ಮನೋರಂಜನೆ

ವಜ್ರೇಶ್ವರಿ ಸಂಸ್ಥೆ ಉದ್ಯೋಗಿಯ ಆತ್ಮಹತ್ಯೆ; ರಾಘವೇಂದ್ರ ರಾಜ್‌ಕುಮಾರ್ ದಂಪತಿಗೆ ಜಾಮೀನು

Pinterest LinkedIn Tumblr

raghavendra-rajkumar

ಬೆಂಗಳೂರು: ಸಿನಿಮಾ ನಿರ್ಮಾಣ ಸಂಸ್ಥೆ ವಜ್ರೇಶ್ವರಿ ಕಂಬೈನ್ಸ್‌ನ ಲೆಕ್ಕಿಗ ಉಮೇಶ್ ಕೋಟೆಕಾರ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಂಸ್ಥೆಯ ಮಾಲೀಕ ರಾಘವೇಂದ್ರ ರಾಜ್‌ಕುಮಾರ್ ಮತ್ತು ಅವರ ಪತ್ನಿ ಮಂಗಳಾ ಅವರಿಗೆ ನಗರದ ಎಸಿಎಂಎಂ ನ್ಯಾಯಾಲಯ ಶನಿವಾರ ನಿರೀಕ್ಷಣಾ ಜಾಮೀನು ನೀಡಿದೆ.

ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ನೀಡಿದ ಆರೋಪದ ಮೇಲೆ ರಾಘವೇಂದ್ರ ರಾಜ್‌ಕುಮಾರ್ ದಂಪತಿ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್‌ ದಾಖಲಾಗಿತ್ತು. ಬಂಧನ ಭೀತಿಯಿಂದಾಗಿ ದಂಪತಿ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜೋಷಿ ವೆಂಕಟೇಶನ್, ‘ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಅವರ ಮೇಲೆ ಯಾವುದೇ ರೀತಿಯಲ್ಲೂ ಪ್ರಭಾವ ಬೀರಬಾರದು. ಸಾಕ್ಷ್ಯ ನಾಶಪಡಿಸಬಾರದು. ತನಿಖೆಗೆ ಸಹಕರಿಸಬೇಕು’ ಎಂಬ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿ, ಮುಂದಿನ ವಿಚಾರಣೆಯನ್ನು ಜೂನ್ 9ಕ್ಕೆ ಮುಂದೂಡಿದರು.

ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ಲೆಕ್ಕಿಗರಾಗಿದ್ದ ಉಮೇಶ್, ಕಾಟನ್‌ಪೇಟೆ ಮುಖ್ಯರಸ್ತೆಯ ವಸತಿ ಗೃಹದಲ್ಲಿ ನೇಣು ಹಾಕಿಕೊಂಡಿದ್ದರು. ‘ಹಣ ದುರುಪಯೋಗದ ಆರೋಪ ಹೊರಿಸಿ ರಾಘವೇಂದ್ರ ರಾಜ್‌ಕುಮಾರ್ ದಂಪತಿ ನನ್ನ ತಂದೆಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೃತರ ಮಗ ಯು.ಕೆ. ವಿನಾಯಕ ದೂರು ದಾಖಲಿಸಿದ್ದರು.

Write A Comment