ರಾಷ್ಟ್ರೀಯ

ಸರಾಸರಿ 18.2 ಕಿ.ಮೀ ಮೈಲೇಜ್ ನೀಡುವ ಕಾರು ಉತ್ಪಾದಿಸಿ: ಕೇಂದ್ರ

Pinterest LinkedIn Tumblr

car

ನವದೆಹಲಿ: ಕೇಂದ್ರ ಸರ್ಕಾರ ಶುಕ್ರವಾರ ಇಂದನ ಸಾಮರ್ಥ್ಯ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ಅಥವಾ ಡೀಸೆಲ್‌ಗೆ ಸರಾಸರಿ 18.2 ಕಿ.ಮೀ ಮೈಲೇಜ್ ನೀಡುವ ಕಾರುಗಳನ್ನು ಉತ್ಪಾದಿಸಿ ಎಂದು ಕಾರು ತಯಾರಿಕಾ ಕಂಪನಿಗಳಿಗೆ ಸೂಚಿಸಿದೆ.

ಕೇಂದ್ರ ಸರ್ಕಾರದ ಈ ಮಾರ್ಗಸೂಚಿ 2017ರ ಏಪ್ರಿಲ್‌ನಿಂದ ಉತ್ಪಾದನೆಯಾಗುವ ಕಾರುಗಳಿಗೆ ಮಾತ್ರ ಅನ್ವಯವಾಗಲಿದ್ದು, ಇದನ್ನು ಉಲ್ಲಂಘಿಸುವ ಕಂಪನಿಗಳಿಗೆ ಸರ್ಕಾರ ದಂಡ ವಿಧಿಸುವ ಸಾಧ್ಯತೆ ಇದೆ. ಆದರೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ದಂಡದ ಪ್ರಸ್ತಾಪವಿಲ್ಲ. ನಿಯಮ ಜಾರಿ ಹಾಗೂ ದಂಡ ಹೇರುವ ಪ್ರಕ್ರಿಯೆ ಕುರಿತು ಮುಂಬರುವ ದಿನಗಳಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧಾರ ತೆಗೆದುಕೊಳ್ಳಲಿದೆ.

ಕಂಪನಿ ತಾನು ಉತ್ಪಾದಿಸುವ ಎಲ್ಲ ಮಾದರಿಯ ಕಾರುಗಳ ಮೈಲೇಜ್ ಸರಾಸರಿ 18.2 ಕಿ.ಮೀ. ಇರುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಒಂದು ವೇಳೆ ಈ ಮಾರ್ಗಸೂಚಿ ಜಾರಿಗೆ ಬಂದರೆ ಪ್ರತಿ ವರ್ಷ 90 ಸಾವಿರ ಕೋಟಿ ರುಪಾಯಿ ಮೌಲ್ಯದ ಇಂದನ ಉಳಿತಾಯವಾಗಲಿದೆ.

ಆದಾಗ್ಯೂ ಕಂಪನಿಗಳು ಕಡಿಮೆ ಮೈಲೇಜ್ ನೀಡುವ ಕಾರುಗಳನ್ನು ತಯಾರಿಸಬಹುದು. ಆದರೆ ಅದರ ಜತೆಗೆ ಅತಿ ಹೆಚ್ಚು ಮೈಲೇಜ್ ನೀಡು ಕಾರುಗಳನ್ನು ಉತ್ಪಾದಿಸುವ ಮೂಲಕ ಎಲ್ಲ ಕಾರುಗಳ ಸರಾಸರಿ ಮೈಲೇಜ್ ಕನಿಷ್ಠ 18.2ರಷ್ಟು ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

Write A Comment