ಟಿನಲ್ಲಿ ಯಶ್ ಚಿತ್ರಗಳನ್ನು ಮಾತ್ರ ಜಯಣ್ಣ ಪ್ರಮೋಟ್ ಮಾಡುತ್ತಾರೆ ಎಂಬ ಬಗ್ಗೆ ಫೇಸ್‌ಬುಕ್‌ನಲ್ಲಿ ಚರ್ಚೆಗಳು ನಡೆಯುತ್ತಿವೆ. ಯಾರು ಯಾವ ಬಣ ಸೇರಿದರೂ ಪರ‌್ವಾಗಿಲ್ಲ, ಪುನೀತ್, ಶಿವರಾಜ್‌ಕುಮಾರ್ ಜೋಡಿಯ ಸಿನಿಮಾವನ್ನು ನೋಡುವುದಕ್ಕೆ ಪ್ರೇಕ್ಷಕರಂತೂ ಕಾಯುತ್ತಿರುವುದು ನಿಜ. —

ಈ ಪ್ರಾಜೆಕ್ಟ್ ಅನ್ನು ಜಯಣ್ಣ ಅವರೇ ಅನೌನ್ಸ್ ಮಾಡಿದ್ದರು. ಈಗ ನೋಡಿದರೆ 20 ಕೋಟಿ ರೂ. ಬಜೆಟ್ ಎಂದರೆ ಜಾಸ್ತಿ ಆಯಿತು ಎನ್ನುತ್ತಿದ್ದಾರೆ. ಜಯಣ್ಣ ಹಣದ ಹಿಂದೆ ಬಿದ್ದಿದ್ದಾರೆ. ಪುನೀತ್, ಶಿವರಾಜ್‌ಕುಮಾರ್ ಒಟ್ಟಿಗೆ ಸಿನಿಮಾ ಮಾಡುತ್ತಿರುವುದೇ ದೊಡ್ಡ ವಿಷಯ. ಅಂಥದರಲ್ಲಿ ಜಯಣ್ಣ ಬಜೆಟ್ ನೆಪವೊಡ್ಡಿರುವುದು ನನಗೆ ಬೇಸರ ತರಿಸಿದೆ. ಇನ್ನು 15 ದಿನಗಳಲ್ಲಿ ಈ ಪ್ರಾಜೆಕ್ಟ್‌ಗೆ ಬೇರೆ ನಿರ್ಮಾಪಕರು ಸಿಗದೇ ಇದ್ದರೆ ತೆಲುಗು ಅಥವಾ ಹಿಂದಿಯಲ್ಲಿ ಬೇರೆ ನಟರನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತೇನೆ. – ರವಿವರ್ಮಾ, ನಿರ್ದೇಶಕ

Write A Comment