ಮನೋರಂಜನೆ

ಪಾರ್ವತಮ್ಮ ರಾಜ್‌ಕುಮಾರ್ ಗೆ ಡಾಕ್ಟರೇಟ್‌ : ಚಿತ್ರರಂಗ ಸ್ವಾಗತ

Pinterest LinkedIn Tumblr

Parvatamma-Rajkumar-r

ಬೆಂಗಳೂರು. ಮೇ.28 : ಹಿರಿಯ ಕನ್ನಡ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ಗೆ ಭಾಜನರಾಗಿರುವುದನ್ನು ಚಿತ್ರರಂಗದ ಎಲ್ಲ ವಲಯಗಳೂ ಸ್ವಾಗತಿಸಿವೆ. ಹಿರಿಯರಾದ ಪಾರ್ವತಮ್ಮ ರಾಜ್‌ಕುಮಾರ್ ಅವರು ನಮ್ಮೆಲ್ಲರ ಮಾರ್ಗದರ್ಶಕರು.

ಅವರಿಗೆ ಬಂದಿರುವ ಈ ಡಾಕ್ಟರೇಟ್ ಇಡೀ ಚಿತ್ರರಂಗಕ್ಕೆ ಸಂದ ಗೌರವ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಥಾಮಸ್ ಡಿಸೋಜ ಅವರು ಈ ಸಂಜೆಗೆ ತಿಳಿಸಿದರು. 1939ರ ಡಿಸೆಂಬರ್ 6ರಂದು ಪಾರ್ವತಮ್ಮನವರು ಜನಿಸಿದರು. ಇವರ ತಂದೆ ಅಪ್ಪಾಜಿಗೌಡರು. ತಾಯಿ ಲಕ್ಷ್ಮಮ್ಮನವರು. ಗೌಡರು ಹೆಸರಾಂತ ಹಾರ್ಮೊನಿಯಂ ವಾದಕರಾಗಿದ್ದರು. 1957ರಲ್ಲಿ ಪಾರ್ವತಮ್ಮನವರು ಡಾ.ರಾಜ್‌ಕುಮಾರ್ ಅವರನ್ನು ವರಿಸಿದರು.
ಪಾರ್ವತಮ್ಮ ಮಹಾನ್ ಸಾಹಿತ್ಯಾಸಕ್ತರು. ಕನ್ನಡ ಕಾದಂಬರಿಗಳನ್ನು ತಪ್ಪದೆ ಓದುವ ಮನೋಭಾವ ರೂಢಿಸಿಕೊಂಡಿರುವವರು. ಇವರು ಬಹಳವಾಗಿ ಇಷ್ಟಪಟ್ಟ ಹಲವಾರು ಕಾದಂಬರಿಗಳು ಕನ್ನಡ ಸಿನಿಮಾಗಳಾಗಿ ರೂಪುಗೊಂಡಿವೆ.
ವರನಟನ ಸತಿಯಾಗಿ ಆ ಮಹಾನ್ ಜವಾಬ್ದಾರಿಯನ್ನು ವಿಚಕ್ಷಣೆಯಿಂದ ನಿಭಾಯಿಸಿದ ಪಾರ್ವತಮ್ಮನವರು ಕನ್ನಡ ನೆಲ-ಜಲ-ಭಾಷೆಯ ಹೋರಾಟದಲ್ಲಿ ತಾವೂ ಕೈ ಜೋಡಿಸಿದ್ದಾರೆ.

ಇವರು ತಮ್ಮ ಸಂಸ್ಥೆಗಳ ಮೂಲಕ 59 ಕನ್ನಡ ಚಿತ್ರಗಳನ್ನು ತಯಾರಿಸಿದ್ದಾರೆ. ಸದಭಿರುಚಿ ಸಿನಿಮಾಗಳಿಗೆ ಪ್ರೇರಕ ಶಕ್ತಿಯಾಗಿರುವ ಇವರು ಅನೇಕ ಚಿತ್ರ ತಯಾರಕರಿಗೆ ಸ್ಫೂರ್ತಿ. ಮಾಲಾಶ್ರೀ , ಅನು ಪ್ರಭಾಕರ್, ರಮ್ಯಾ, ರಕ್ಷಿತಾ ಮುಂತಾದ ಹಲವು ಪ್ರತಿಭೆಗಳನ್ನು ಬೆಳ್ಳಿ ತೆರೆಗೆ ಪರಿಚಯಿಸಿರುವ ಇವರು ಈಗಲೂ ಚಿತ್ರ ನಿರ್ಮಾಣದಲ್ಲಿ ಸಕ್ರಿಯರಾಗಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ , ಜೀವಮಾನ ಸಾಧನೆ ಪ್ರಶಸ್ತಿ, ಫಾಲ್ಕೆ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಪಾರ್ವತಮ್ಮ ರಾಜ್‌ಕುಮಾರ್ ಮುಡಿಗೆ ಈಗ ಗೌರವ ಡಾಕ್ಟರೇಟ್ ಗರಿ ಸೇರಿದೆ.

Write A Comment