ಮನೋರಂಜನೆ

ಗಂಟೆ ಬಾರಿಸಿದ ತಾಪ್ಸಿ, ಯಾರ್ ಆಗ್ತೀರಿ ಮದ್ವೆ?

Pinterest LinkedIn Tumblr

tapsee

ಕನ್ನಡ ಸಿನಿಮಾ ಇಂಡಸ್ಟ್ರಿ ಅಂದ್ರೆ ಇಲ್ಲಿ ತುಂಬಾ ಅಂತೆಕಂತೆಗಳೇ ಜಾಸ್ತಿ. ಈ ಅಂತೆಕಂತೆಗಳ ಮೂಲಕವೇ ಚಿತ್ರಕ್ಕೆ ಪ್ರಚಾರ ತಂದುಕೊಳ್ಳುವ ಸಾಹಸ ಇಲ್ಲಿ ನಡೆಯುತ್ತಲೇ ಇರುತ್ತದೆ. ಐಶ್ವರ್ಯ ರೈ ಬರ್ತಾಳಂತೆ, ಸಮಂತಾ ಆಕ್ಟ್ ಮಾಡ್ತಿದ್ದಾಳಂತೆ, ಪ್ರಿಯಾಂಕಾ ಚೋಪ್ರಾ, ತಮನ್ನಾ… ಹೀಗೆ ಲಿಸ್ಟ್ ದೊಡ್ಡದಾಗುತ್ತಲೇ ಇರುತ್ತದೆ. ಆದರೆ,ಅವರ್ಯಾರೂ ಕನ್ನಡಕ್ಕೆ ಬರಲಿಲ್ಲ. ಹತ್ತು ದಿನದ ಹಿಂದೆ ಈ ಪಟ್ಟಿಗೆ ದಕ್ಷಿಣದ ಬಹುಬೇಡಿಕೆಯ ನಟಿ ತಾಪ್ಸಿ ಪನ್ನುವಿನ ಹೆಸರು ಸೇರಿಕೊಂಡಿತ್ತು. ತಾಪ್ಸಿ ಬರ್ತಾಳಂತೆ ಅಂತ ಸುದ್ದಿಯೂ ಆಯ್ತು. ಆದರೆ, ಈ `ಅಂತೆ’ ಈಗ ನಿಜವಾಗಿದೆ.

ತಮ್ಮ ಸಿನಿಮಾಕ್ಕೆ ತಾಪ್ಸಿಯನ್ನು ಬುಕ್ ಮಾಡಲು ನಿರ್ದೇಶಕ ನಾಗಶೇಖರ್ ವಿಮಾನ ಹಿಡಿದು ಮುಂಬೈಗೆ ಹೊರಟಿದ್ದಾರೆ. ನಾಗಶೇಖರ್ ಅವರ ಮುಂದಿನ ಚಿತ್ರ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ತೆರೆಕಾಣಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ- ಈ ನಾಲ್ಕು ಭಾಷೆಗೂ ತಾಪ್ಸಿಯೇ ನಾಯಕಿ. ಕನ್ನಡ ಮತ್ತು ಮಲಯಾಳಂನಲ್ಲಿ ಚೇತನ್ ನಾಯಕ. ಮಿಕ್ಕ ಭಾಷೆಗೆ ಹೀರೋಗಳ ಹುಡುಕಾಟ ಸಾಗಿದೆ. ತಮಿಳಿನಲ್ಲಿ `ಎದರ್‍ಗಾಲಂ’, ತೆಲುಗಿನಲ್ಲಿ

`ಅಪ್ಪುಡು ಅಪ್ಪುಡು’ ಟೈಟಲ್ ಇಡಲಾಗಿದೆ. ಆದರೆ, ಕನ್ನಡಕ್ಕೆ ಟೈಟಲ್ ಸಿದ್ಧವಾಗಿರಲಿಲ್ಲ. ಇದೀಗ ಚಿತ್ರಕ್ಕೆ `ಗಡಿಯಾರ’ ಎಂಬ ಹೆಸರಿಟ್ಟು, ಕೈಯಲ್ಲಿ ಚೆಕ್ ಇಟ್ಟುಕೊಂಡು ನಾಗಶೇಖರ್ ತಾಪ್ಸಿ ಮನೆಗೆ ಹೊರಟಿದ್ದಾರೆ.

ಈ ಚಿತ್ರಕ್ಕೆ ತಾಪ್ಸಿ ಓಕೆ ಅಂದಿದ್ದಕ್ಕೂ ಕೆಲವು ಕಾರಣಗಳುಂಟು. ಒಂದು ಇದು ಬಿಗ್‍ಬಜೆಟಿನ ಸಿನಿಮಾ. ನಾಲ್ಕು ಭಾಷೆಗಳಲ್ಲೂ ಏಕಕಾಲದಲ್ಲಿ ಮಿಂಚುವ ಭಾಗ್ಯ, `ಮೈನಾ’ದಂಥ ಮಜಬೂತ್ ಸಿನಿಮಾ ಕೊಟ್ಟ ನಾಗಶೇಖರ್ ವಿಭಿನ್ನ ನಿರ್ದೇಶಕ ಮತ್ತು ಕಥೆಯೂ ಚೆನ್ನಾಗಿರುವ ಕಾರಣ ತಾಪ್ಸಿ ಇದಕ್ಕೆ ಒಪ್ಪಿಕೊಂಡಿದ್ದಾರಂತೆ.

`ರನ್ನಿಂಗ್ ಶಾದಿ.ಕಾಂ’ ಎಂಬ ಹಿಂದಿ ಸಿನಿಮಾದೊಟ್ಟಿಗೆ, ತಮಿಳಿನ ಮೂರು- ತೆಲುಗಿನ ಎರಡು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿರುವ ತಾಪ್ಸಿಯ ಡೇಟ್ಸ್ ಹಿಡಿಯುವುದೂ ನಾಗಶೇಖರ್‍ಗೆ ಕಷ್ಟವಿತ್ತು. ಕಥೆಯನ್ನು ಆಕೆಯ ಮುಂದೆ ಕಣ್ಣಿಗೆ ಕಟ್ಟಿದಂತೆ ಹೇಳುವುದರಲ್ಲಿ ನಿರ್ದೇಶಕರರು ಯಶಸ್ವಿಯಾಗಿದ್ದಾರೆ.

ತಾಪ್ಸಿಯ ಇನ್ನೊಂದು ಕತೆ

ಅಂದಹಾಗೆ, ತಾಪ್ಸಿಯ ಸಂಭಾವನೆ ದಕ್ಷಿಣದಲ್ಲಿ ಚೆನ್ನಾಗಿಯೇ ಇದೆ. ನಟನೆಯೇ ಈಕೆಗೆ ಬದುಕು ಕಟ್ಟಿಕೊಟ್ಟಿದೆ. ಆದರೂ ಸಿನಿಮಾ ಸಂಭಾವನೆ ಸಾಲದು, ಒಂದು ಸೈಡ್‍ಬ್ಯುಸಿನೆಸ್ ಬೇಕಲ್ಲ. ಈ ಹಿಂದೆ ಶಿಲ್ಪಾ ಶೆಟ್ಟಿ, ಬಿಪಾಶಾರ ಫಿಟ್ನೆಸ್ ಡಿವಿಡಿ, ನಯನಾತಾರಾಳ ಹೋಟೆಲ್ ಬ್ಯುಸಿನೆಸ್‍ಗಳು ದೊಡ್ಡ ಸುದ್ದಿ ಆಗಿತ್ತು. ಈಗ ಅದೇ ಥರದ ಸೈಡ್‍ಬ್ಯುಸಿನೆಸ್‍ಗೆ ತಾಪ್ಸಿ ಪನ್ನು ಕೈಹಾಕಿದ್ದಾಳೆ. ಆದರೆ, ಈ ಬ್ಯುಸಿನೆಸ್ ಸ್ವಲ್ಪ ಡಿಫರೆಂಟ್. `ದಿ ವೆಡ್ಡಿಂಗ್ ಫ್ಯಾಕ್ಟರಿ’ ಆರಂಭಿಸಿದ್ದಾಳೆ ತಾಪ್ಸಿ.

ಟೈಟಲ್ ನೋಡಿ, ಇದೇನು ವಧು- ವರರ ವೇದಿಕೆ ಅಂತ ಅಂದ್ಕೋಬೇಡಿ. ಒಂದು ಅದ್ಧೂರಿ ಮದ್ವೆ ಹೇಗಿರ್ಬೇಕು ಅಂತ ತಾಪ್ಸಿ ಹೇಳ್ಕೊಡ್ತಿದ್ದಾಳಷ್ಟೇ. `ದಿ ವೆಡ್ಡಿಂಗ್ ಫ್ಯಾಕ್ಟರಿ’ ತಂಡ ಮೊನ್ನೆಯಷ್ಟೇ ಒಂದು ಬರ್ತ್‍ಡೇ ಈವೆಂಟ್ ಆಚರಿಸಿ ಸಕ್ಸಸ್ ಕಂಡಿದೆ. ಈ ಈವೆಂಟುಗಳ ನೀಲನಕ್ಷೆಯನ್ನು ಖುದ್ದು ತಾಪ್ಸಿಯೇ ರೆಡಿಮಾಡ್ತಾಳಂತೆ.ಅದನ್ನ ಫೀಲ್ಡಿನಲ್ಲಿ ಜಾರಿಗೆ ತರುವ ಕೆಲಸವನ್ನು ಈಕೆಯ ತಂಗಿ ಮತ್ತು ಗೆಳೆಯರು ಮಾಡ್ತಾರೆ.

ಬಿ ಟೆಕ್ ಓದಿರುವ ತಾಪ್ಸಿ ಸದಾ ಕ್ರಿಯೇಟಿವ್ ಆಲೋಚನೆಯವಳು. ದಿಲ್ಲಿಯಲ್ಲಿ ಹುಟ್ಟಿದ ತಾಪ್ಸಿಗೆ ಬಾಲಿವುಡ್‍ಗೆ ಹೋಗೋದೇನು ಕಷ್ಟದ ಮಾತಾಗಿರ್ಲಿಲ್ಲ. ಅಲ್ಲೇ ಸುತ್ತಮುತ್ತ ಒಂದಿಷ್ಟು ಡೈರೆಕ್ಟರುಗಳು, ಸ್ಟಾರ್‍ಗಳು ಸಿಕ್ತಿದ್ರು. ಆದರೆ, ಆಕೆ ನೇರವಾಗಿ ಬಂದಿದ್ದು ಹೈದರಾಬಾದಿಗೆ. `ಝುಮ್ಮಾಂದಿ ನಾದಮ್’ ಎಂಬ ತೆಲುಗು ಚಿತ್ರರಂಗದ ಮೂಲಕ ಈ ಹಿಂದಿ ಹುಡುಗಿ ತನ್ನ ಖಾತೆ ಆರಂಭಿಸಿದಳು. ಈಗ ನಟನೆಯೊಂದಿಗೂ ಖಾಸಗಿ ಬದುಕಿನಲ್ಲಿ ವಿಭಿನ್ನವಾಗಿಯೇ ಹೆಜ್ಜೆ ಇಡುತ್ತಿದ್ದಾಳೆಂದು `ಶಾದಿ’ ಹಾದಿ ಕಂಡರೇನೇ ಗೊತ್ತಾಗುತ್ತೆ.?

ಅಷ್ಟೊಂದು ಕ್ರೆಡಿಟ್ಟಾ?

ನಟಿ ಕೇಂದ್ರಿತ ಚಿತ್ರಗಳು ಈಗೀಗ ಹಿಟ್ ಆಗುತ್ತಿವೆ. ಅವು ನಟಿಯರಿಗೂ ಪ್ಲಸ್ ಪಾಯಿಂಟ್ ಆಗುತ್ತಿವೆ. `ಮೇರಿ ಕೋಂ’ನಲ್ಲಿ ಪ್ರಿಯಾಂಕಾ ಚೋಪ್ರಾ, `ಎನ್‍ಎಚ್ 10’ನಲ್ಲಿ ಅನುಷ್ಕಾ ಶರ್ಮಾ ಮಿಂಚಿದ್ದು ಗೊತ್ತೇ ಇದೆ. ಆದರೆ, ಹೀಗೆ ನಟಿಯರಿಗೆ ಕ್ರೆಡಿಟ್ ಹೋಗುವ ಚಿತ್ರಕ್ಕೆ ತಾಪ್ಸಿ ಒಪ್ಪುತ್ತಿಲ್ವಂತೆ. ಇಂಥ ಸ್ಟ್ರಾಂಗ್ ಮಾರ್ಕೆಟ್ ರೂಪಿಸಿಕೊಳ್ಳಲು ಇನ್ನೊಂದಿಷ್ಟು ಚಿತ್ರಗಳಲ್ಲಿ ತಾನು ನಟಿಸಬೇಕೆಂಬುದು ತಾಪ್ಸಿ ಮಾತು. ಆದರೆ, ತಾಪ್ಸಿಯಿಂದ ಯಶಸ್ವಿ ನಟನೆ ಸಾಧ್ಯ ಎನ್ನುತಿದೆ ಅವರ ಅಭಿಮಾನಿ ಜಗತ್ತು. ದಿಲ್ಲಿ ಹುಡುಗಿಯ ದಿಲ್‍ನಲ್ಲಿ ಏನೇನು ಆತಂಕ ಇದೆಯೋ ಯಾರೀಗ್ಗೊತ್ತು?

Write A Comment