ಮನೋರಂಜನೆ

ಏನಾರೂ ಅಂದ್ಕಳಿ, ನಾನಿರೋದ್‌ ಹಿಂಗೆ: ರೂಪಾ ಆರೋಪ

Pinterest LinkedIn Tumblr

roopa

ನಿರ್ದೇಶಕ ಕಂ ನಟ ಚಂದ್ರಶೇಖರ್‌ ಶ್ರೀವಾತ್ಸವ್‌ ತಮ್ಮ “ಸೆವೆನ್‌’ ಎಂಬ ಚಿತ್ರಕ್ಕೆ “ಮಿಸ್‌ ಮಲ್ಲಿಗೆ’ ಖ್ಯಾತಿಯ ರೂಪಾ ನಟರಾಜ್‌ ಅವರನ್ನು ಆಯ್ಕೆ ಮಾಡಿದಾಗ, ಆಕೆಯ ಬಗ್ಗೆ ಸಾಕಷ್ಟು ನೆಗೆಟಿವ್‌ ಮಾತುಗಳನ್ನು ಆಡಿದರಂತೆ. ಆಕೆ ಬಿ ಗ್ರೇಡ್‌ ಚಿತ್ರಗಳ ನಾಯಕಿ, ಆಕೆಯನ್ನು ಹಾಕಿಕೊಂಡರೆ ಚಿತ್ರಕ್ಕೊಂದು ನೆಗೆಟಿವ್‌ ಫೀಲ್‌ ಬರುತ್ತದೆ ಎಂದೆಲ್ಲಾ ಹೆದರಿಸಿದರಂತೆ. ಚಂದ್ರಶೇಖರ್‌ ಶ್ರೀವಾತ್ಸವ್‌ ಹೃದಯ ಕಲ್ಲು ಮಾಡಿಕೊಂಡು ರೂಪಾಗೆ ಅವಕಾಶ ಕೊಟ್ಟಿದ್ದಾರೆ. ಈಗ ರೂಪಾ ಅಭಿನಯದ ಬಗ್ಗೆ ಒಳ್ಳೆಯ ಮಾತು ಗಳನ್ನಾಡು ತ್ತಿದ್ದಾರೆ.

ಅದು ಅತ್ಲಾಗಿರಲಿ, ರೂಪಾ ನಟರಾಜ್‌ ಅವರು ಬಿ ಗ್ರೇಡ್‌ ಚಿತ್ರಗಳ ನಾಯಕಿ ಎಂದು ಹಬ್ಬಿರುವ ಮಾತುಗಳಿಗೆ ಅವರೇನಂತಾರೆ ಎಂಬ ಮಾತುಗಳನ್ನು ಅವರನ್ನೇ ನೇರವಾಗಿ ಕೇಳಿದರೆ, “ಅದು ಬಿ ಗ್ರೇಡ್‌ ಸಿನಿಮಾ ಅಂತ ಅವರಿಗೆ ಅನಿಸಿದರೆ, ಇಟ್ಸ್‌ ನಾಟ್‌ ಮೈ ಪ್ರಾಬ್ಲಿಮ್‌’ ಎಂಬ ಉತ್ತರ ಅವರಿಂದ ಬರುತ್ತದೆ. “ನನ್ನ “ಮಿಸ್‌ ಮಲ್ಲಿಗೆ’ ಸಿನಿಮಾ ನೋಡದವರು ಅದೊಂದು ಬಿ ಗ್ರೇಡ್‌ ಸಿನಿಮಾ ಎಂದು ಇಮೇಜ್‌ ಕೊಟ್ಟರು. ಚಿತ್ರ ನೋಡಿದವರು ಒಳ್ಳೆಯ ಮಾತಾ ಡಿದರು. ನಾನು ಕೆಟ್ಟ ಸಿನಿಮಾ ಮಾಡಿಲ್ಲ. ಅದೊಂದು ಒಳ್ಳೆಯ ಸಿನಿಮಾ ಆಗಿತ್ತು. ಆದರೆ, ಅದನ್ನು ಪ್ರಮೋಟ್‌ ಮಾಡಿದ ರೀತಿ ಸರಿ ಇರಲಿಲ್ಲ.

ಲವ್‌ ದೃಶ್ಯಗಳನ್ನೇ ಹೆಚ್ಚಾಗಿ ಹೈಲೈಟ್‌ ಮಾಡಲಾಗಿತ್ತು. ಅದು ಬಿಟ್ಟರೆ ಅದರಲ್ಲಿ ಕೆಟ್ಟ ಸಂಭಾಷಣೆ ಇರಲಿಲ್ಲ ಏನಿಲ್ಲ. ದೃಶ್ಯಗಳು ಎರಾಟಿಕ್‌ ಆಗಿದ್ದರಿಂದ ಚಿತ್ರಕ್ಕೊಂದು ನೆಗೆಟಿವ್‌ ಆದಂತಹ ಇಮೇಜ್‌ ಬಂದಿತು. ಜನರಿಗೆ ಅದು ಬಿ ಗ್ರೇಡ್‌ ಸಿನಿಮಾ ಎಂದನಿಸಿದ್ದರೆ ಅದು ನನ್ನ ಸಮಸ್ಯೆ ಅಲ್ಲ’ ಎಂದು ಖಡಾಖಂಡಿತವಾಗಿ ನುಡಿಯುತ್ತಾರೆ ರೂಪಾ ನಟರಾಜ್‌. ಇನ್ನು ಅವರು ನಿರ್ದೇಶಕ ಚಂದ್ರಶೇಖರ್‌ಗೆ ಥ್ಯಾಂಕ್ಸ್‌ ಹೇಳುವುದಕ್ಕೆ ಮರೆಯುವುದಿಲ್ಲ. “ಚಂದ್ರು ಅವರಿಗೆ ನನ್ನ ಬಗ್ಗೆ ಯಾರು ಏನೇ ಹೇಳಿದರೂ, ಅದನ್ನು ಅವರು ಕೇಳದೆಯೇ ಒಪ್ಪಿ ಈ ಚಿತ್ರದಲ್ಲಿ ನಟಿಸೋ ಅವಕಾಶ ಕೊಟ್ಟಿದ್ದಾರೆ’ ಎಂದು ಥ್ಯಾಂಕ್ಸ್‌ ಹೇಳಿಬಿಟ್ಟರು.
-ಉದಯವಾಣಿ

Write A Comment