ಕರಾವಳಿ

ಪಿಎಫ್‌ಐ, ಎಸ್‌ಡಿಪಿಐ ಬಿಜೆಪಿಯ ಏಜೆಂಟ್‌ಗಳು: ಸಚಿವ ಖಾದರ್

Pinterest LinkedIn Tumblr

khadar UT

ಬೆಂಗಳೂರು: ಪಿಎಫ್‌ಐ, ಎಸ್‌ಡಿಪಿಐ ನಂತಹ ಕೋಮುವಾದಿ ಸಂಘಟನೆಗಳು ಬಿಜೆಪಿಯ ರಾಜಕೀಯ ಏಜೆಂಟ್‌ಗಳು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಆರೋಪಿಸಿದರು.

ವಿಕಾಸಸೌಧದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಈ ಸಂಘಟನೆಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಸೋಲಿಸಲು ಎಸ್‌ಡಿಪಿಐ ಮೂಲಕ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ದಕ್ಷಿಣ ಕನ್ನಡದ ಹಲವು ಕ್ಷೇತ್ರಗಳಲ್ಲಿ ಈ ರೀತಿ ಮಾಡಿತ್ತು’ ಎಂದು ದೂರಿದರು.

‘ಮೈಸೂರು, ಶಿವಮೊಗ್ಗಗಳಲ್ಲಿ ಈ ಹಿಂದೆ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಸಾವಿರಕ್ಕೂ ಹೆಚ್ಚು ಹಿಂದೂಗಳ ಮತ್ತು ಮುಸಲ್ಮಾನರ ವಿರುದ್ಧದ ಪ್ರಕರಣಗಳನ್ನು ವಾಪಸ್‌ ಪಡೆಯಲಾಗಿದೆ. ಆದರೆ, ಬಿಜೆಪಿ ಇದನ್ನು ರಾಜಕೀಯವಾಗಿ ಬಳಸಿಕೊಂಡು, ಜನರ ಮಧ್ಯೆ ಗೊಂದಲ ಸೃಷ್ಟಿಸುತ್ತಿದೆ’ ಎಂದು ದೂರಿದರು.

‘ಈ ವಿಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಬಿಜೆಪಿ ಮುಖಂಡರಿಗೆ ಇಲ್ಲ. ವಾಪಸ್‌ ಪಡೆದ ಪ್ರಕರಣಗಳಲ್ಲಿ ಪಿಎಫ್‌ಐ, ಎಸ್‌ಡಿಪಿಐಯ 50 ರಿಂದ 100 ಕಾರ್ಯಕರ್ತರು ಇದ್ದಾರಷ್ಟೆ. ಉಳಿದವರೆಲ್ಲ ಮುಗ್ಧರು. ‍ಪ್ರಕರಣ ವಾಪಸ್‌ ಪಡೆದಿರುವುದರಿಂದ ಅವರಿಗೆಲ್ಲ ಕುಟುಂಬದೊಂದಿಗೆ ನೆಮ್ಮದಿಯಿಂದ ಇರಲು ಅವಕಾಶ ಸಿಕ್ಕಿದೆ’ ಎಂದು ಹೇಳಿದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಈ ಸಂಘಟನೆಗಳಿಗೆ ಯಾರು ದುಡ್ಡು ಕೊಡುತ್ತಿದ್ದಾರೆ. ಯಾರು ಬೆಂಬಲ ನೀಡುತ್ತಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಲಿ’ ಎಂದು ಹೇಳಿದರು.

ಸರ್ಕಾರ ದೇಶದ್ರೋಹಿಗಳನ್ನು ರಕ್ಷಿಸುತ್ತಿದೆ ಎಂಬ ಈಶ್ವರಪ್ಪ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಜಮ್ಮು ಕಾಶ್ಮೀರದಲ್ಲಿ ಮುಫ್ತಿ ಮಹಮ್ಮದ್‌ ಜೊತೆ ಸೇರಿಕೊಂಡು ಬಿಜೆಪಿಯು ಉಗ್ರರನ್ನು ಬಿಡುಗಡೆ ಮಾಡುವ ಮೂಲಕ ದೇಶ ದ್ರೋಹದ ಕೆಲಸ ಮಾಡಿದೆ. ಈ ಹಿಂದೆ ವಾಜಪೇಯಿ ಕಾಲದಲ್ಲಿ ಕಂದಾಹಾರ್‌ ವಿಮಾನ ಅಪಹರಣವಾದಗಲೂ ಜೈಲಿನಲ್ಲಿದ್ದ ಉಗ್ರರನ್ನು ಬಿಟ್ಟು ದೇಶದ್ರೋಹ ಮಾಡಿತ್ತು. ಕಾಂಗ್ರೆಸ್‌ ಅಂತಹ ಕೆಲಸ ಮಾಡಿಲ್ಲ’ ಎಂದರು.

‘ಕಳೆದ ಬಾರಿ ಬಿಜೆಪಿ ಸರ್ಕಾರ ಇದ್ದಾಗ ವಿ.ಎಸ್‌ ಆಚಾರ್ಯ ಗೃಹ ಮಂತ್ರಿಯಾಗಿದ್ದ ಸಂದರ್ಭದಲ್ಲಿ ನಿಷೇಧಕ್ಕೆ ಮುಂದಾದರೂ, ಇತರ ಮುಖಂಡರು ಅವಕಾಶ ನೀಡಲಿಲ್ಲ’ ಎಂದು ಅವರು ಆರೋಪಿಸಿದರು.

ಪಿಎಫ್‌ಐ, ಕೆಎಫ್‌ಡಿ, ಬಜರಂಗ ದಳದಂತಹ ಕೋಮುವಾದಿ ಸಂಘಟನೆಗಳ ಕಾರ್ಯಕರ್ತರ ಮೇಲಿನ ಪ್ರಕರಣಗಳು ಈಗಲೂ ಹಾಗೆಯೇ ಇದೆ. ಅದನ್ನು ವಾಪಸ್‌ ಮಾಡಿಲ್ಲ
ಯು.ಟಿ. ಖಾದರ್‌, ಆರೋಗ್ಯ ಸಚಿವ

ಸಚಿವ ಸ್ಥಾನದಲ್ಲಿರುವವರು ಯೋಗ್ಯತೆಗೆ ಅನುಗುಣವಾಗಿ ಮಾತನಾಡಬೇಕು. ಪಿಎಫ್‌ಐ, ಕೆಎಫ್‌ಡಿಗಳಿಗೆ ಯಾರು ಬೆಂಬಲ ನೀಡುತ್ತಿದ್ದಾರೆ ಎಂಬ ಬಗ್ಗೆ ಸಿಬಿಐ ತನಿಖೆ ನಡೆಸಲಿ
ಕೆ.ಎಸ್‌. ಈಶ್ವರಪ್ಪ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ

Write A Comment