ಮನೋರಂಜನೆ

ನಿರ್ದೇಶಕ ಚೇತನ್ ಕುಮಾರ್ ಅವರ ಅದ್ದೂರಿ ‘ಭರ್ಜರಿ’

Pinterest LinkedIn Tumblr

crec19BHARJARI2_0

ನಿರ್ದೇಶಕ ಚೇತನ್ ಕುಮಾರ್ ಅವರ ಮೊದಲ ಚಿತ್ರ ‘ಬಹದ್ದೂರ್’ ಭರ್ಜರಿ ಗೆಲುವನ್ನೇ ದಾಖಲಿಸಿತ್ತು. ಎರಡನೇ ಪ್ರಯತ್ನವಾಗಿ ಅವರು ನೇರವಾಗಿ ‘ಭರ್ಜರಿ’ಗೇ ಕೈ ಹಾಕಿದ್ದಾರೆ. ಚಿತ್ರಕ್ಕೆ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿಸಲಾಯಿತು. ‘ಭರ್ಜರಿ’ ಚಿತ್ರಕ್ಕೂ ಧ್ರುವ ಸರ್ಜಾ ಅವರೇ ನಾಯಕ.

ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ‘ಮೊದಲ ನೋಟ’ದ ವಿಡಿಯೊ ಪ್ರದರ್ಶಿಸಲಾಯಿತು. ಅಂದರೆ ಕಲಾವಿದರು, ತಂತ್ರಜ್ಞರ ನಡುವಿನ ಕೆಮೆಸ್ಟ್ರಿಯನ್ನು ಚಿತ್ರೀಕರಣಕ್ಕೂ ಮುನ್ನವೇ ಪರೀಕ್ಷಿಸುವ ತಂತ್ರ ಇದು. ಅದೂ ಅಲ್ಲದೇ ಮಾತುಗಳಿರುವ ದೃಶ್ಯ ತುಣುಕುಗಳ ಜೊತೆಗೆ ಸಂಭಾಷಣೆಯನ್ನೇ ಅಕ್ಷರ ರೂಪದಲ್ಲೂ ತೋರಿಸುವ ‘ಟೈಪೋಗ್ರಫಿ’ಯನ್ನೂ ಟ್ರೇಲರ್‌ನಲ್ಲಿ ಕಾಣಬಹುದಿತ್ತು. ‘ಭರ್ಜರಿ’ ಶಬ್ದವೇ ಸೂಚಿಸುವಂತೆ ಭರ್ಜರಿತನವೇ ಚಿತ್ರದ ಪ್ರಮುಖ ಅಂಶ.

‘ಕಥೆಗೆ ತಕ್ಕಂತೆ ಬೆಂಗಳೂರು, ಮೈಸೂರು, ತುಮಕೂರು, ಹುಬ್ಬಳ್ಳಿ, ಮಂಗಳೂರು ಸೇರಿ ಎಂಟು ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ’ ಎಂದು ನಿರ್ದೇಶಕ ಚೇತನ್ ತಿಳಿಸಿದರು.

ಹೊಸ ಕೇಶ ವಿನ್ಯಾಸದಲ್ಲಿ ಧ್ರುವ ಕಾಣಿಸಿಕೊಂಡಿದ್ದಾರೆ. ಇದು ‘ಬಹದ್ದೂರ್’ ಚಿತ್ರವನ್ನೂ ಮೀರಿಸುವ ನಿರೀಕ್ಷೆ ಅವರದು. ಬಹುತೇಕ ‘ಬಹದ್ದೂರ್’ ತಂಡವೇ ಇಲ್ಲೂ ಇದೆ. ಧ್ರುವ ಅವರಿಗೆ ಜೊತೆಯಾಗಿದ್ದಾರೆ ಗುಳಿಕೆನ್ನೆ ಚೆಲುವೆ ರಚಿತಾ ರಾಂ. ಅವರದಿಲ್ಲಿ ರಾಜಕುಮಾರಿಯ ಪಾತ್ರ. ‘ನಮ್ಮ ತಂಡದ ಬಗ್ಗೆ ನಾನೇ ಹೆಚ್ಚು ಹೊಗಳುವುದಿಲ್ಲ’ ಎಂಬುದು ಅವರ ಮಾತು. ಇಷ್ಟಕ್ಕೂ ಈ ಚಿತ್ರಕ್ಕೆ ರಚಿತಾ ಅವರೇ ನಾಯಕಿಯಾಗಲು ಕಾರಣ ಅವರ ಗುಳಿಕೆನ್ನೆ! ಅದನ್ನು ನೋಡಿಯೇ ನಾಯಕ ಪ್ರೀತೀಲಿ ಬೀಳೋದಂತೆ.

‘ಧ್ರುವನಿಗೆ ಕಥೆ ಒಪ್ಪಿಸುವುದೇ ಕಷ್ಟ’ ಎಂದ ನಿರ್ಮಾಪಕ ಆರ್. ಶ್ರೀನಿವಾಸ್ ಈವರೆಗೆ 49 ಕಥೆ ಕೇಳಿಸಿದ್ದಾರಂತೆ. ಕೊನೆಗೂ ಧ್ರುವನನ್ನು ಒಪ್ಪಿಸಿದ ಚೇತನ್‌ಗೆ ನಿರ್ಮಾಪಕರು ಶರಣು ಎಂದಿದ್ದಾರೆ. ಇದೇ ತಿಂಗಳು ಕೊನೆಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಅದಕ್ಕೂ ಮುನ್ನ ಒಂದಷ್ಟು ಹೋಂ ವರ್ಕ್ ಮಾಡಿಕೊಳ್ಳಲಿರುವ ತಂಡ 90 ದಿನಗಳ ಚಿತ್ರೀಕರಣ ನಡೆಸಲಿದೆ.

ನಿರ್ಮಾಪಕರಲ್ಲೊಬ್ಬರಾದ ಶ್ರೀಕಾಂತ್ ಕೆ.ಪಿ. ಅವರ ಪ್ರಕಾರ ‘ಅದ್ದೂರಿ ನಾಯಕ ಮತ್ತು ಬಹದ್ದೂರ್ ನಿರ್ದೇಶಕ ಸೇರಿದರೇ ಭರ್ಜರಿ’. ಚಿತ್ರದಲ್ಲಿ ಐದು ಫೈಟ್ಸ್ ಮತ್ತು ಐದು ಹಾಡುಗಳಿರಲಿವೆ. ವಿ. ಹರಿಕೃಷ್ಣ ಸಂಗೀತ, ಶ್ರೀಶ ಕೂದುವಳ್ಳಿ ಛಾಯಾಗ್ರಹಣ ‘ಭರ್ಜರಿ’ಗಿದೆ.

Write A Comment