ಮನೋರಂಜನೆ

ಶ್ರೀಸಾಮಾನ್ಯ ರಾಜಕುಮಾರ್‌

Pinterest LinkedIn Tumblr

crec24raj1_0

– ರಘುನಾಥ ಚ.ಹ.
‘ಮೂಳೆ ಮಾಂಸಗಳ ಇಂಥ ಮನುಷ್ಯ ಬದುಕಿದ್ದ ಎನ್ನುವುದನ್ನು ಮುಂದಿನ ತಲೆಮಾರು ನಂಬುವುದೇ ಕಷ್ಟವಾಗುತ್ತದೆ’. ಗಾಂಧಿಯ ಬಗೆಗಿನ ಐನ್‌ಸ್ಟೈನ್‌ ಮಹಾಶಯ ಹೇಳಿದ ಈ ಮಾತನ್ನು ರಾಜಕುಮಾರ್‌ ಮಟ್ಟಿಗೂ ಹೇಳಬಹುದು. ಗಾಂಧಿಯಂತೆ ರಾಜಕುಮಾರ್‌ ದೇಶದ ರಾಜಕಾರಣದ ಚಟುವಟಿಕೆಗಳೊಂದಿಗೆ ಗುರ್ತಿಸಿಕೊಂಡವರಲ್ಲ.

ಗಾಂಧಿ ಬದುಕಿದ ಅಹಿಂಸೆ, ಸತ್ಯಾಗ್ರಹಗಳಂಥ ಜಗತ್ತೇ ಬೆರಗಿನಿಂದ ನೋಡುವ ಜೀವನ ಮಾದರಿಗಳನ್ನೂ ರಾಜಕುಮಾರ್‌ ಪ್ರತಿಪಾದಿಸಲಿಲ್ಲ. ಆದರೆ, ಸಿನಿಮಾ ಪಾತ್ರಗಳ ಮೂಲಕವೇ ರಾಜಕುಮಾರ್‌ ಕನ್ನಡದ ಪ್ರೇಕ್ಷಕರ ಮನಸೂರೆಗೊಂಡುದು ಒಂದು ಐತಿಹಾಸಿಕ ಸಂಗತಿ. ನಟನೆಯಾಚೆಗೆ, ರಾಜಕುಮಾರರ ಸರಳ ವ್ಯಕ್ತಿತ್ವ ಕೂಡ ಜನರಿಗೆ ಮಾದರಿಯಾಗಿ ಕಂಡಿದ್ದೂ ಅಷ್ಟೇ ವಿಶೇಷ.

ರಾಜಕುಮಾರ್‌ ಬಗ್ಗೆ ಯಾರನ್ನು ಮಾತನಾಡಿಸಿದರೂ ದಂತಕಥೆಗಳು ಗಲಗಲನೆಂದು ಉದುರುತ್ತವೆ. ವರ್ಷದಿಂದ ವರ್ಷಕ್ಕೆ ಅವರ ‘ದೇವತಾ ಮನುಷ್ಯ’ನ ಪ್ರಭಾವಳಿ ಗಾಢವಾಗುತ್ತಿರುವುದನ್ನು ನೋಡಿದರೆ, ಮುಂದಿನ ತಲೆಮಾರುಗಳ ಪಾಲಿಗೆ ರಾಜಕುಮಾರ್‌ ಕೂಡ ಒಂದು ಅತಿಮಾನುಷ ವ್ಯಕ್ತಿತ್ವವಾಗಿ ಕಾಣಿಸಿದರೆ ಆಶ್ಚರ್ಯವಿಲ್ಲ.

ನಾವು ಅನುಕರಿಸಲಾಗದ ಅಥವಾ ನಾವು ಬಾಳುತ್ತಿರುವ ಬದುಕಿನ ಬಗ್ಗೆ ತೀವ್ರ ತಕರಾರು ಎತ್ತುವ ವ್ಯಕ್ತಿತ್ವಗಳನ್ನು ದೇವತಾ ಮನುಷ್ಯರನ್ನಾಗಿಸಿ ನಿಸೂರಾಗುವ ಸಾಂಪ್ರದಾಯಿಕ ಜಾಣ್ಮೆ ನಮ್ಮ ತಲೆಮಾರಿಗೂ ಇದೆ. ಈ ಕಾರಣದಿಂದಲೇ ಬುದ್ಧ, ಗಾಂಧಿಯಂಥವರು ಬದುಕುವ ದಾರಿಗಳಾಗದೆ, ಮಾರ್ಗಗಳಲ್ಲಿನ ಮೂರ್ತಿಗಳಾಗುತ್ತಾರೆ. ಈ ಮೂರ್ತೀಕರಣ ಪ್ರಕ್ರಿಯೆ ರಾಜ್‌ ಮಟ್ಟಿಗೆ ಅತ್ಯಂತ ವೇಗವಾಗಿ ನಡೆಯುತ್ತಿದೆ. ಹಾಗೆ ನೋಡಿದರೆ ಇತರ ಮಹಾತ್ಮರಂತೆ ರಾಜಕುಮಾರ್‌ ಜನರಿಗೆ ನೇರವಾಗಿ ನೀತಿಪಾಠ ಹೇಳಿದವರಲ್ಲ. ಅವರು ಕಾಲೇಜಿನಲ್ಲಿ ಕಲಿತವರೂ ಅಲ್ಲ.

ಮನುಷ್ಯನ ಸಂಕಟಗಳಿಗೆ ಉತ್ತರ ಹುಡುಕಿಕೊಂಡು ಇರುಳಿನಲ್ಲಿ ಮನೆ ತೊರೆದವರು ಅವರಲ್ಲ. ಜನಸಾಮಾನ್ಯರಂತೆ ಉಣ್ಣುವುದರಲ್ಲಿ, ತನ್ನ ಕುಟುಂಬ ಹಾಗೂ ನಿಕಟವರ್ತಿಗಳನ್ನು ಪ್ರೀತಿಸುವುದರಲ್ಲಿ ರಾಜಕುಮಾರ್‌ ಸುಖ ಕಾಣುತ್ತಿದ್ದರು. ದೈನಿಕದ ಸಣ್ಣಪುಟ್ಟ ಸಂಗತಿಗಳಲ್ಲಿ ಬದುಕಿನ ಚೆಲುವನ್ನು ಕಾಣುವ ಜೀವನಪ್ರೀತಿ ಅವರದಾಗಿತ್ತು. ರಾಜಕುಮಾರ್‌ ವ್ಯಕ್ತಿತ್ವದಲ್ಲಿನ ಸರಳತೆ ಮತ್ತು ಅಮಾಯಕತೆಯೇ ಅವರ ಬಹುದೊಡ್ಡ ಶಕ್ತಿಯಾಗಿ ಜನರಿಗೆ ಕಾಣಿಸಿತು.

ಸರಳತೆ ಹಾಗೂ ಹಸಿವುಗಳನ್ನು ಗುಣದ ರೂಪದಲ್ಲಿ ನೋಡುತ್ತಲೇ ರಾಜಕುಮಾರ್‌ ವ್ಯಕ್ತಿತ್ವವನ್ನು ವಿಶ್ಲೇಷಿಸಬಹುದು. ಅವರು ನಾಟಕಗಳಿಗೆ ಬಣ್ಣ ಹಚ್ಚಿಕೊಂಡಿದ್ದು, ಸಿನಿಮಾಗಳಲ್ಲಿ ನಟಿಸಲು ಹಂಬಲಿಸಿದ್ದು ನಟನೆಯ ಬಗೆಗಿನ ಹುಚ್ಚಿನಿಂದ ಎನ್ನುವುದು ನಿಜ. ಆದರೆ, ನಟನೆಯ ಹಸಿವಿನಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಹೊಟ್ಟೆಯ ಹಸಿವೆ ಅವರನ್ನು ಕಾಡುತ್ತಿತ್ತು. ಈಡುಗಾಯಿ ಚೂರುಗಳಿಗೆ ಹಂಬಲಿಸುತ್ತಿದ್ದ ಹುಡುಗನ ಹಸಿವನ್ನು ಈ ಹೊತ್ತಿನ ಚಿತ್ರರಂಗದ ನಾಯಕ ನಟರುಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವುದು ಕಷ್ಟ.

ರಾಜಕುಮಾರ್‌ ಮಾತ್ರವಲ್ಲ, ಅವರ ತಲೆಮಾರಿನ ಬಹುತೇಕ ಕಲಾವಿದರು, ತಂತ್ರಜ್ಞರು ನಟನೆಯ ಹಸಿವಿನೊಂದಿಗೆ ಹೊಟ್ಟೆಯ ಹಸಿವನ್ನೂ ಎದುರಿಸಿದರು. ಗುಬ್ಬಿ ಕಂಪನಿಯಲ್ಲಿ ನಾಳೆಗಳ ಬಗ್ಗೆ ಕನಸು ಕಾಣುತ್ತಿದ್ದ ಮುತ್ತುರಾಜನಿಗೆ ಬೆಳ್ಳಿರೇಖೆಯಂತೆ ಒದಗಿಬಂದುದು ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿನ ನಾಯಕ ಪಾತ್ರದ ಅವಕಾಶ. ಕಾಕತಾಳೀಯ ನೋಡಿ: ಈ ಚಿತ್ರದ ನಾಯಕ ದಿನ್ನನಿಗೂ ಹೊಟ್ಟೆಯದೇ ಚಿಂತೆ. ಹಸಿವೆಯನ್ನು ತಾಳಲಾರದೆ, ‘ಶಿವಪ್ಪಾ ಕಾಯೊ ತಂದೆ’ ಎಂದು ದೈವಕ್ಕೆ ಮೊರೆಯಿಡುವ ದಿನ್ನ– ತನ್ನ ಬೇಟೆಯಲ್ಲಿ ಶಿವನಿಗೂ ಪಾಲು ನೀಡುತ್ತಾನೆ.

ಕೊನೆಗೆ, ದೈವದೊಂದಿಗಿನ ಸಲಿಗೆ ಹಾಗೂ ಭಕ್ತಿಯಲ್ಲಿ ತನ್ನ ಕಣ್ಣನ್ನೇ ಕಿತ್ತು ದೇವರ ಕಣ್ಣಿಗೆ ಮದ್ದು ಮಾಡಲು ಪ್ರಯತ್ನಿಸುತ್ತಾನೆ. ಈ ಹಸಿವು ಮತ್ತು ಭಕ್ತಿಯ ಮಹತ್ವವನ್ನು ರಾಜಕುಮಾರರ ಬದುಕಿನಲ್ಲೂ ಕಾಣಬಹುದು. ಹಸಿವಿನಿಂದ ಆರಂಭವಾದ ಬೆಳ್ಳಿತೆರೆಯ ನಂಟು ಭಕ್ತಿಯಾಗಿ ರೂಪಾಂತರಗೊಂಡ ಬೆರಗು ಅವರ ಜೀವನದ್ದು. ಹಸಿವನ್ನು ಅನುಭವಿಸಿದ್ದರಿಂದಲೇ ಊಟದ ಬಗೆಗೆ ರಾಜಕುಮಾರ್‌ ವಿಶೇಷ ಪ್ರೀತಿ ಬೆಳೆಸಿಕೊಳ್ಳಲು ಕಾರಣವಾಗಿರಬೇಕು. ಅವರ ಭೋಜನಪ್ರಿಯತೆಯ ಬಗ್ಗೆ ಅನೇಕ ಕಥೆಗಳಿವೆ.

ಸ್ವತಃ ಒಳ್ಳೆಯ ಊಟಗಾರರಾಗಿದ್ದ ಅವರು, ಗೆಳೆಯರನ್ನು ಮತ್ತು ಇಷ್ಟಪಾತ್ರರನ್ನು ಮನೆಗೆ ಕರೆಸಿ ಸತ್ಕರಿಸುವುದರಲ್ಲಿ ಸುಖ ಕಾಣುತ್ತಿದ್ದರು. ಆದರೆ, ಊಟ ಅವರ ಪಾಲಿಗೆ ಐಷಾರಾಮ ಆಗಿರಲಿಲ್ಲ. ದೈವದ ಸ್ವರೂಪವಾಗಿ ಅವರು ಅನ್ನವನ್ನು ಪರಿಭಾವಿಸುತ್ತಿದ್ದರು. ‘ಬಬ್ರುವಾಹನ’ ಚಿತ್ರದ ಪ್ರಸಂಗವೊಂದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಚಿತ್ರೀಕರಣ ಸಂದರ್ಭದಲ್ಲೊಮ್ಮೆ ಮಧ್ಯಾಹ್ನದ ಊಟಕ್ಕಾಗಿ ಚಿತ್ರತಂಡ ಸಿದ್ಧವಾಯಿತು.

ಹೋಟೆಲ್‌ನಿಂದ ಬಂದಿದ್ದ ಪಾರ್ಸೆಲ್‌ ನೋಡಿದ ನಿರ್ಮಾಪಕ – ನಿರ್ದೇಶಕರಿಗೆ ಗಾಬರಿ! ಅನ್ನ ಕೊಂಚ ಬೆವರಾಡಿದಂತಿತ್ತು. ಇಂಥ ಊಟವನ್ನು ಚಿತ್ರತಂಡಕ್ಕೆ, ಮುಖ್ಯವಾಗಿ ರಾಜಕುಮಾರರಿಗೆ ಬಡಿಸುವುದು ಹೇಗೆ? ನಿರ್ಮಾಪಕ – ನಿರ್ದೇಶಕರ ಮುಜುಗರವನ್ನು ನೋಡಿ ರಾಜಕುಮಾರ್‌ ವಿಷಯ ವಿಚಾರಿಸಿದರು. ‘ಇಷ್ಟಕ್ಕೆಲ್ಲ ಯೋಚಿಸುವುದು ಏಕೆ?’ ಎನ್ನುತ್ತಾ, ತಟ್ಟೆಗೆ ಅನ್ನ ಬಡಿಸಿಕೊಂಡರು. ‘ಇಷ್ಟು ಸೊಗಸಾದ ಊಟ ಎಲ್ಲಿಂದ ತರಿಸಿದಿರಿ…’ ಎಂದು ನಾಲಿಗೆ ಚಪ್ಪರಿಸುತ್ತಾ ಊಟ ಮಾಡತೊಡಗಿದರು. ರಾಜಕುಮಾರರೇ ‘ಊಟ ಚೆನ್ನಾಗಿದೆ’ ಎಂದ ಮೇಲೆ ಉಳಿದವರು ‘ಚೆನ್ನಾಗಿಲ್ಲ’ ಎಂದು ಹೇಳಲು ಸಾಧ್ಯವೆ? ಈ ಗುಣವೇ, ವೀರಪ್ಪನ್‌ ಅತಿಥಿಯಾಗಿ ಕಾಡಿನಲ್ಲಿದ್ದಾಗ ಅವರನ್ನು ಕಾಪಾಡಿರಬೇಕು.

ಅನ್ನದಾತರು ಎಂದು ನಿರ್ಮಾಪಕರನ್ನು, ದೇವರುಗಳು ಎಂದು ಅಭಿಮಾನಿಗಳನ್ನು ರಾಜಕುಮಾರ್‌ ಕರೆದರು. ಅವರ ಮಾತು ತೋರುಗಾಣಿಕೆ ಆಗಿರದೆ ಮನಸ್ಸಿನ ಆಳದಿಂದ ಬಂದುದಾಗಿತ್ತು. ಇತರರ ಪಾಲಿಗೆ ಸರಳತೆ ಎನ್ನುವುದು ಒಂದು ಹೇರಿಕೆಯಾಗಿರುತ್ತದೆ, ಬಹುತೇಕ ಸಂದರ್ಭಗಳಲ್ಲಿ ಅದು ಕೃತಕವೂ ಆಗಿರುತ್ತದೆ. ಆದರೆ, ರಾಜಕುಮಾರ್‌ ಪಾಲಿಗೆ ಈ ಸರಳತೆ ಅವರ ವ್ಯಕ್ತಿತ್ವದ ಸಹಜ ವಿಕಾಸವಾಗಿತ್ತು. ನಟನಾಗಿ ಜನಪ್ರಿಯತೆ ಹೆಚ್ಚುತ್ತಾ ಹೋದಂತೆ ವ್ಯಕ್ತಿಯಾಗಿ ಅವರು ಸರಳವಾಗತೊಡಗಿದರು.

‘ನನಗೇನೂ ತಿಳಿಯದು’ ಎನ್ನುತ್ತಲೇ ಅವರು ಲಕ್ಷಾಂತರ ಅಭಿಮಾನಿಗಳ ಪಾಲಿಗೆ ಆದರ್ಶವಾದರು. ಅವರು ನೇರವಾಗಿ ಏನನ್ನೂ ಬೋಧಿಸದೇ ಹೋದರೂ, ಅವರ ಸಿನಿಮಾಗಳು ನೋಡುಗರ ಪಾಲಿಗೆ ನೀತಿಪಠ್ಯಗಳಾಗಿದ್ದವು. ಯಾರನ್ನೂ ಹೀಗಳೆಯದ, ನೋಯಿಸದ, ತನ್ನನ್ನು ತಾನು ಬಣ್ಣಿಸಿಕೊಳ್ಳದ ರಾಜಕುಮಾರರ ಪಾಲಿಗೆ ಅವರು ಬಾಳಿದ ಬದುಕೇ ಬೋಧಿವೃಕ್ಷ. ಇಂಥ ರಾಜಕುಮಾರ್‌ ಅವರನ್ನು ಕನ್ನಡ ಚಿತ್ರರಂಗದ ಈ ಹೊತ್ತಿನ ಸ್ಥಿತಿಯಲ್ಲಿ ಮತ್ತೆ ಮತ್ತೆ ನೆನಪಿಸಿಕೊಳ್ಳುವುದು ಸಂಭ್ರಮದ ಜೊತೆಗೆ ಒಂದು ಬಗೆಯ ವಿಷಾದವನ್ನೂ ಹುಟ್ಟಿಸುತ್ತದೆ.

ಕಳೆದ ವಾರ, ಮೇಕೆದಾಟುವಿನಲ್ಲಿ ಜಲಾಶಯ ನಿರ್ಮಿಸುವುದಕ್ಕೆ ತಮಿಳುನಾಡು ಸರ್ಕಾರದ ವಿರೋಧವನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ನಡೆಸಿದ ಕರ್ನಾಟಕ ಬಂದ್‌ ನಡೆದಾಗ ರಾಜಕುಮಾರ್ ಕೆಲವರಿಗಾದರೂ ನೆನಪಾಗಿರಬೇಕು. ಈ ಬಂದ್‌ನಲ್ಲಿ ರೆಬೆಲ್‌ ಸ್ಟಾರ್‌ಗಳೂ ಮರಿ ಸ್ಟಾರುಗಳೂ ಸೆಲೆಬ್ರಿಟಿ ಕ್ರಿಕೆಟ್‌ ಧುರೀಣರೂ ಹಾಜರಿರಲಿಲ್ಲ.

‘ಕನ್ನಡ’ ಎನ್ನುವುದು ಸಿನಿಮಾ ವ್ಯಾಪಾರದ ರೂಪದಲ್ಲಷ್ಟೇ ಭಾವಿಸುವ ನಟರುಗಳು ಕನ್ನಡದ ಜನತೆಯಿಂದ ದೂರವಾಗಿದ್ದಾರೆ ಎನ್ನುವುದಕ್ಕೆ ಈ ಬಂದ್‌ ಪ್ರಸಂಗ ಹೊಸ ಉದಾಹರಣೆಯಷ್ಟೇ. ಬಹುಶಃ, ರಾಜ್‌ ಅವರ ಜೊತೆಗೇನೇ ಚಿತ್ರರಂಗಕ್ಕೂ ಕನ್ನಡದ ಜನಮಾನಸಕ್ಕೂ ಇದ್ದ ಭಾವನಾತ್ಮಕ ಹಾಗೂ ನೈತಿಕ ನಂಟು ಕಡಿದುಹೋಯಿತು ಎನ್ನಿಸುತ್ತದೆ. ಈಗ ಉಳಿದಿರುವುದು ಮನರಂಜನಾತ್ಮಕ ಸಂಬಂಧ ಮಾತ್ರ.

Write A Comment