ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಪ್ರೇಮದಾಟ ಈಗಾಗಲೇ ಜಗಜ್ಜಾಹೀರು. ಈ ಮಧ್ಯೆ, ‘ನಾವಿಬ್ಬರೂ ಮದುವೆಯಾಗುತ್ತಿದ್ದೇವೆ’ ಎಂದು ಹೇಳಿಕೊಂಡಿದ್ದಾಯ್ತು. ಕೊನೆಗೆ, ‘ಹಾಗೆಲ್ಲ ಹೇಳಿಯೇ ಇಲ್ಲ’ ಅಂತ ತಿರುಚುವ ಪ್ರಯತ್ನವೂ ನಡೆಯಿತು ಅನ್ನಿ. ಸಿನಿರಂಗದಲ್ಲಿ ಇಂತಹ ಮದುವೆ, ಬ್ರೇಕಪ್ಗಳಿಗೆ ಆದಿಯೂ ಇಲ್ಲ.. ಅಂತ್ಯವಂತೂ ಇಲ್ಲವೇ ಇಲ್ಲ. ಬಾಲಿವುಡ್ನಲ್ಲಿ ಈಗ ಮತ್ತೊಂದು ಯುವ ಜೋಡಿ ಇದೇ ಕಾರಣಕ್ಕೆ ಸುದ್ದಿಯಾಗುತ್ತಿದೆ; ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್. ಇದುವರೆಗೂ ‘ನಾವಿಬ್ಬರೂ ಪ್ರೇಮಿಗಳು’ ಅಂತ ಅಧಿಕೃತವಾಗಿ ಈ ಜೋಡಿ ಎಲ್ಲೂ ಹೇಳಿಕೊಂಡಿಲ್ಲ. ಆದರೂ ಆ ರೀತಿಯ ಗಾಳಿಸುದ್ದಿ ಇರುವುದಂತೂ ಸುಳ್ಳಲ್ಲ. ಸದ್ಯ ಸೋರಿಕೆಯಾಗುತ್ತಿರುವ ಮಾಹಿತಿ ಪ್ರಕಾರ, ದೀಪಿಕಾ- ರಣವೀರ್ 2016ರ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಂತೆ!
ಹೌದು, ಈ ಕುರಿತು ಈಗಾಗಲೇ ಎರಡೂ ಕುಟುಂಬಗಳ ನಡುವೆ ಮಾತುಕತೆಯಾಗಿದೆ. ಹಿರಿಯರ ಒಪ್ಪಿಗೆ ಮೇರೆಗೆ ಈ ವಿವಾಹ ಜರುಗಲಿದೆ ಎನ್ನುತ್ತಿವೆ ದೀಪಿಕಾ- ರಣವೀರ್ ಆಪ್ತ ಮೂಲಗಳು. ‘ರಾಮ್ಲೀಲಾ’ ಚಿತ್ರದಲ್ಲಿ ಈ ಜೋಡಿ ಬಿಡುಬೀಸಾಗಿ ಕಾಣಿಸಿಕೊಂಡಿದ್ದು, ಅದೇ ತಂಡ ಈಗ ‘ಬಾಜಿರಾವ್ ಮಸ್ತಾನಿ’ಯಲ್ಲೂ ತೊಡಗಿದೆ. ಅಷ್ಟೇ ಅಲ್ಲ, ಹಲವು ಬಾರಿ ಇವರಿಬ್ಬರೂ ಒಟ್ಟೊಟ್ಟಿಗೆ ಸಮಾರಂಭಗಳಲ್ಲಿ ಕಾಣಿಸಿಕೊಂಡು ಮಿರಿಮಿರಿ ಮಿಂಚುತ್ತಿದ್ದಾರೆ. ಬಹಿರಂಗವಾಗಿಯೇ ರಣವೀರ್, ದೀಪಿಕಾಗೆ ಅನೇಕ ಬಾರಿ ಪ್ರೇಮ ನಿವೇದನೆ ಮಾಡಿದ್ದು ಗುಟ್ಟಾಗಿ ಉಳಿದಿಲ್ಲ. ಒಟ್ಟಿನಲ್ಲಿ ಯಾವುದೇ ಅಧಿಕೃತ ಮಾಹಿತಿ ಹೊರಬೀಳದಿದ್ದರೂ ಬಿ-ಟೌನ್ನಲ್ಲಿ ಮಾತ್ರ ಇದು ಬ್ರೇಕಿಂಗ್ ನ್ಯೂಸ್…!!
