ಶ್ರೀನಗರ, ಮೇ 6- ಖ್ಯಾತ ಚಿತ್ರ ನಿರ್ದೇಶಕ ಹಾಗೂ ಖ್ಯಾತ ನಟಿ ಸುಹಾಸಿನಿ ಪತಿ ಮಣಿರತ್ನಂಗೆ ಲಘು ಹೃದಯಾಘಾತವಾಗಿದೆ. ಸದ್ಯಕ್ಕೆ ಶ್ರೀನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ರೋಜಾ ಮತ್ತು ಬಾಂಬೆ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿರುವ ಮಣಿರತ್ನಂ ತಮ್ಮ ಕುಟುಂಬ ಮತ್ತು ಸ್ನೇಹಿತರ ಜತೆ ಶ್ರೀನಗರಕ್ಕೆ ರಜೆ ನಿಮಿತ್ತ ತೆರಳಿದ್ದರು. ನಿನ್ನೆ ಮಧ್ಯಾಹ್ನ 1 ಗಂಟೆಗೆ ಶ್ರೀನಗರದ ಹೊರವಲಯದಲ್ಲಿ ಗಾಲ್ಫ್ ಆಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಅವರು ಕುಸಿದುಬಿದ್ದರು.
ತಕ್ಷಣವೇ ಶ್ರೀನಗರದ ಷೇರ್-ಇ-ಕಾಶ್ಮೀರ್ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಲಘು ಹೃದಯಾಘಾತವಾಗಿದ್ದು, ಗಾಬರಿ ಪಡಬೇಕಾದ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯಕ್ಕೆ ವಿಶ್ರಾಂತಿ ಪಡೆಯುವಂತೆ ಮಣಿರತ್ನಂಗೆ ವೈದ್ಯರು ಸಲಹೆ ಮಾಡಿದ್ದಾರೆ.
