ಹಲವು ವಿವಾದಗಳಿಂದ ಸುದ್ದಿಯಾಗಿರುವ ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರ ಪುತ್ರ ಸಲಿಂಗಕಾಮಿ ಎಂಬ ಅಂಶ ಬೆಳಕಿಗೆ ಬಂದಿದ್ದು ತಮ್ಮ ತಂದೆ ಮಹಿಳೆಯೊಬ್ಬಳನ್ನು ವಿವಾಹವಾಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಅವರ ಪುತ್ರ ಆರೋಪಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.
ತನ್ನ ಆಸ್ತಿಯಲ್ಲಿ ಪಾಲು ಸಿಗಬೇಕಾದರೆ ಹಾಗೂ ಸಂತತಿಯನ್ನು ಮುಂದುವರೆಸಿಕೊಂಡು ಹೋಗಲು ಮಹಿಳೆಯೊಬ್ಬಳನ್ನು ವಿವಾಹವಾಗುವಂತೆ ತಮ್ಮ ತಂದೆ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಒತ್ತಾಯ ಮಾಡುತ್ತಿದ್ದರು ಎಂದು ಶ್ರೀನಿವಾಸನ್ ಅವರ ಸಲಿಂಗಕಾಮಿ ಪುತ್ರ ಅಶ್ವಿನ್ ಆರೋಪಿಸಿದ್ದಾರೆ.
ಆಂಗ್ಲ ಪತ್ರಿಕೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ತಂದೆಯ ವಿರುದ್ಧ ಆರೋಪ ಮಾಡಿರುವ ಅಶ್ವಿನ್ ಶ್ರೀನಿವಾಸನ್, ತನ್ನ ಸಲಿಂಗ ಪ್ರೇಮಿ ಸ್ನೇಹಿತನ ಜೊತೆ ಜೀವನ ಮಾಡಲು ಆಸ್ತಿಯಲ್ಲಿ ತನ್ನ ಪಾಲಿನ ಭಾಗವನ್ನು ಕೇಳಿದೆ. ಆದರೆ ತಮ್ಮ ತಂದೆ ಆಸ್ತಿಯಲ್ಲಿ ಭಾಗ ನೀಡಲು ಮಹಿಳೆಯನ್ನು ವಿವಾಹವಾಗುವಂತೆ ತನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ ಅಲ್ಲದೇ ತನ್ನ ಸಲಿಂಗಿ ಸ್ನೇಹಿತ ಅವಿ ಜೊತೆಗಿನ ಸಂಬಂಧವನ್ನು ಮುರಿದುಕೊಳ್ಳುವಂತೆ ತನಗೆ ಮಾನಸಿಕವಾಗಿ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಅಲ್ಲದೇ ಅಶ್ವಿನ್ ಈಗಾಗಲೇ ಸ್ನೇಹಿತ ಅವಿ ಮುಖರ್ಜಿ ಜೊತೆ ಚೆನ್ನೈನಲ್ಲಿರುವ ತನ್ನ ತಂದೆ ಮನೆ ಪಕ್ಕದಲ್ಲಿಯೇ ವಾಸಿಸುತ್ತಿದ್ದು, ಅವಿ ಜೊತೆಗಿನ ಸಂಬಂಧ ಕಡಿದುಕೊಳ್ಳುವಂತೆ ತನ್ನ ತಂದೆ ಬರೆದ ಪತ್ರವನ್ನು ಅಶ್ವಿನ್ ಬಹಿರಂಗ ಪಡಿಸಿದ್ದು ಈ ಪತ್ರದಲ್ಲಿ ಶ್ರೀನಿವಾಸನ್ ಅವರು ನೀನು ನನಗೆ ಇರುವ ಒಬ್ಬನೆ ಮಗ. ನೀನು ಸಮಾಜದ ಮುಖ್ಯವಾಹಿನಿಯಿಂದ ದೂರ ಸರಿದು ಹಲವು ವರ್ಷಗಳೇ ಕಳೆದಿವೆ. ನನ್ನ ವಂಶದ ಸಂತನಾಭಿವೃದ್ಧಿಗಾಗಿ ನೀನು ಹುಡುಗಿಯೊಬ್ಬಳನ್ನು ಮದುವೆಯಾಗಿ ತಮ್ಮ ವಂಶವನ್ನು ಮುಂದುವರಿಸಲೇಬೇಕು ಎಂದು ಬುದ್ದಿಮಾತು ಹೇಳಿದ್ದಾರೆ ಎನ್ನಲಾಗಿದೆ.
-ಕನ್ನಡ ದುನಿಯಾ