ಬೆಂಗಳೂರು: ತನ್ನ ಅತೀವ ಜನಪ್ರಿಯತೆ ಹಾಗು ಪ್ರಖ್ಯಾತತೆಗೆ ಅಂಟಿಕೊಂಡಿರುವ ಸನ್ನಿ ಲಿಯೋನ್ ಕನ್ನಡದ ಚಿತ್ರೋದ್ಯಮದಲ್ಲೂ ಮನೆಮಾತಾಗಿದ್ದಾರೆ ಎಂದರೆ ಅತಿಶಯವೇನಲ್ಲ. ಈ ಹಿಂದೆ ದೀಪಿಕಾ, ಸದಾ, ಇಲಿಯಾನ ಇಂತಹವರನ್ನು ಕನ್ನಡಕ್ಕೆ ತಂದ ಸ್ಟೈಲಿಶ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ತಮ್ಮ ಮುಂಬರುವ ಸಿನೆಮಾದ ಪಾತ್ರವೊಂದಕ್ಕೆ ‘ಸನ್ನಿ ಲಿಯೋನ್’ ಅವರೊಂದಿಗೆ ಸಹಿ ಮಾಡಿದ್ದಾರೆ.
ಈ ನಟಿಯ ಜೊತೆ ಒಪ್ಪಂದವನ್ನು ಅಂತಿಮಗೊಳಿಸುವುದಕ್ಕೆ ಮುಂಬೈಗೆ ತೆರಳಿದ್ದ ಇಂದ್ರಜಿತ್ ಲಂಕೇಶ್, ಅವರೊಂದಿಗೆ ಫೋಟೋ ಶೂಟ್ ನಡೆಸಿದ್ದಾರೆ. ಲಂಕೇಶ್ ಅವರ ಪ್ರಕಾರ ಅವರ ಸಿನೆಮಾದಲ್ಲಿ ಸನ್ನಿ ಹೆಜ್ಜೆಯನ್ನಷ್ಟೆ ಹಾಕುವುದಿಲ್ಲ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದಿದ್ದಾರೆ. “ಸನ್ನಿ ಎಲ್ಲ ಕಾಲಕ್ಕೂ ಸಲ್ಲುವ ನಟಿ ಹಾಗು ಭಾರತದಲ್ಲಿ ಅತಿ ಹೆಚ್ಚು ಚರ್ಚೆಯಾಗುವ ನಟಿ. ಅವರಿಗೆ ಆಟ ಆಡಲು ಚೆನ್ನಾಗಿ ಗೊತ್ತು” ಎಂದಿದ್ದಾರೆ ಇಂದ್ರಜಿತ್.
ಸನ್ನಿ ಅವರ ‘ಏಕ್ ಪಹೇಲಿ ಲೀಲಾ’ ಸಿನೆಮಾ ನೋಡಿದ ಮೇಲೆ ಅವರು ನಟಿಯಾಗಿ ಬೆಳೆದಿರುವುದು ತಿಳಿಯುತ್ತದೆ ಎಂದಿದ್ದಾರೆ ಲಂಕೇಶ್. “ಲವ್ ಯು ಆಲಿಯಾ ಈ ದಶಕದಲ್ಲಿ ನಿರ್ಮಾಣವಾಗಲಿರುವ ಅತಿ ದೊಡ್ಡ ಚಲನಚಿತ್ರ. ರವಿಚಂದ್ರನ್, ಭೂಮಿಕಾ, ಸುಧಾರಾಣಿ, ಸುದೀಪ್, ಶಕೀಲಾ, ಸನ್ನಿ ಲಿಯೋನ್ ಹೀಗೆ ಪಾತ್ರವರ್ಗ ಬೆಳೆಯುತ್ತಲೆ ಇದೆ” ಎಂದಿದ್ದಾರೆ ಲಂಕೇಶ್.
ಪ್ರೇಮ್ ಅವರ ‘ಡಿಕೆ’ ಚಲನಚಿತ್ರದ ಮೂಲಕ ಸನ್ನಿ ಸ್ಯಾಂಡಲ್ವುಡ್ ಪ್ರವೇಶಿಸಿದ್ದರು. ಅದರಲ್ಲಿ ಐಟಂ ಡ್ಯಾನ್ಸ್ ಒಂದಕ್ಕೆ ಹೆಜ್ಜೆ ಹಾಕಿದ್ದರು ಈಗ ಇಂದ್ರಜಿತ್ ಲಂಕೇಶ ಅವರ ಸಿನೆಮಾದಲ್ಲಿ ಕನ್ನಡವನ್ನು ಉಲಿಯಲಿದ್ದಾರೆ.